ಚಿಕ್ಕಬಳ್ಳಾಪುರ: ಜಿಲ್ಲೆಯ ಬಿಜೆಪಿ ಅಧ್ಯಕ್ಷರನ್ನಾಗಿ ಸಂದೀಪ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಂಸದ ಡಾ ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಹೈಕಮಾಂಡ್ ಸಂದೀಪ್ ಅವರ ಆಯ್ಕೆಯನ್ನು ತಡೆ ಹಿಡಿದಿತ್ತು. ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಂದೀಪ್ ರೆಡ್ಡಿ, ಲೋಕಸಭಾ ಸದಸ್ಯ ಸುಧಾಕರ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಅರೋಪಗಳನ್ನು ಮಾಡಿದರು.
ಸುದಾಕರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರೆಡ್ಡಿ, ಅವರು ತನಗೆ ಮಾಡಿದ ಅನ್ಯಾಯಗಳನ್ನು ಇನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ತನಗೂ ಕುಟುಂಬ ಇದೆ. ನಾವೂ ಬದುಕಬೇಕಲ್ಲವೇ ಎಂದರು. ಕೊವಿಡ್ ಸಮಯದಲ್ಲಿ ಜನರು ಸಾಯುತ್ತಿದ್ದರೂ ಆಗ ಸಚಿವರಾಗಿದ್ದ ಸುಧಾಕರ್ ಹಣ ದೋಚಿಕೊಂಡು ಚೆನೈ ಮೂಲದ ಮೈಕ್ರೋ ಫೈನಾನ್ಸ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದಾರೆ. ಈ ವಿಷಯವನ್ನು ತಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳುತ್ತೇನೆ. ಸುಧಾಕರ್ ಸಹ ಪ್ರಮಾಣ ಮಾಡಲಿ ನೋಡೋಣ ಎಂದು ರೆಡ್ಡಿ ಸವಾಲೆಸೆದಿದ್ದಾರೆ.

 
                                    
