ಬಾಗಲಕೋಟೆ: ಬರ ಪರಿಹಾರ ಕೇಳಿದರೆ ‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಟ್ಟು ನಮ್ಮ ಮುಂದೆ ಕೈ ಒಡ್ಡುತ್ತಿದೆ’ ಎಂದು ಕೇಂದ್ರ ವಿತ್ತ ಮಂತ್ರಿ ಹೇಳುತ್ತಾರೆ. ನಾವು ಕೇಂದ್ರದ ಬಳಿ ಭಿಕ್ಷೆ ಕೇಳುತ್ತಿಲ್ಲ. ಕೇಂದ್ರಕ್ಕೆ ರಾಜ್ಯದ ಜನ 4.30 ಸಾವಿರ ಕೋಟಿ ತೆರಿಗೆ ಕಟ್ಟುತ್ತಾರೆ. ಇದರ ಪಾಲು ಕೇಳುತ್ತಿದ್ದೇವೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ಅವರು ಬನಹಟ್ಟಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚಿಸಿ ಮಾತನಾಡಿದರು.
ನಮ್ಮ ರಾಜ್ಯ ಎರಡು ಬಾರಿ ಬರ ಪರಿಸ್ಥಿತಿ ಎದುರಿಸಿದೆ. ಇದಕ್ಕೆ ಪರಿಹಾರ ಕೋರಿ ಸಿಎಂ ಪ್ರಧಾನಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಹೀಗೆ ಮನವಿ ಮಾಡಿದ್ದಕ್ಕೆ ಕೇಂದ್ರ ನಮಗೆ ಕೊಟ್ಟಿದ್ದು ಚೊಂಬು. ಈ ಚುನಾವಣೆ ಸಂಯುಕ್ತ ಪಾಟೀಲ್ ಒಬ್ಬಳ ಚುನಾವಣೆ ಅಲ್ಲ. ರಾಜ್ಯದ ಸ್ವಾಭಿಮಾನಿ ಮಹಿಳೆಯರ ಚುನಾವಣೆ ಎಂದರು.
ಮಾಜಿ ಸಿಎಂ ಒಬ್ರು ಹೇಳ್ತಾರೆ ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆಂದು ನಮ್ಮರಾಜ್ಯದ ಹೆಣ್ಣು ಮಕ್ಕಳು ತ್ಯಾಗ ಜೀವಿಗಳು. ಮಕ್ಕಳು, ಸಮಾಜ, ಮನೆ, ಬಗ್ಗೆ ಯೋಚನೆ ಮಾಡ್ತೇವೆ. ಇವತ್ತು ಹಾಲು, ಮೊಸರು, ಕಾಳುಗಳ ಬೆಲೆ ಏರಿಕೆ ಆಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಕಂಬಳಿ ಹಾರಿಸೋಣ ಎಂದರು.
ಕುಡಚಿ, ಪ್ರವಾಸೋದ್ಯಮ, ಟೆಕ್ಸಟೈಲ್ ಪಾರ್ಕ್, ಕಳಸಾ ಬಂಡೂರಿ ಸಮಸ್ಯೆಗಳ ಧ್ವನಿಯಾಗಿ ದೆಹಲಿಯಲ್ಲಿ ನಿಲ್ಲುತ್ತೇನೆ. ಹೊಸ ಕನಸುಗಳ ಕಟ್ಟಿ ಬಾಗಲಕೋಟೆಗೆ ಬಂದಿದೀನಿ. ನಿಮ್ಮ ಜೀತದಾಳಾಗಿ ದುಡಿದು ನಿಮ್ಮ ಋಣ ತೀರಿಸುತ್ತೇನೆ ಎಂದು ಕೈಮುಗಿದು ಮತ ನೀಡುವಂತೆ ಮನವಿ ಮಾಡಿದರು.