ಹೊಸ ವರ್ಷಾಚರಣೆಗೆ ಡ್ರಗ್ಸ್ ಮಾರಾಟ; 1.26 ಕೋಟಿ ರೂ. ಮೌಲ್ಯದ 190 ಕೆಜಿ ಗಾಂಜಾ ವಶ

Most read

ಬೆಂಗಳೂರು: ಹೊಸ ವರ್ಷಾಚರಣೆ ಹತ್ತಿರವಾಗುತ್ತಿದ್ದಂತೆ ದೇಶದ ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಿಯಂತ್ರಿಸಲು ಪಣ ತೊಟ್ಟಿರುವ ಪೊಲೀಸರು ಪ್ರತಿದಿನವೂ ಮಾದಕ ವಸ್ತುಗಳ ಜಾಲವನ್ನು ಬೇಧಿಸುತ್ತಲೇ ಇದ್ದಾರೆ. ಗಾಂಜಾ ಮಾರಾಟದ ವಿರುದ್ಧ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ 1.21 ಕೋಟಿ ರೂ ಬೆಲೆ ಬಾಳುವ 190 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಮತ್ತು 11 ಆರೋಪಿಗಳನ್ನು ಬಂಧಿಸಲಾಗಿದೆ.

ಅಶೋಕ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಮನೆಪಲ್ಲೆ ನಿವಾಸಿ ಶ್ರೀಕಾಂತ್, ಮುನಿರಾಜ್, ಚಂದ್ರಕಾಂತ್ ಹಾಗೂ ವಿ.ಬಾಲಕೃಷ್ಣ ಬಂಧಿತ ಆರೋಪಿಗಳು. ಕೊಲೆ ಪ್ರಕರಣದಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಾಲಕೃಷ್ಣನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಲಾಗಿದೆ.

ಆರೋಪಿಗಳಿಂದ 76 ಕೆ.ಜಿ. ಗಾಂಜಾ, ಮೂರು ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಣೆಗೆ ಬಳಸುತ್ತಿದ್ದ ಒಂದು ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ರೂ. 30 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಬನ್ನೇರುಘಟ್ಟದಿಂದ ಹೊಸೂರು ಕಡೆಗೆ ತೆರಳುವ ರಸ್ತೆಯಲ್ಲಿ ಮೂವರು ಆರೋಪಿಗಳು ವಾಹನದಲ್ಲಿ ಕುಳಿತುಕೊಂಡೇ ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬಾಲಕೃಷ್ಣ ಎಂಬಾತ ನೀಡಿದ ಸೂಚನೆ ಮೇರೆಗೆ ಮೂವರು ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣ ಬಳಿಯ ತುನಿ ಗ್ರಾಮದಲ್ಲಿ ಕಡಿಮೆ ಬೆಲೆಗ ಗಾಂಜಾ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಗಾಂಜಾ ಮಾರಾಟ ಮಾಡುತ್ತಿದ್ದ ಜೋನ್ಸ್, ಸ್ಟಾಲಿನ್, ಮರಿಯಾ ಸೆಲ್ವಾ ಎಂಬುವವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 15 ಲಕ್ಷ ಮೌಲ್ಯದ 15 ಕೆ.ಜಿ ಗಾಂಜಾ ಹಾಗೂ ಮೂರು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕನಕದಾಸ ಲೇಔಟ್ ನಲ್ಲಿ ಮನೆ ಬಾಡಿಗೆಗೆ ಪಡೆದು ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆದರಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಯಲಹಂಕ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 93 ಕೆಜಿ ಗಾಂಜಾ, ಟ್ರಕ್, ಇನ್ನೋವಾ ಕಾರು, ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವುಗಳ ಮೌಲ್ಯ 74.52 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಇವರು ಕಾಲೇಜೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಮೂರನೇ ಪ್ರಕರಣದಲ್ಲಿ ಹೊಸ ವರ್ಷಾಚರಣೆಗೆ ಸಂಗ್ರಹಿಸಲಾಗಿದ್ದ 5 ಕೆಜಿ ಗಾಂಜಾವನ್ನು ಅಮೃತಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

More articles

Latest article