ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್.ಶ್ರೀನಿವಾಸ್ ನಿಧನರಾಗಿದ್ದಾರೆ.
ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದವರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಶ್ರೀನಿವಾಸ್ ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು.
ಶ್ರೀನಿವಾಸ್ ಅವರಿಗೆ 86 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು. ವಕೀಲರಾಗಿ, ಕೃಷಿಕರಾಗಿ ಮತ್ತು ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನೆಮಾದಲ್ಲೂ ಅಭಿನಯಿಸಿದ್ದರು. ಕೆ ಎಚ್. ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ನನ್ನ ತಂದೆ ಕೆ.ಎಚ್. ಶ್ರೀನಿವಾಸ್ ಅವರು ಇನ್ನಿಲ್ಲ. ಅವರು ಇಂದು ಬೆಳಗ್ಗೆ 11 ಗಂಟೆಗೆ ನಮ್ಮ ನಿವಾಸದಲ್ಲಿ ನಿಧನರಾದರು. ಅಪಾರ ದುಃಖದಿಂದ ನನಗಾದ ದೊಡ್ಡ ನಷ್ಟದ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ ಎಂದು ಶ್ರೀನಿವಾಸ್ ಪುತ್ರಿ ವೈಶಾಲಿ ದುಃಖ ಹಂಚಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಗೋಡು ಗ್ರಾಮದಲ್ಲಿ1938ರ ಫೆಬ್ರವರಿ 5ರಂದು ಜನಿಸಿದರು ಕೆ.ಎಚ್.ಶ್ರೀನಿವಾಸ್. ಸಾಗರ, ಶಿವಮೊಗ್ಗದಲ್ಲಿ ಶಿಕ್ಷಣ ಪಡೆದಿದ್ದರು.
ಹೈಕೋರ್ಟ್‌ನಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಹಲವಾರು ಸಾಮಾಜಿಕ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿ ನೇಮಕಗೊಂಡು ಸಾಮಾಜಿಕವಾಗಿ ಗುರುತಿಸಿಕೊಂಡರು ಶ್ರೀನಿವಾಸ್. ಸಾಗರ ತಾಲೂಕು ಮತ್ತು ಸುತ್ತಮುತ್ತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಅಧ್ಯಕ್ಷರಾಗಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
6, 7 ಮತ್ತು 8 ನೇ ವಿಧಾನಸಭೆಯ ಸದಸ್ಯರಾಗಿದ್ದರು. ಸಾಗರ ಹಾಗೂ ಶಿವಮೊಗ್ಗ ಕ್ಷೇತ್ರಗಳಿಂದ ಗೆದ್ದಿದ್ದರು. 1978-80 ರ ಅವಧಿಯಲ್ಲಿ ಅವರು ಮಾಹಿತಿ, ಯುವಜನ ಸೇವೆಗಳು ಮತ್ತು ಇಂಧನ, ಯೋಜನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಇಂಧನ ಮತ್ತು ಮಾಹಿತಿ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದರು.