ಅಮಿತ್‌  ಶಾ ಕೈಬಿಡಲು ಉರಿಲಿಂಗಪೆದ್ದಿ ಸ್ವಾಮೀಜಿ ಆಗ್ರಹ

Most read

ಚಾಮರಾಜನಗರ: ಸಂವಿಧಾನಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರನ್ನು ಅಪಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು ಮತ್ತು ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಉರಿಲಿಂಗಿಪೆದ್ದಿ ಮಠದ ಸ್ವಾಮೀಜಿ ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹಪಡಿಸಿದ್ದಾರೆ.

ಡಾ.ಬಿ.ಆರ್ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಚಾಮರಾಜನಗರದಾದ್ಯಂತ ದಲಿತ ಸಂಘಟನೆಗಳು ಮಂಗಳವಾರ ಬಂದ್‌ಗೆ ಕರೆ ನೀಡಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಅವರು  ಅಮಿತ್ ಶಾ ಅವರ ಹೇಳಿಕೆ ರಾಷ್ಟ್ರಕ್ಕೆ ಮಾಡಿರುವ ಅವಮಾನ. ಜ್ವಲಂತ ಸಮಸ್ಯೆಗಳನ್ನು ಕುರಿತು ಮಾತನಾಡುವುದನ್ನು ಬಿಟ್ಟು ಬಾಬಾಸಾಹೇಬ್‌ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಸಚಿವ ಅಮಿತ್ ಶಾ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ಮೋದಿ ಅವರಿಗೆ ಸಂವಿಧಾನದ ಬಗ್ಗೆ ಬಹಳ ಗೌರವದಿಂದ ಮಾತನಾಡುತ್ತಿದ್ದಾರೆ. ಸಂವಿಧಾನಕ್ಕೆ ನಮಸ್ಕಾರವನ್ನೂ ಮಾಡಿದ್ದಾರೆ. ನಮಗೆ ಮೋದಿಯವರ ಬಗ್ಗೆ ಗೌರವವಿದೆ. ಆದರೆ ಅವರ ಸಚಿವ ಸಂಪುಟದಲ್ಲಿ ಅಮಿತ್ ಶಾ ಇರುವುದು ಅಸಹ್ಯ. ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ರಾಷ್ಟ್ರ ಹಾಗೂ ರಾಜ್ಯ ವ್ಯಾಪಿ ಎಲ್ಲ ಸಂಸದರು ಮತ್ತು ಶಾಸಕರ ಕಚೇರಿ ಬಾಗಿಲು ತೆರೆಯಲು ಬಿಡುವುದಿಲ್ಲ. ಬಿಜೆಪಿ ಕಾಂಗ್ರೆಸ್ ಜನತಾದಳದ ಶಾಸಕರು ಮತ್ತು ಸಂಸದರ ಕಚೇರಿ ತೆರೆಯಲು ಬಿಡುವುವದಿಲ್ಲ ಎಂದು ಗುಡುಗಿದರು. ದೇವರು ಬಂದು ನಿಮಗೆ ವೋಟು ಹಾಕಿ ಗೆಲ್ಲಿಸಿಲ್ಲ. ದೇವರು ವೋಟು ಹಾಕಿರುವ ಬಗ್ಗೆ ದಾಖಲೆ ಕೊಟ್ಟರೆ ನಾವೇ ಶಿಕ್ಷೆಗೆ ಒಳಗಾಗುತ್ತೇವೆ ಎಂದು ಸವಾಲು ಹಾಕಿದರು. ಜನರಿಂದ ವೋಟು ಪಡೆದು ಸದನದಲ್ಲಿ ದೇವರು ದೇವರು ಅಂದರೆ ಇದು ಪ್ರಜಾಪ್ರಭುತ್ವವೇ ಎಂದು ಅವರು ಪ್ರಶ್ನಿಸಿದ್ದಾರೆ.

ಇಂದು ಕರೆ ನೀಡಲಾಗಿದ್ದ ಚಾಮರಾಜನಗರ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಬಂದ್‌ಗೆ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಬೆಂಬಲ ಘೋಷಿಸಿದ್ದರು. ಬಂದ್ ಹಿನ್ನೆಲೆ ನಗರದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದ್ದವು. ತಾತ್ಕಾಲಿಕವಾಗಿ ಸಾರಿಗೆ ಸಂಚಾರ ನಿಲ್ಲಿಸಲಾಗಿತ್ತು. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು.

More articles

Latest article