ಇತ್ತಿಚೆಗೆ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಸಿನಿಮಾಗಳು ಹೆಸರು ಮಾಡುತ್ತಿವೆ. ಕಥೆ ಜನರನ್ನು ಸೆಳೆಯುತ್ತಿದೆ. ಅದರಲ್ಲಿ ಶಾಖಾಹಾರಿ ಸಿನಿಮಾ ಕೂಡ ಒಂದು. ಥಿಯೇಟರ್ ನಲ್ಲಿಯೂ ಹೆಸರು ಮಾಡಿತ್ತು. ಇದೀಗ ಒಟಿಟಿನಲ್ಲೂ ರಿಲೀಸ್ ಆಗಿದ್ದು, ಇಲ್ಲಿಯೂ ದಾಖಲೆ ಬರೆಯುತ್ತಿದೆ. ಕನ್ನಡಿಗರು ಮಾತ್ರವಲ್ಲ ಪರಭಾಷಿಗರು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಭಾರತದಲ್ಲಿ ಸ್ಟ್ರೀಮಿಂಗ್ ಆಗುವುದಕ್ಕೂ ಮುನ್ನವೇ ಶಾಖಾಹಾರಿ ಸಿನಿಮಾ ಹೊರದೇಶದಲ್ಲಿ ಸ್ಟ್ರೀಮಿಂಗ್ ಆಗಿತ್ತು. ಬಳಿಕ ಭಾರತದಲ್ಲಿ ಸ್ಟ್ರೀಮಿಂಗ್ ಆಗಿದೆ. ಅಮೇಜಾನ್ ಪ್ರೈಂಗೆ ಎಂಟ್ರಿ ಕೊಟ್ಟ ಬರೀ ನಾಲ್ಕೇ ದಿನದಲ್ಲಿ 10 ಮಿಲಿಯನ್ ನಿಮಿಷಗಳು ಸ್ಟ್ರೀಮಿಂಗ್ ಆಗಿ ದಾಖಲೆ ಬರೆದಿದೆ.
ಫೆಬ್ರವರಿ 17ರಂದು ಸಿನಿಮಾ ರಿಲೀಸ್ ಆಗಿತ್ತು. ಇದೊಂದು ಹೊಟೇಲ್ ಭಟ್ಟನ ಕಥೆಯಾಗಿದೆ. ತೀರ್ಥಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದೆ. ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣನಿಗೆ ಹಿಂದೆ ಮುಂದೆ ಯಾರೂ ಇರುವುದಿಲ್ಲ. ಹೊಟೇಲ್ ಮಾಲೀಕನಾಗಿರುತ್ತಾನೆ ಸುಬ್ಬಣ್ಣ. ಜೊತೆಗೆ ಬಾಣಸಿಗನಾಗಿಯೂ ಕೆಲಸ ಮಾಡುತ್ತಿರುತ್ತಾನೆ. ಆ ಹೊಟೇಲ್ ನಲ್ಲಿ ನಡೆಯುವ ಕೆಲವೊಂದು ಘಟನೆಯಿಂದಾಗಿ ಹೊಟೇಲ್ ಚಿತ್ರಣವೇ ಬದಲಾಗಿ ಬಿಡುತ್ತದೆ. ಸಾಕಷ್ಟು ಕುತೂಹಲವನ್ನು ಮೂಡಿಸುತ್ತಾ ಸಾಗುತ್ತದೆ.
ಸುಬ್ಬಣ್ಣ ಪಾತ್ರದಲ್ಲಿ ರಂಗಾಯಣ ರಘು ಅವರು ಅದ್ಭುತವಾಗಿ ನಟಿಸಿದ್ದಾರೆ. ಸಂದೀಪ್ ಸುಂಕದ್ ಶಾಖಾಹಾರಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇವರ ಜೊತೆಗೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ, ಪ್ರತಿಭಾ ನಾಯಕ್ ಕಾಣಿಸಿಕೊಂಡಿದ್ದಾರೆ. ಸದ್ಯ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ನೋಡಿದವರು ಛೇ ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡೆವು ಎನ್ನುತ್ತಿದ್ದಾರೆ. ಮಲಯಾಳಂನಲ್ಲಿ ಮಾತ್ರ ಈ ರೀತಿಯ ಸಿನಿಮಾಗಳು ಬರುತ್ತವೆ ಎಂದುಕೊಂಡಿದ್ದೆವು, ಆದರೆ ಕನ್ನಡದಲ್ಲಿಯೂ ಬರುತ್ತಿವೆ ಎಂದು ಎಂಜಾಯ್ ಮಾಡುತ್ತಿದ್ದಾರೆ.