ಶಾಸಕನ ಜವಾಬ್ದಾರಿಗಳು ಮತ್ತು ಸಾಂವಿಧಾನಿಕ ಕರ್ತವ್ಯಗಳು ಹೈಕೋರ್ಟ್ ನಲ್ಲಿ ಚರ್ಚೆಯಾಗಿದ್ದು, ಬಾಲನ್ ವಾದ ಅದನ್ನು ಮುನ್ನಲೆಗೆ ತಂದಿದೆ. ದ್ವೇಷ ಭಾಷಣಗಳು ಕೋಮು ಗಲಭೆ ಮತ್ತು ಮಾಬ್ ಲಿಂಚಿಂಗ್ ಗಳಿಗೆ ಪ್ರೇರೇಪಣೆ ನೀಡಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಆತಂಕ ವ್ಯಕ್ತಪಡಿಸಿದೆ. ಹೀಗಿರುವಾಗ ಹೈಕೋರ್ಟ್ ನಲ್ಲಿ ಮೊದಲ ಬಾರಿ ದ್ವೇಷ ಭಾಷಣ ಮತ್ತು ಶಾಸಕರ ಜವಾಬ್ದಾರಿಗಳ ಚರ್ಚೆ ಹರೀಶ್ ಪೂಂಜಾ ಪ್ರಕರಣದ ಮೂಲಕ ಪ್ರಾರಂಭಗೊಂಡಿದೆ – ನವೀನ್ ಸೂರಿಂಜೆ, ಪತ್ರಕರ್ತರು.
ಹೈಕೋರ್ಟ್ ನಲ್ಲಿ ದಿನವೊಂದಕ್ಕೆ ನೂರಾರು, ಸಾವಿರಾರು ಪ್ರಕರಣಗಳ ವಾದ-ವಿವಾದಗಳು ನಡೆಯುತ್ತವೆ. ಕೆಲವೊಂದು ವಾದಗಳು ಸಂವಿಧಾನದ ಪಾಠದಂತಿದ್ದು, ವಿಶ್ಲೇಷಣೆ ಮತ್ತು ಅಧ್ಯಯನ ಯೋಗ್ಯವಾಗಿರುತ್ತದೆ.
ಶಾಸಕರ ಸಾಂವಿಧಾನಿಕ ಕರ್ತವ್ಯಗಳೇನು ? ಮತ್ತು ಅಂತಹ ಸಾಂವಿಧಾನಿಕ ಮೂಲಭೂತ ಕರ್ತವ್ಯ (Fundamental duties Artical 51A) ಗಳನ್ನು ಉಲ್ಲಂಘಿಸಿದರೆ ಏನು ಮಾಡಬೇಕು ಎಂಬ ಬಗೆಗಿನ ಸಾಂವಿಧಾನಿಕ ಪ್ರಶ್ನೆಗಳನ್ನು ಎಸ್ ಬಾಲನ್ ವಾದ ಮುನ್ನಲೆಗೆ ತಂದಿದೆ.
“ಮುಸ್ಲೀಮರೆಂದರೆ ಕಂತ್ರಿ ಬ್ಯಾರಿಗಳು” ಎಂದಿದ್ದ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾದ ಎಫ್ಐಆರ್ ರದ್ದತಿ ಕೋರಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು. ಹಿರಿಯ ವಕೀಲ ಎಸ್ ಬಾಲನ್ ಅವರು ದೂರುದಾರ ಬಿ ಎಸ್ ಇಬ್ರಾಹಿಂ ಪರವಾಗಿ ವಕಾಲತ್ತು ಹಾಕಿ ವಾದ ಮಂಡಿಸಿದರು. ಎಫ್ಐಆರ್ ರದ್ದತಿ ಕೋರಿದ ಅರ್ಜಿಯು ಮೊದಲ ಬಾರಿ 2025 ಮೇ 08 ರಂದು ವಿಚಾರಣೆಗೆ ಬಂದಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಶ್ರೀಷಾನಂದ ಅವರು, ರದ್ದತಿ ಅರ್ಜಿಯ ಜೊತೆಗೆ ಹಾಕಿದ್ದ ವಿಚಾರಣೆಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ವಜಾ ಗೊಳಿಸಿದ್ದರು. ಹಾಗಾಗಿ ವಿಚಾರಣೆಗೆ ತಡೆಯಾಜ್ಞೆ ಇರಲಿಲ್ಲ. ಪ್ರಕರಣ ಮೇ 20 ಕ್ಕೆ ಮುಂದೂಡಿ ಅರ್ಜಿದಾರ ಬಿ ಎಸ್ ಇಬ್ರಾಹಿಂ ಅವರಿಗೆ ನೋಟಿಸ್ ಜಾರಿ ಮಾಡಿದ್ದರು.
ಮೇ 20 ರಂದು ಹೈಕೋರ್ಟ್ ನ್ಯಾಯಮೂರ್ತಿ ರಾಚಯ್ಯ ಅವರ ರಜಾಕಾಲದ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು. ಬಿ ಎಸ್ ಇಬ್ರಾಹಿಂ ಪರವಾಗಿ ಹಿರಿಯ ಜನಪರ ವಕೀಲ ಎಸ್ ಬಾಲನ್ ಅವರು ಹೈಕೋರ್ಟ್ ನಲ್ಲಿ ವಕಾಲತ್ತು ಹಾಕಿದ್ದರು. ವಿಚಾರಣೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಅಡಿಷನಲ್ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಜಗದೀಶ್ “ಹರೀಶ್ ಪೂಂಜಾ ವಿರುದ್ಧ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಸಲಾಗಿದ್ದು, ಎಫ್ಐಆರ್ ರದ್ದತಿಗೆ ಕೋರಿದ ಅರ್ಜಿಯೇ ಮಾನ್ಯತೆ ಕಳೆದುಕೊಂಡಿದೆ. ಪೊಲೀಸರು ಮತ್ತು ಸರ್ಕಾರ ಸರಿಯಾದ ರೀತಿಯ ಕ್ರಮ ಕೈಗೊಂಡಿದೆ. ದ್ವೇಷ ಭಾಷಣಗಳು ಗಲಭೆಯನ್ನು ಸೃಷ್ಟಿಸುತ್ತಿವೆ. ಹಾಗಾಗಿ ಅರ್ಜಿಯನ್ನೇ ತಿರಸ್ಕೃತಗೊಳಿಸಬೇಕು” ಎಂದು ವಾದಿಸಿದರು. ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವುದರಿಂದ ಪರಿಷ್ಕೃತ ಅರ್ಜಿ ಸಲ್ಲಿಸಿ ಎಂದು ಹರೀಶ್ ಪೂಂಜಾ ಪರ ವಕೀಲರಿಗೆ ಸೂಚಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಕರಣವನ್ನು ಮೇ 22 ಕ್ಕೆ ಮುಂದೂಡಿ ಆದೇಶಿಸಿದರು.
ಈ ಸಂದರ್ಭದಲ್ಲಿ ಮದ್ಯ ಪ್ರವೇಶಿಸಿದ ದೂರುದಾರ ಬಿ ಎಸ್ ಇಬ್ರಾಹಿಂ ಪರ ವಕೀಲ ಎಸ್ ಬಾಲನ್, ಅರ್ಜಿದಾರ ಹರೀಶ್ ಪೂಂಜಾ ಒರ್ವ ಶಾಸಕ. ಜನಪ್ರತಿನಿಧಿಯೊಬ್ಬ ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಶಾಸನ ರಚಿಸುವ ಶಾಸಕನೇ ಸೆಕ್ಷನ್ ಗಳನ್ನು ಉಲ್ಲಂಘಿಸಬಹುದೇ? ಕಾರ್ಯಾಂಗವು ಶಾಸನಗಳನ್ನು ಜಾರಿಗೊಳಿಸುತ್ತಿದೆಯೇ ಎಂದು ಕಣ್ಗಾವಲು ಆಗಬೇಕಿದ್ದ ಶಾಸಕನೇ 144 ಸೆಕ್ಷನ್ ಉಲ್ಲಂಘಿಸಿ ಗಲಭೆಗೆ ಪ್ರಚೋದನೆ ನೀಡಬಹುದೇ ?” ಎಂದು ವಾದದಲ್ಲಿ ಪ್ರಶ್ನಿಸಿದ್ದಾರೆ.
ದೇಶದ ಎಲ್ಲ ಜನರೂ ಸಾಂವಿಧಾನಿಕ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಸಂವಿಧಾನದ ಪರಿಚ್ಛೇದ 51 ಎ ಹೇಳುತ್ತದೆ. ಆದರೆ ಜನರ ಪ್ರತಿನಿಧಿಯಾದವನೇ ಮೂಲಭೂತ ಕರ್ತವ್ಯವನ್ನು ಉಲ್ಲಂಘಿಸಿದರೆ ಸಂವಿಧಾನಕ್ಕೇನು ಅರ್ಥ ಬರುತ್ತದೆ ಎಂಬ ಪ್ರಶ್ನೆಯನ್ನೂ ಬಾಲನ್ ಮುನ್ನಲೆಗೆ ತಂದಿದ್ದಾರೆ.
“ಹರೀಶ್ ಪೂಂಜಾ ಭಾಷಣ ಮಾಡಿದ ತೆಕ್ಕಾರು ದೇವಸ್ಥಾನದ ವೇದಿಕೆಯೇ ಮುಸ್ಲೀಮರ ಜಮೀನಿನಲ್ಲಿ ನಿರ್ಮಾಣವಾಗಿತ್ತು. ತೆಕ್ಕಾರಿನಲ್ಲಿ ಹಿಂದೂ ಮುಸ್ಲೀಮರು ಬಹಳ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾತ್ರೆಗಳನ್ನು ತಮ್ಮದೇ ಮನೆಯ ಹಬ್ಬವೆಂಬಂತೆ ಸಂಭ್ರಮಿಸಿದ್ದಾರೆ. ಇಂತಹ ಸೌಹಾರ್ದತೆಯನ್ನು ರಕ್ಷಿಸುವ ಸಾಂವಿಧಾನಿಕ ಕರ್ತವ್ಯ ಹೊಂದಿರುವ ಶಾಸಕನೊಬ್ಬ ಅದನ್ನು ಹಾಳುಗೆಡವಲು ಯತ್ನಿಸುತ್ತಾನೆ. ಮುಸ್ಲೀಮರು ಬ್ರಹ್ಮಕಲಶೋತ್ಸ ಯಶಸ್ವಿಗೊಳಿಸುವ ಕೆಲಸದಲ್ಲಿ ಮಗ್ನವಾಗಿರುವಾಗಲೇ ಹರೀಶ್ ಪೂಂಜಾ ಅಪ್ರಚೋದಿತ ದಾಳಿ ನಡೆಸುತ್ತಾರೆ. ಕೋಮು ಅಶಾಂತಿ ಇದ್ದಾಗ ಶಾಂತಗೊಳಿಸುವ ಜವಾಬ್ದಾರಿ ಇದ್ದ ಶಾಸಕರು ಶಾಂತಿಯಿಂದ ಇದ್ದ ವಾತಾವರಣವನ್ನು ಕೆಡಿಸುವ ಹುನ್ನಾರ ನಡೆಸುತ್ತಾರೆ. ಇದು ವ್ಯಕ್ತಿಯೊಬ್ಬ ಆತನ Fundamental duties ಅನ್ನು ಉಲ್ಲಂಘಿಸಿದಂತೆ. ಶಾಸಕನೇ ಹೀಗೆ ಮಾಡಿದರೆ ಹೇಗೆ?” ಎಂದು ಎಸ್ ಬಾಲನ್ ಪ್ರಶ್ನಿಸಿದರು.
ಜನಸಾಮಾನ್ಯರು ಕಾನೂನು ಉಲ್ಲಂಘಿಸುವುದಕ್ಕೂ ಶಾಸಕನೊಬ್ಬ ಕಾನೂನು ಉಲ್ಲಂಘಿಸುವುದಕ್ಕೂ ವ್ಯತ್ಯಾಸವಿದೆ. ಆದರೆ ಶಾಸಕನೊಬ್ಬ ಅಪರಾಧವನ್ನು ಪುನರಾವರ್ತಿಸುತ್ತಾನೆ ಎಂದರೆ ನ್ಯಾಯಾಂಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬ ಬಾಲನ್ ವಾದ ಗಮನ ಸೆಳೆಯುತ್ತದೆ.
“ಹರೀಶ್ ಪೂಂಜಾ ವಿರುದ್ಧ ಇದಲ್ಲದೇ ಏಳು ಎಫ್ಐಆರ್ ದಾಖಲಾಗಿದೆ. ಏಳೂ ಎಫ್ಐಆರ್ ಗಳು ಪುನರಾವರ್ತಿತ ಆಪರಾಧವೇ ಆಗಿದೆ. ಎಲ್ಲಾ ಎಫ್ಐಆರ್ ಗಳಲ್ಲೂ ಜಾಮೀನು ತೆಗೆದುಕೊಂಡಿದ್ದಾರೆ. ಅಪರಾಧವನ್ನು ಪುನರಾವರ್ತಿಸಬಾರದು ಎಂಬ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ” ಎಂದು ಬಾಲನ್ ವಾದಿಸಿದರು. ಇದು ಗಂಭೀರವಾದ ವಿಷಯವಾಗಿದೆ. ಯಾವುದೇ ಸಾಮಾನ್ಯ ವ್ಯಕ್ತಿ ಒಂದು ಎಫ್ಐಅರ್ ನಲ್ಲಿ ಜಾಮೀನು ಪಡೆದುಕೊಂಡ ಬಳಿಕ ಮತ್ತೆ ಅದೇ ಅಪರಾಧವನ್ನು ಪುನರಾವರ್ತಿಸಿದರೆ ಅಂತಹ ಸಂದರ್ಭದಲ್ಲಿ ಜಾಮೀನು ನಿರಾಕರಿಸಲ್ಪಡುತ್ತದೆ. ಶಾಸಕ ಪೂಂಜಾ ಏಳು ಎಫ್ಐಆರ್ ಗಳಲ್ಲಿ ಅಪರಾಧ ಪುನರಾವರ್ತಿಸಿ 8 ನೇ ಅಪರಾಧ ಮಾಡಿದ್ದಾರೆ ಎಂದು ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
“ಒರ್ವ ಶಾಸಕನಾಗಿ ಕಾರ್ಯಾಂಗ, ನ್ಯಾಯಾಂಗಕ್ಕೆ ಪೂರಕವಾಗಿ ಬದುಕಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಹರೀಶ್ ಪೂಂಜಾ ಶಿಕ್ಷೆಗೆ ಅರ್ಹವಾದ ವ್ಯಕ್ತಿಯಾಗಿದ್ದಾರೆ. ಹಾಗಾಗಿಯೇ ಕಾರ್ಯಾಂಗದ 144 ಸೆಕ್ಷನ್ ಅನ್ನು ಉಲ್ಲಂಘಿಸುತ್ತಾರೆ. ನೂರು ಕೇಸ್ ಹಾಕಿದರೂ ಹೈಕೋರ್ಟ್ ಅನ್ನೂ ನಾನು ಕೇರ್ ಮಾಡಲ್ಲ ಎಂದು ನ್ಯಾಯಾಂಗವನ್ನೇ ದುರಹಂಕಾರದಿಂದ ಉಲ್ಲೇಖಿಸುತ್ತಾರೆ. ಹಾಗಾಗಿ ಹರೀಶ್ ಪೂಂಜಾನಿಗೆ ನಾಗರಿಕರಿಗೆ ನೀಡುವ ಯಾವ ಕರುಣೆಯನ್ನೂ ನ್ಯಾಯಾಂಗ ನೀಡುವ ಅಗತ್ಯ ಇಲ್ಲ” ಎಂದು ಬಾಲನ್ ವಾದಿಸಿದ್ದಾರೆ.
ಶಾಸಕನ ಜವಾಬ್ದಾರಿಗಳು ಮತ್ತು ಸಾಂವಿಧಾನಿಕ ಕರ್ತವ್ಯಗಳು ಹೈಕೋರ್ಟ್ ನಲ್ಲಿ ಚರ್ಚೆಯಾಗಿದ್ದು, ಬಾಲನ್ ವಾದ ಅದನ್ನು ಮುನ್ನಲೆಗೆ ತಂದಿದೆ. ದ್ವೇಷ ಭಾಷಣಗಳು ಕೋಮು ಗಲಭೆ ಮತ್ತು ಮಾಬ್ ಲಿಂಚಿಂಗ್ ಗಳಿಗೆ ಪ್ರೇರೇಪಣೆ ನೀಡಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಆತಂಕ ವ್ಯಕ್ತಪಡಿಸಿದೆ. ಹೀಗಿರುವಾಗ ಹೈಕೋರ್ಟ್ ನಲ್ಲಿ ಮೊದಲ ಬಾರಿ ದ್ವೇಷ ಭಾಷಣ ಮತ್ತು ಶಾಸಕರ ಜವಾಬ್ದಾರಿಗಳ ಚರ್ಚೆ ಹರೀಶ್ ಪೂಂಜಾ ಪ್ರಕರಣದ ಮೂಲಕ ಪ್ರಾರಂಭಗೊಂಡಿದೆ.
ನವೀನ್ ಸೂರಿಂಜೆ
ಪತ್ರಕರ್ತರು