ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ ಸಭೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆಯಿತು.
ಮಾನವ- ವನ್ಯಜೀವಿ ಸಂಘರ್ಷದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯದ ಪ್ರಾಣಿಗಳಿಗೆ ಸಫಾರಿಯಿಂದ ತೊಂದರೆಗಳಾಗುತ್ತಿದ್ದು, ಕಾಡಿನಿಂದ ಹೊರಗೆ ಬರುತ್ತಿವೆ ಎಂಬ ದೂರುಗಳು ಬಂದಿದ್ದವು. ಈ ಕಾರಣದಿಂದ ಅರಣ್ಯ ಇಲಾಖೆಯಿಂದ ಸಫಾರಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಸಫಾರಿಯನ್ನು ಪುನಃ ಪ್ರಾರಂಭಿಸಲು ಒತ್ತಾಯ ಬರುತ್ತಿರುವುದಾಗಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಸಫಾರಿ ನಿರ್ಬಂಧಿಸಿರುವ ಕಾರಣಕ್ಕೆ ಅದರ ಮೇಲೆ ಅವಲಂಬಿತರಾಗಿರುವ ಸ್ಥಳೀಯರೂ ಸಹ ಉದ್ಯೋಗದಿಂದ ವಂಚಿತರಾಗಿರುವುದಾಗಿ ತಿಳಿಸಿದರು.
ಇದನ್ನು ಆಲಿಸಿದ ಮುಖ್ಯಮಂತ್ರಿಗಳು ಸಫಾರಿಗೆ ಮತ್ತೆ ಅನುಮತಿ ನೀಡುವ ಹಾಗೂ ಅರಣ್ಯ ಪ್ರವಾಸೋದ್ಯಮದಿಂದ ಮತ್ತೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಣಯವನ್ನು ಪುನರ್ ಪರಿಶೀಲಿಸಲು ಪರಿಣಿತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಿ, ಅಭಿಪ್ರಾಯ ಪಡೆಯಲು ಸೂಚಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸಚಿವರುಗಳಾದ ಈಶ್ವರ ಖಂಡ್ರೆ, ಬೈರತಿ ಸುರೇಶ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿ ಅನಿಲ್ ಕುಂಬ್ಳೆ, ಮುಖ್ಯ ವನ್ಯಜೀವಿ ಪರಿಪಾಲಕ ಪಿ. ಸಿ. ರೇ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

