ವಿದ್ಯಾರ್ಥಿನಿಯರನ್ನು ಹೊರಕ್ಕೆ ತಳ್ಳಿ ಗೇಟ್‌ ಹಾಕಿದ್ದ ಕೋಮುದ್ವೇಷಿ ಪ್ರಿನ್ಸಿಪಾಲ್‌ ಗೆ ಪ್ರಶಸ್ತಿ!

Most read

ಕುಂದಾಪುರ: ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಕೋಮು ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡಿದ್ದ ʼಹಿಜಾಬ್‌ ಗಲಭೆಗಳʼ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಹೊರಕ್ಕೆ ತಳ್ಳಿ ಕಾಲೇಜಿನ ಗೇಟ್‌ ಹಾಕಿದ್ದ ಪ್ರಾಂಶುಪಾಲರೊಬ್ಬರಿಗೆ ಕಾಂಗ್ರೆಸ್‌ ಸರ್ಕಾರದಲ್ಲಿ ರಾಜ್ಯ ಮಟ್ಟದ ಪ್ರಾಚಾರ್ಯ ಪ್ರಶಸ್ತಿ ನೀಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ರಾಮಕೃಷ್ಣ ಬಿಜಿ ಎಂಬುವವರಿಗೆ ರಾಜ್ಯಮಟ್ಟದ ಪ್ರಾಚಾರ್ಯ ಪ್ರಶಸ್ತಿ ಘೋಷಣೆಯಾಗಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಅನೇಕ ಅರ್ಹ ಶಿಕ್ಷಕರುಗಳಿಗೆ ಪ್ರಶಸ್ತಿಗಳು ಘೋಷಣೆಯಾಗಿರುವಂತೆಯೇ ಶೈಕ್ಷಣಿಕ ವಾತಾವರಣ ಹದಗೆಡಿಸಿದವರಿಗೂ ಪ್ರಶಸ್ತಿ ನೀಡಲಾಗಿದೆಯೇ ಎಂಬ ಮಾತು ಕೇಳಿಬಂದಿದೆ.

ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂದಿದ್ದ ಹಿಜಾಬ್‌ ಗಲಾಟೆಯು ನಂತರದಲ್ಲಿ ಸಂಘಪರಿವಾರದ ಕಾರ್ಯಕರ್ತರ ಮೂಲಕ ಕುಂಪಾಪುರಕ್ಕೂ ಹರಡಿತ್ತು. ಕುಂದಾಪುರದ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿಗೆ ಬರುವವರೆಗೆ ಹಿಜಾಬ್‌ ಧರಿಸಿಕೊಂಡು ಬಂದು ತರಗತಿ ಪ್ರವೇಶಿಸಿದ ನಂತರ ತೆಗೆದು ಇತರ ವಿದ್ಯಾರ್ಥಿನಿಯರಂತೆ ಕುಳಿತುಕೊಳ್ಳುತ್ತಿದ್ದ ವಿದ್ಯಾರ್ಥಿನಿಯರಿಗೆ ಇದೇ ಪ್ರಾಂಶುಪಾಲ ರಾಮಕೃಷ್ಣ ಬಿಜಿ ಪ್ರವೇಶ ನಿರಾಕರಿಸಿದ್ದರು. ವಿದ್ಯಾರ್ಥಿನಿಯರು ಪರಿಪರಿಯಾಗಿ ಬೇಡಿಕೊಂಡಿದ್ದರೂ ವಾರಗಟ್ಟಲೆ ಗೇಟ್‌ ಹೊರಗೆ ನಿಲ್ಲಿಸಿದ್ದ ಕರುಣಾಜನಕ ದೃಶ್ಯವನ್ನು ಇಡೀ ದೇಶವೇ ಕಂಡಿತ್ತು. ಮುಸ್ಲಿಂ ಹೆಣ್ಣುಮಕ್ಕಳ ಸಂವಿಧಾನಬದ್ಧ ಶಿಕ್ಷಣದ ಹಕ್ಕನ್ನು ವಂಚಿಸುವ ಪ್ರಯತ್ನ ಇದಾಗಿದ್ದು ಹೆಣ್ಣುಮಕ್ಕಳನ್ನು ಗೇಟಿನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದ್ದ ಪ್ರಿನ್ಸಿಪಾಲ್‌ ರಾಮಕೃಷ್ಣ ಬಿಜಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿತ್ತು. ಕನ್ನಡದ ಮೇರು ಕವಿ ಮುದ್ದಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ಶಿವರಾಮ ಕಾರಂತರು ಕಲಿತಂತಹ ಕಾಲೇಜಿಗೆ ಈ ಕೋಮುದ್ವೇಷಿ ಕಳಂಕ ತಂದಿದ್ದರು ಎಂಬ ಅಸಮಧಾನ ವ್ಯಕ್ತವಾಗಿತ್ತು. ಥೇಟ್‌ ಸಂಘಪರಿವಾರದ ಕಾರ್ಯಕರ್ತರಂತೆ ವರ್ತಿಸಿದ್ದ ಈ ಪ್ರಾಂಶುಪಾಲರು ಸಂವಿಧಾನವನ್ನೇ ಅಗೌರವಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಇಂತಹ ಸಂವಿಧಾನ ವಿರೋಧಿ ಮನಸ್ಥಿತಿಯ ಪ್ರಾಂಶುಪಾಲರಿಗೇ ಪ್ರಶಸ್ತಿ ಘೋಷಣೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆಯಲ್ಲದೇ ಇದರ ಹಿಂದಿನ ರೂವಾರಿಗಳು ಯಾರು ಎಂಬ ಪ್ರಶ್ನೆ ಬಂದಿದೆ. ಇದೇ ಹಿಜಾಬ್‌ ಗಲಾಟೆಯನ್ನೇ ಚುನಾವಣಾ ಅಸ್ತ್ರವಾಗಿಸಿಕೊಂಡು ಕಳೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಯಶಪಾಲ್‌ ಸುವರ್ಣ ಅವರೇ ಈ ಪ್ರಶಸ್ತಿಯ ಹಿಂದಿದ್ದಾರೆಯೇ? ಇಂತವರನ್ನು ಆಯ್ಕೆ ಮಾಡುವಾಗ ಮೇಲಧಿಕಾರಗಳು ಹೇಗೆ ಸಮ್ಮತಿ ಸೂಚಿಸಿದರು ಎಂಬ ತಕರಾರು ಕೇಳಿಬಂದಿದೆ.

More articles

Latest article