ಬೆಂಗಳೂರು: ಹತ್ತು ಹದಿನೈದು ವರ್ಷ ಪಕ್ಷ ಸಂಘಟನೆ ಮಾಡಿರುವ ಪ್ರೊ. ರಾಜೀವ್ ಗೌಡ ರಾಜ್ಯ ಸಭೆ ಸದಸ್ಯರಾಗಿದ್ದಾಗ ಜನಪರ ಕೆಲಸ ಮಾಡಿದ್ದಾರೆ. ಈಗ ಹೆಚ್ಚಿನ ಮತಗಳಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಜನರ ಸೇವೆ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಭರವಸೆ ಹೇಳಿದರು.
ಇಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಬಂದ ನಮ್ಮ ಪಕ್ಷದ ಸಿದ್ಧಾಂತಗಳು ಎಂದಿಗೂ ಬದಲಾಗುವುದಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ನಮ್ಮ ಪಕ್ಷದ ಹಲವು ಮಹಾತ್ಮರು ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಹೋರಾಟದ ಹಿನ್ನೆಲೆಯ ಕಾಂಗ್ರೆಸ್ ಪಕ್ಷ ಎಂದಿಗೂ ಸುಳ್ಳು ಭರವಸೆ ನೀಡುವುದಿಲ್ಲ. ಚುನಾವಣೆ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಮೂಲಕವೇ ವೋಟ್ ಕೇಳುತ್ತೇವೆ ಎಂದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಪ್ಪು ಹಣ ತಂದು ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಜಮೆ ಮಾಡುತ್ತೇವೆ ಎಂದು ಹೇಳಿತ್ತು. ಆದರೆ ಹಾಕಲಿಲ್ಲ. ನೀಡಿದ ಭರವಸೆಯಂತೆ ರೈತರ ಆದಾಯ ಡಬಲ್ ಮಾಡಲಿಲ್ಲ. 55 ರೂಪಾಯಿ ಇದ್ದ ಪೆಟ್ರೋಲ್ ಬೆಲೆ ಇಂದು 100 ರೂ.ಗೆ ಏರಿ ನಿಂತಿದೆ. 400 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1200 ರೂ. ಆಗಿದೆ. ಹೀಗೆ ಬೆಲೆ ಏರಿಕೆ ಮಾ ಮಾಡುವುದಕ್ಕಾಗಿ ನಾವು ವೋಟ್ ಹಾಕಬೇಕಾ ಎಂದು ಬಿಜೆಪಿಯ ಆಡಳಿತದ ವಿರುದ್ಧ ಹರಿಹಾಯ್ದರು.
ಕ್ಷೇತ್ರದಲ್ಲಿ ಸಂಚಲನ ಉಂಟಾಗಿದೆ. ಆಂತರಿಕ ಮಾಹಿತಿ ಪ್ರಕಾರ ರಾಜೀವ್ ಗೌಡ ಗೆಲುವು ಸಾಧಿಸುತ್ತಾರೆ ಎಂಬ ಮಾಹಿತಿ ಇದೆ. ಐದೂ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಗ್ಯಾರಂಟಿ ನಮಗೆ ಶ್ರೀರಕ್ಷೆ ಆಗಲಿದೆ. ಬಿಜೆಪಿಗೆ ಯಾವ ಘನಕಾರ್ಯಕ್ಕಾಗಿ ವೋಟು ಹಾಕಬೇಕು? ಬಿಜೆಪಿ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎಂದರು.