ಸಕಲೇಶಪುರ: ಸಕಲೇಶಪುರ ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ ಡಿಸೆಂಬರ್ 13, ಶುಕ್ರವಾರ ನಡೆಯಲಿದೆ. ಶ್ರೀ ಬ್ಯಾಕರವಳ್ಳಿ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ನಡೆಲಿದೆ. ಸಾಹಿತಿ, ರಂಗಕರ್ಮಿ ಪ್ರಸಾದ್ ರಕ್ಷಿದಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 9.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ನಂತರ ಸಮ್ಮೇಳನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಕವಿ ಸುಬ್ಬು ಹೊಲೆಯಾರ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಡಲಿದ್ದಾರೆ. ಸಮಾರಂಭದಲ್ಲಿ ಜ್ಯೋತಿ ರಾಜಕುಮಾರ್, ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಬಿ. ಆರ್. ಗುರುದೇವ್, ಮುರಳಿಮೋಹನ್, ಬಿ.ಡಿ.ಬಸವಣ್ಣ ಎಚ್.ಬಿ.ಮದನ್ ಗೌಡ ಭಾಗವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರು ರಚಿಸಿರುವ ಕೃತಿಗಳ ಬಿಡುಗಡೆಯೂ ನಡೆಯಲಿದೆ.
ಮಧ್ಯಾಹ್ನ ಮಲೆನಾಡಿನ ಜೀವನ ಹಾಗೂ ಸಧ್ಯದ ಸವಾಲುಗಳು ಕುರಿತು ವಿಚಾರಗೋಷ್ಠಿ ನಡೆಯಲಿದೆ. ಯಡಹಳ್ಳಿ ಆರ್.ಮಂಜುನಾಥ್, ಟಿ.ಪಿ.ಸುರೇಂದ್ರ ಮತ್ತು ಮಲ್ನಾಡ್ ಮೆಹಬೂಬ್ ವಿಷಯ ಮಂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಶ್ರಮಿಸಿದ ವಿವಿಧ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮಿಕೊಳ್ಳಲಾಗಿದೆ.
ನಂತರ ನಡೆಯಲಿರುವ ಕವಿಗೋಷ್ಠಿಯಲ್ಲಿ ಕೋರ್ತಿ ಕಿರಣ್ ಕುಮಾರ್, ರಾಮಚಂದ್ರ, ಹಾದಿಗೆ ಜಯಕುಮಾರ್, ಡಯಾನಾ ಡಿಸೋಜಾ, ಪ್ರಮೋದ್ ಮೊದಲಾದವರು ಕಾವ್ಯವಾಚನ ಮಾಡಲಿದ್ದಾರೆ. ಭಾರತಿ ಹಾದಿಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ, ಸಾಮಾಜಿಕ, ವೈದ್ಯಕೀಯ, ರಂಗಭೂಮಿ, ಕಲೆ, ಶಿಕ್ಷಣ, ಸಂಗೀತ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಲಾಗುತ್ತದೆ.
ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಅಣ್ಣಪ್ಪಸ್ವಾಮಿ, ಹೆತ್ತೂರು ನಾಗರಾಜ್, ಪೂರ್ಣಿಮಾ ಸ.ವೆಂ, ಮತ್ತು ಅವರೇಕಾಡು ಪೃಥ್ವಿ ಸಂವಾದ ನಡೆಸಲಿದ್ದಾರೆ. ಸಂಜೆ ಸಮ್ಮೇಳನದ ಸಮಾರೋಪ ನಡೆಯಲಿದ್ದು, ಖ್ಯಾತ ರಂಗಭುಮಿ ಕಲಾವಿದ ನಟ ನಿರ್ದೇಶಕ ಮಂಡ್ಯ ರಮೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ತಾಲ್ಲೂಕು ಕಸಾಪ ಅಧ್ಯಕ್ಷೆ ಶಾರದಗುರುಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.