RSS ನ್ನು ನೇರಾ ನೇರಾ ಟೀಕಿಸುವ ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಮಾಡುವ ಮೂಲಕ ರಾಜೀನಾಮೆ ಕೊಡುವಂತೆ ಮಾಡಬೇಕು ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ವರ್ಚಸ್ಸಿಗೆ ಕಳಂಕ ತರಬೇಕು ಎಂಬುದೇ ರಾಜ್ಯ ಬಿಜೆಪಿ ನಾಯಕರ ಉದ್ದೇಶವಾಗಿದೆ. ಇದಕ್ಕೆ ಕೇಂದ್ರದ ನಾಯಕರ ಬೆಂಬಲವಿದೆ -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ತುಂಬಾ ದಿನಗಳಿಂದ ಒಂದೇ ಒಂದು ಸಾವಿಗಾಗಿ ಕರ್ನಾಟಕದ ಬಿಜೆಪಿಗರು ಕಾಯುತ್ತಿದ್ದರು. ತಮಗೆ ಅನುಕೂಲಕರವಾದ ಸಾವು ಘಟಿಸಿದರೆ ಅದನ್ನೇ ರಾಜಕಾರಣಕ್ಕೆ ಬಳಸುವ ಮೂಲಕ ಜನರ ಅನುಕಂಪವನ್ನು ಗಳಿಸಲು ಯತ್ನಿಸುವ ಶವ ರಾಜಕಾರಣದ ತಂತ್ರಗಾರಿಕೆಯಲ್ಲಿ ಕೇಸರಿ ನಾಯಕರನ್ನು ಮೀರಿಸುವವರಿಲ್ಲ. ಪರೇಶ್ ಮೇಸ್ತಾ ಸಾವಿರಲಿ, ನೇಹಾ ಹಿರೇಮಠರವರ ಹತ್ಯೆ ಇರಲಿ, ಅಧಿಕಾರಿಗಳ ಆತ್ಮಹತ್ಯೆ ಇರಲಿ ಇಂತಹ ಸಾವುಗಳೆಲ್ಲಾ ಅಧಿಕಾರದ ಪಟ್ಟಕ್ಕೆ ಮೆಟ್ಟಿಲುಗಳೆಂದೇ ಬಿಜೆಪಿ ನಿರ್ಧರಿಸಿಯಾಗಿದೆ.
ಕಾಂಗ್ರೆಸ್ ಸರಕಾರ ಅತ್ಯಂತ ಹೆಚ್ಚಿನ ಬಹುಮತ ಪಡೆದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ನಾಯಕರ ಏಕೈಕ ಗುರಿ ಹೇಗಾದರೂ ಮಾಡಿ ಈ ಸರಕಾರವನ್ನು ಬೀಳಿಸುವುದು. ಅದಕ್ಕಾಗಿ ಮಂತ್ರಿಗಳು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಾಯಿಸುತ್ತಲೇ ಇರುವುದು. ಪೂರ್ಣ ಬಹುಮತಕ್ಕಿಂತ ಹೆಚ್ಚಿನ ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್ ಸರಕಾರವನ್ನು ಆಪರೇಶನ್ ಕಮಲದ ಮೂಲಕ ಕೆಳಗಿಳಿಸುವುದು ಅಸಾಧ್ಯವಾಗಿರುವಾಗ ಕಾಂಗ್ರೆಸ್ಸಿನಲ್ಲೇ ಒಡಕು ಹುಟ್ಟಿ ಸರಕಾರ ಬೀಳಬಹುದು ಎನ್ನುವ ನಿರೀಕ್ಷೆ ಹುಸಿಯಾದಾಗ, ಸರಕಾರ ಈಗ ಬೀಳುತ್ತದೆ, ಆಗ ಬೀಳುತ್ತದೆ ಎಂದು ಕೊಡುತ್ತಾ ಬಂದಿರುವ ಗಡುವುಗಳು ನೆರವೇರದೇ ಹೋದಾಗ ಹತಾಶೆಗೆ ಒಳಗಾದ ಬಿಜೆಪಿ ನಾಯಕರುಗಳು ಸರಕಾರದ ಮೇಲೆ ಆರೋಪ ಮಾಡುವುದು ಹಾಗೂ ಸಂಬಂಧಿಸಿದ ಮಂತ್ರಿಗಳ ರಾಜೀನಾಮೆಗೆ ಹೋರಾಟ ಮಾಡುವುದು ನಿರಂತರವಾಗಿದೆ.
ಮುಡಾ ಭೂ ಹಗರಣದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜೀನಾಮೆ ಕೊಡುವಂತೆ ಹೋರಾಟ ಹಾರಾಟ ಶುರುಮಾಡಿದರು. ಆದರೆ ಮುಡಾದಲ್ಲಿ ಹಲವಾರು ಬಿಜೆಪಿ ನಾಯಕರೂ ಫಲಾನುಭವಿಗಳಾಗಿದ್ದರು. ಹಾಗೂ ಮೂಡಾ ಸೈಟ್ ಹಂಚಿಕೆ ಪ್ರಕರಣ ನಡೆದಿದ್ದೂ ಬಿಜೆಪಿ ಸರಕಾರದ ಅವಧಿಯಲ್ಲಾಗಿತ್ತು. ಬಿಜೆಪಿಗರು ಹುಟ್ಟು ಹಾಕಿದ ಮುಡಾ ಪ್ರಕರಣ ಬಿಜೆಪಿಗೆ ಮಾರಕವಾಗುವ ಸಂಭವನೀಯತೆ ಹೆಚ್ಚಾಗಿತ್ತು. ಹೀಗಾಗಿ ಮುಡಾ ಹೋರಾಟ ನೆನೆಗುದಿಗೆ ಬಿತ್ತು. ವಾಲ್ಮೀಕಿ ನಿಗಮದಲ್ಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವರಾಗಿದ್ದ ನಾಗೇಂದ್ರರವರು ರಾಜೀನಾಮೆ ಕೊಟ್ಟಿದ್ದರೂ ಸಿಎಂ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡಬೇಕೆಂದು ಬಿಜೆಪಿ ಗದ್ದಲ ಎಬ್ಬಿಸಿತು. ಯಾವಾಗ ದೇವರಾಜ್ ಅರಸು ಟರ್ಕ್ ಟರ್ಮಿನಲ್ ನಿಗಮದಲ್ಲಾದ ಭ್ರಷ್ಟಾಚಾರದಲ್ಲಿ ಬಿಜೆಪಿಯ ವೀರಣ್ಣ ಸಿಕ್ಕಿ ಹಾಕಿಕೊಂಡು ಜೈಲು ಸೇರಿದರೋ, ಬಿಜೆಪಿ ಸರಕಾರದ ಹಲವಾರು ಹಗರಣಗಳ ಕುರಿತು ಕಾಂಗ್ರೆಸ್ ಸರಕಾರ SIT ರಚಿಸಿ ತನಿಖೆಗೆ ಒಪ್ಪಿಸಿತೋ ಆಗ ಬಿಜೆಪಿಗರು ವಾಲ್ಮೀಕಿ ಹಗರಣ ಕೈಬಿಟ್ಟು ವಕ್ಫ್ ಪ್ರಕರಣಗಳ ಹಿಂದೆ ಬಿದ್ದರು. ಈ ಹೋರಾಟ ಆಳುವ ಪಕ್ಷಕ್ಕೆ ಹಿನ್ನಡೆ ಮಾಡುವ ಬದಲು ಬಿಜೆಪಿ ಪಕ್ಷದ ನಾಯಕತ್ವವನ್ನೇ ಇಬ್ಬಾಗ ಮಾಡಿ ಬಣಗಳನ್ನು ಸೃಷ್ಟಿಸಿತು. ವಕ್ಫ್ ಆಸ್ತಿ ಕುರಿತು ಬಿಜೆಪಿ ಸರಕಾರದ ಅವಧಿಯಲ್ಲೇ ಅತೀ ಹೆಚ್ಚು ನೋಟೀಸು ರೈತರಿಗೆ ಜಾರಿಮಾಡಲಾಗಿತ್ತು ಹಾಗೂ ಹಲವಾರು ರೈತರ ಆರ್ಟಿಸಿ ಯಲ್ಲಿ ವಕ್ಫ್ ಅಸ್ತಿ ಎಂದು ನಮೂದಿಸಲಾಗಿತ್ತು. ಇದರಿಂದಾಗಿ ಯಾವಾಗ ವಕ್ಫ್ ಆಸ್ತಿ ವಿವಾದ ಬಿಜೆಪಿಗರ ಬುಡಕ್ಕೆ ಬರತೊಡಗಿತೋ ಆಗ ವಕ್ಫ್ ಹೋರಾಟ ಕೈಬಿಡಲಾಯ್ತು.
ಬಿಜೆಪಿಗರ ಬತ್ತಳಿಕೆಯಲ್ಲಿರುವ ಅಸ್ತ್ರಗಳೆಲ್ಲಾ ವಿಫಲವಾದಾಗ ಗುತ್ತಿಗೆದಾರನೊಬ್ಬನ ಆತ್ಮಹತ್ಯೆ ಪ್ರಕರಣ ಮುಳುಗುತ್ತಿರುವ ಬಿಜೆಪಿ ಕೈಗೆ ಮತ್ತೊಂದು ಅಸ್ತ್ರ ಸಿಕ್ಕಂತಾಯ್ತು. ಬಹುದಿನಗಳಿಂದ ತಮಗೆ ಅನುಕೂಲಕರವಾದ ಸಾವಿಗಾಗಿ ಹಪಹಪಿಸಿ ಕಾಯುತ್ತಿದ್ದ ಬಿಜೆಪಿ ನಾಯಕರು ಸೂತಕದ ಮನೆಯಲ್ಲಿ ತಮ್ಮ ಶವ ರಾಜಕಾರಣ ಶುರುಮಾಡಿಕೊಂಡರು.
ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಕಟ್ಟಿಲೊವಾಂಗ್ ಗ್ರಾಮದ ಸಚಿನ್ ಪಾಂಚಾಳ್ ಎನ್ನುವ ಯುವಕ ಡಿ.25 ರಂದು ಡೆತ್ ನೋಟ್ ಒಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಡಿ.26 ರಂದು ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದ. ಯಾವಾಗ ಆತ ಬರೆದ ಮರಣ ಪತ್ರದಲ್ಲಿ ಸಚಿವ ಪ್ರಿಯಾಂಕ ಖರ್ಗೆಯವರ ಹೆಸರು ಪ್ರಸ್ತಾಪವಾಗಿದೆ ಎಂದು ಗೊತ್ತಾಯಿತೋ ಬಿಜೆಪಿ ನಾಯಕರಿಗೆ ಹುಮ್ಮಸ್ಸು ಬಂದಂತಾಯಿತು. ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ ಖರ್ಗೆ ಕೂಡಲೇ ರಾಜೀನಾಮೆ ಕೊಡಬೇಕು ಹಾಗೂ ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಿ ಕೊಡಬೇಕು ಎಂದು ಆಗ್ರಹಿಸಿದ ಬಿಜೆಪಿಗರು ಹೋರಾಟಕ್ಕೆ ಮುಂದಾದರು. ಜ.4 ರಂದು ಕಲಬುರ್ಗಿಯ ಪ್ರಿಯಾಂಕ ಖರ್ಗೆಯವರ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನವನ್ನೂ ಮಾಡಿ ತಾತ್ಕಾಲಿಕ ಬಂಧನಕ್ಕೆ ಒಳಗಾದರು.
ಈಗಾಗಲೇ ರಾಜ್ಯ ಸರಕಾರ ಸಚಿನ್ ಆತ್ಮಹತ್ಯೆ ಪ್ರಕರಣ ಕುರಿತ ತನಿಖೆಯನ್ನು ಸಿಐಡಿ ಗೆ ವಹಿಸಲಾಗಿದೆ ಹಾಗೂ ಈ ತನಿಖಾ ಸಂಸ್ಥೆ ಈಗಾಗಲೇ ವಿಚಾರಣೆಯನ್ನೂ ಆರಂಭಿಸಿದೆ. ಆದರೆ ತೀರಿಕೊಂಡ ಸಚಿನ್ ಸಹೋದರಿ ಸುರೇಖಾ ಸಿಬಿಐ ತನಿಖೆಯಾಗಬೇಕು ಹಾಗೂ ರಾಜ್ಯ ಸರಕಾರದ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಬಿಜೆಪಿ ನಾಯಕರೂ ಸಿಬಿಐ ತನಿಖೆ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಬಿಜೆಪಿಗರಿಗೆ ರಾಜ್ಯದ ಯಾವುದೇ ತನಿಖಾ ಸಂಸ್ಥೆಗಳ ಮೇಲೂ ನಂಬಿಕೆ ಇಲ್ಲವಂತೆ. ಎಲ್ಲದಕ್ಕೂ ಕೇಂದ್ರ ಸರಕಾರದ ಆಧೀನದಲ್ಲಿರುವ ಸಿಬಿಐ ಸಂಸ್ಥೆಯೇ ಬೇಕಂತೆ. ಹಾಗಾದರೆ ರಾಜ್ಯದಲ್ಲಿರುವ ಸರಕಾರಿ ತನಿಖಾ ಸಂಸ್ಥೆಗಳನ್ನು ಮುಚ್ಚಿಹಾಕಿ ಎಲ್ಲವನ್ನೂ ಕೇಂದ್ರದ ಸಿಬಿಐಗೆ ವಹಿಸುವುದು ಸೂಕ್ತವೆನಿಸುತ್ತದೆ. ಆದರೆ ಸಿಬಿಐ ಯಾರ ಅಣತಿಯಂತೆ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಸಿಬಿಐ ಪಂಜರದ ಗಿಳಿಯಂತೆ ಕೆಲಸ ಮಾಡಬಾರದು ಎಂದು ಸುಪ್ರಿಂ ಕೋರ್ಟ್ ಚಾಟಿ ಬೀಸಿದೆ. ಪ್ರತಿಪಕ್ಷಗಳ ಭ್ರಷ್ಟಾಚಾರದ ಆರೋಪಿತರು ಬಿಜೆಪಿ ಸೇರಿದರೆ ಇದೇ ಸಿಬಿಐ ಕ್ಲೀನ್ ಚಿಟ್ ಕೊಟ್ಟು ಖುಲಾಸೆ ಮಾಡಿದ ಉದಾಹರಣೆಗಳು ಬೇಕಾದಷ್ಟಿವೆ. ಹೀಗಿರುವಾಗ ಈ ಬಿಜೆಪಿ ಪಕ್ಷದ ಕೈಗೊಂಬೆ ಆಗಿರುವ ಸಿಬಿಐ ಮೇಲೆ ಹೇಗೆ ನಂಬಿಕೆ ಬರಲು ಸಾಧ್ಯ? ಬಿಜೆಪಿಗರ ಒತ್ತಾಸೆಯಂತೆ ಸಿಬಿಐ ತನಿಖೆಗೆ ಪ್ರಕರಣ ವಹಿಸಿಕೊಟ್ಟರೂ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಯಾರಿಗೂ ಇಲ್ಲ.
ಅದಕ್ಕೊಂದು ಉದಾಹರಣೆ ಪರೇಶ್ ಮೇಸ್ತಾ ಸಾವು ಪ್ರಕರಣ. ಕರಾವಳಿ ಕರ್ನಾಟಕದಲ್ಲಿ ಪರೇಶ್ ಎನ್ನುವ ಬಿಜೆಪಿ ಕಾರ್ಯಕರ್ತ ಕೆರೆಗೆ ಬಿದ್ದು ಸಾವನ್ನಪ್ಪಿದ್ದ. ಮುಸ್ಲಿಂ ಯುವಕರಿಂದಾದ ಹತ್ಯೆ ಎಂದು ಕೇಸರಿಗರು ಕರಾವಳಿಗೆ ಬೆಂಕಿ ಹಾಕಿದ್ದರು. ಆ ಬೆಂಕಿಯ ಕಾವಿನಲ್ಲಿ ಬಿಜೆಪಿ ಪಕ್ಷದವರು ಚುನಾವಣೆಯಲ್ಲಿ ಗೆದ್ದು ಬಂದರು. ಮೇಸ್ತಾ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು. ಎಲ್ಲಾ ರೀತಿಯಲ್ಲಿ ತನಿಖೆ ನಡೆಸಿದ ಸಿಬಿಐ, ಪರೇಶ್ ಸಾವು ಕೆರೆಯಲ್ಲಿ ಮುಳುಗಿ ಸತ್ತಿದ್ದರಿಂದಾಗಿದೆಯೇ ಹೊರತು ಯಾರೂ ಹತ್ಯೆ ಮಾಡಿಲ್ಲ ಎಂದು ತನಿಖಾ ವರದಿ ಸಲ್ಲಿಸಿತು. ಆದರೆ ಅಷ್ಟರಲ್ಲೇ ಸಾವನ್ನು ಹತ್ಯೆ ಎಂದು ಹುಯಿಲೆಬ್ಬಿಸಿದ ಬಿಜೆಪಿ ಕೋಮು ಬೆಂಕಿ ಹೊತ್ತಿಸಿ ಚುನಾವಣಾ ಗೆಲುವನ್ನು ಪಡೆದಾಗಿತ್ತು.
ಈಗಲೂ ಅಷ್ಟೇ, ಸಚಿನ್ ಆತ್ಮಹತ್ಯೆ ಪ್ರಕರಣದ ನೆಪದಲ್ಲಿ ಶವ ರಾಜಕಾರಣ ಮಾಡುತ್ತಿರುವ ಬಿಜೆಪಿ ಈಗ ಸಿಬಿಐ ತನಿಖೆಗೆ ಆಗ್ರಹಿಸುತ್ತಿದೆ. ಕೆಲವಾರು ವರ್ಷಗಳ ನಂತರ ತನಿಖಾ ವರದಿ ಬರಬಹುದು. ಅಷ್ಟರಲ್ಲಾಗಲೇ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಕಲಬುರ್ಗಿ ಪ್ರದೇಶದಲ್ಲಿ ರಾಜಕೀಯ ಲಾಭ ಪಡೆಯಬಹುದೆಂಬ ಲೆಕ್ಕಾಚಾರದಲ್ಲಿದೆ. ಬಿಜೆಪಿ ಹಾಗೂ RSS ನ್ನು ನೇರಾ ನೇರಾ ಟೀಕಿಸುವ ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಮಾಡುವ ಮೂಲಕ ರಾಜೀನಾಮೆ ಕೊಡುವಂತೆ ಮಾಡಬೇಕು ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ವರ್ಚಸ್ಸಿಗೆ ಕಳಂಕ ತರಬೇಕು ಎಂಬುದೇ ರಾಜ್ಯ ಬಿಜೆಪಿ ನಾಯಕರ ಉದ್ದೇಶವಾಗಿದೆ. ಇದಕ್ಕೆ ಕೇಂದ್ರದ ನಾಯಕರ ಬೆಂಬಲವಿದೆ.
“ಶಿವಮೊಗ್ಗದ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟಲ್ಲಿ ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪನವರ ಹೆಸರು ಉಲ್ಲೇಖವಾಗಿತ್ತು. ಆಗ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದರು. ಈಗ ಗುತ್ತಿಗೆದಾರ ಸಚಿನ್ ಬರೆದಿರುವ ಡೆತ್ ನೋಟ್ ಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖವಾಗಿದೆ. ಹೀಗಾಗಿ ಸಚಿವರು ರಾಜೀನಾಮೆ ಕೊಡಲೇಬೇಕು” ಎನ್ನುವುದು ಬಿಜೆಪಿ ನಾಯಕರ ವಾದವಾಗಿದೆ. ಬಿಜೆಪಿ ಕಾರ್ಯಕರ್ತನಾಗಿದ್ದ ಸಂತೋಷ್ ಪಾಟೀಲ್ ನೇರವಾಗಿ ಈಶ್ವರಪ್ಪನವರು ಕಮಿಶನ್ ಕೊಡಲು ಒತ್ತಾಯ ಮಾಡಿದರು ಎಂದು ಆರೋಪಿಸಿದ್ದರಿಂದಾಗಿ ಈಶ್ವರಪ್ಪ ರಾಜೀನಾಮೆ ಕೊಡಬೇಕಾಯ್ತು. ಆದರೆ “ಸಚಿನ್ ತನ್ನ ಡೆತ್ ನೋಟ್ ನಲ್ಲಿ ಎಲ್ಲೂ ಪ್ರಿಯಾಂಕ ಖರ್ಗೆಯವರೇ ತನ್ನ ಸಾವಿಗೆ ಕಾರಣ ಎಂದು ಬರೆದಿಲ್ಲ. ಖರ್ಗೆಯವರ ಆಪ್ತ ರಾಜು ಕಪನೂರು ಹಣಕ್ಕಾಗಿ ಪೀಡಿಸಿದ್ದೇ ಸಾವಿಗೆ ಕಾರಣವೆಂದು ಬರೆದಿದ್ದರಿಂದ ಖರ್ಗೆಯವರು ರಾಜೀನಾಮೆ ಕೊಡುವ ಅಗತ್ಯವಿಲ್ಲ” ಎಂಬುದು ಕಾಂಗ್ರೆಸ್ಸಿಗರ ಪ್ರತಿವಾದವಾಗಿದೆ. ಏನೇ ಆದರು ಬಿಜೆಪಿಗರು ಬಿಡ್ತಾ ಇಲ್ಲಾ, ಖರ್ಗೆಯವರು ರಾಜೀನಾಮೆ ಕೊಡ್ತಿಲ್ಲ. ಆತ್ಮಹತ್ಯೆ ಪ್ರಕರಣದ ನೆಪದಲ್ಲಿ ಈ ಎರಡೂ ಪಕ್ಷದವರ “ನೀ ಕೊಡೆ, ನಾ ಬಿಡೆ” ಎನ್ನುವ ಕೆಸರೆರಚಾಟ ಪ್ರಹಸನ ಮುಂದುವರೆದಿದೆ. ಬಿಜೆಪಿಗೆ ಇನ್ನೊಂದು ಪ್ರಕರಣ ಸಿಗುವವರೆಗೂ ಈ ಸಾವಿನ ಮನೆಯ ರಾಜಕಾರಣವೇ ಮುಂದುವರೆಯುತ್ತದೆ. ಆಳುವ ಪಕ್ಷವು ಬಿಜೆಪಿಗರ ಆರೋಪಗಳಿಗೆ ಸಮರ್ಥನೆ ಮಾಡಿ ಕೊಳ್ಳುವುದರಲ್ಲೇ ಸಮಯ ಕಳೆಯುತ್ತಿದೆ. ಆಳುವ ಪಕ್ಷ ಹಾಗೂ ಪ್ರತಿಪಕ್ಷಗಳಿಗೆ ರಾಜ್ಯದ ಅಭಿವೃದ್ದಿ ಹಾಗೂ ಜನಪರ ಕಾಳಜಿ ಇಲ್ಲವಾಗಿದೆ. ಏನೂ ಮಾಡಲಾಗದೆ ಇದೆಲ್ಲವನ್ನೂ ನೋಡುವ ಅಸಹಾಯಕತೆ ಈ ರಾಜ್ಯದ ಜನರದ್ದಾಗಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ನುಡಿ ನಮನ |ಅಗಲಿದ ಸಂಗಾತಿಗಳ ಸಾಲಿಗೆ ಮತ್ತೊಬ್ಬರು…