ಸಕಲೇಶಪುರ ತಾಲ್ಲೂಕು ಕಸಾಪ ಸಮ್ಮೇಳನ ಆರಂಭ; ಸಂವಿಧಾನ, ವಚನ ಸಂಪುಟ ಕುವೆಂಪು ಕೃತಿಗಳ ಮೆರವಣಿಗೆ

Most read

ಸಕಲೇಶಪುರ: ಸಕಲೇಶಪುರ ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಆರಂಭವಾಗಿದೆ. ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸರ್ವೇಸಾಮಾನ್ಯ. ಆದರೆ ಈ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ, ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರು ತಮ್ಮ ಮೆರವಣಿಗೆಯನ್ನು ನಿರಾಕರಿಸಿದ್ದಾರೆ. ಬದಲಾಗಿ ಅವರು ಸಮ್ಮೇಳನದ ರಥದಲ್ಲಿ ತಮ್ಮ ಬದಲಾಗಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾರತದ ಸಂವಿಧಾನ, ವಚನಗಳ ಹರಿಕಾರ ಬಸವಣ್ಣ ಅವರ ವಚನ ಸಂಪುಟ ಮತ್ತು ಕುವೆಂಪು ಅವರ ಕೃತಿಗಳ ಮೆರವಣಿಗೆ ಮಾಡಿ ಮಾದರಿಯಾಗಿದ್ದಾರೆ.

ಇಂದು ಬೆಳಗ್ಗೆ ನಡೆಯಬೇಕಿದ್ದ ಸಮ್ಮೇಳನಾಧ್ಯಕ್ಷರ ಮೆರಣಿಗೆಗೆ ಬದಲಾಗಿ ಸಮ್ಮೇಳನದ ರಥ ಶ್ರೀ ಗಂಗಾ ರಥದಲ್ಲಿ ಈ ಮೇರು ಕೃತಿಗಳ ಮೆರವಣಿಗೆ ನಡೆಸುವ ಮೂಲಕ ದೇಶ ಮತ್ತು ಸಮಾಜದ ಮೇಲಿನ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ. ಈ ಸಕಲೇಶಪುರ ದೇವಸ್ಥಾನದಿಂದ ಬಿಎಂ ರಸ್ತೆ ಮಾರ್ಗವಾಗಿ ಬಸವೇಶ್ವರ ಪ್ರತಿಮೆ ತಿರುವಿನಿಂದ ಸಮಾರಂಭ ನಡೆಯುವ ಶ್ರೀ ಬ್ಯಾಕರವಳ್ಳಿ ಗುರುವೇಗೌಡರ ಕಲ್ಯಾಣ ಮಂಟಪದವರೆಗೆ ಮೇರುಕೃತಿಗಳ ಮೆರವಣಿಗೆ ನಡೆಯಿತು. ನಂತರ ಕಾರ್ಯಕ್ರಮಗಳು ಆರಂಭವಾದವು.

ಸಮ್ಮೇಳನಾಧ್ಯಕ್ಷ ಪ್ರಸಾದ್ ರಕ್ಷಿದಿ ಅವರ ಈ ನಡೆಗೆ ಈಗಾಗಲೇ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅವರ ಸ್ತುತ್ಯಾರ್ಹ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸಮ್ಮೇಳನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದ್ದಾರೆ. ಸಮಾರಂಭದಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆ ವಹಿಸಿದ್ದು, ಖ್ಯಾತ ಕವಿ ಸುಬ್ಬು ಹೊಲೆಯಾರ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಟ್ಟಿದ್ದಾರೆ. ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಕೃತಿಗಳು ಬಿಡುಗಡೆಯಾಗಿವೆ.

ಮಧ್ಯಾಹ್ನ ಮಲೆನಾಡಿನ ಜೀವನ ಹಾಗೂ ಸಧ್ಯದ ಸವಾಲುಗಳು ಕುರಿತು ವಿಚಾರಗೋಷ್ಠಿ ನಡೆಯಲಿದೆ. ಯಡಹಳ್ಳಿ ಆರ್.ಮಂಜುನಾಥ್, ಟಿ.ಪಿ.ಸುರೇಂದ್ರ ಮತ್ತು ಮಲ್ನಾಡ್ ಮೆಹಬೂಬ್ ವಿಷಯ ಮಂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಶ್ರಮಿಸಿದ ವಿವಿಧ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಅಣ್ಣಪ್ಪಸ್ವಾಮಿ, ಹೆತ್ತೂರು ನಾಗರಾಜ್, ಪೂರ್ಣಿಮಾ ಸ.ವೆಂ, ಮತ್ತು ಅವರೇಕಾಡು ಪೃಥ್ವಿ ಸಂವಾದ ನಡೆಸಲಿದ್ದಾರೆ. ಸಂಜೆ ಸಮ್ಮೇಳನದ ಸಮಾರೋಪ ನಡೆಯಲಿದ್ದು, ಖ್ಯಾತ ರಂಗಭುಮಿ ಕಲಾವಿದ ನಟ ನಿರ್ದೇಶಕ ಮಂಡ್ಯ ರಮೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ತಾಲ್ಲೂಕು ಕಸಾಪ ಅಧ್ಯಕ್ಷೆ ಶಾರದಗುರುಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

More articles

Latest article