ಹಳಿಯಾಳ : ರಾಜ್ಯ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿದ ಎಲ್ಲ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಒಂದು ಜನಪರ ಆದರ್ಶ ಸರ್ಕಾರವಾಗಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಅವರು, ಹಳಿಯಾಳದಲ್ಲಿ ನಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ತನ್ನ ಐದೂ ಗ್ಯಾರಂಟಿಗಳನ್ನು ಏಕಕಾಲಕ್ಕೆ ಜಾರಿಗೆ ತರುವ ಅವಶ್ಯಕತೆ ಇರಲಿಲ್ಲ. ಸರಕಾರದ ಮೇಲೆ ಹೆಚ್ಚಿನ ಹೊರೆ ಎನ್ನುವ ಅರಿವಿದ್ದರೂ ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯನವರು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಾತು ಕೊಟ್ಟಂತೆ ಬಡವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಐದೂ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರಕಾರಕ್ಕೆ ವಾರ್ಷಿಕ ಸಾವಿರಾರು ಕೋಟಿ ಹಣ ಖರ್ಚಾದರೂ ಕಳೆದ ಬಿಜೆಪಿ ಅವಧಿಯಲ್ಲಿ ಸಂಕಷ್ಟ ಎದುರಿಸಿದ ಜನರ ಬಾಳಿಗೆ ಬೆಳಕನ್ನು ನೀಡುವ ಈ ಎಲ್ಲ ಯೋಜನೆಗಳ ಜಾರಿಗೆ ಅವರು ಶ್ರಮ ವಹಿಸಿದ್ದಾರೆ.
ಕೊಟ್ಟ ಭರವಸೆಯಂತೆ ನಡೆದ ಕಾಂಗ್ರೆಸ್ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಾದರೆ ಲೋಕಸಭಾ ಕ್ಷೇತ್ರದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಬೆಂಬಲ ಅತ್ಯವಶ್ಯಕವಾಗಿದೆ. ಗ್ಯಾರಂಟಿ ಯೋಜನೆಯ ಲಾಭ ಪಡೆದ ಎಲ್ಲರೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.