ದಾವಣಗೆರೆ : ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಡಾಲರ್ ಬೆಲೆ ಹೆಚ್ಚುತ್ತಿದ್ದು, ರೂಪಾಯಿಯ ಮೌಲ್ಯ ಕುಸಿಯುತ್ತಿದೆ. ಅವರು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಅವರ ಅಚ್ಛೇ ದಿನಗಳು ಬರಲೇ ಇಲ್ಲ. ರೈತರ ಆದಾಯ ದುಪ್ಪಟ್ಟು, 2 ಕೋಟಿ ಉದ್ಯೋಗ, 15 ಲಕ್ಷ ಖಾತೆಗೆ ಹಣ ಎಂದಿದ್ದರೂ, ಒಂದು ಭರವಸೆಯನ್ನು ಈಡೇರಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಸಮರ್ಥ್ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತಪಟ್ಟಿಗಳನ್ನು ವ್ಯತ್ಯಾಸಗೊಳಿಸುವ ಅಧಿಕಾರ ಕೇಂದ್ರಸರ್ಕಾರದ ಅಧೀನದಲ್ಲಿರುವ ಕೇಂದ್ರ ಚುನಾವಣಾ ಆಯೋಗಕ್ಕೆ ಸೇರಿದೆ. ಇಂತಹ ಕೃತ್ಯಗಳಲ್ಲಿ ಕಾಂಗ್ರೆಸ್ ಎಂದಿಗೂ ಒಳಗೊಂಡಿಲ್ಲ. ಹಿಂದೆ ಎಂದಿಗೂ ಇರದಿದ್ದ ಮತಗಳವು ವಿಷಯ, ಪ್ರಧಾನಿ ಮೋದಿಯವರ ಅವಧಿಯಲ್ಲಿ ಕೇಳಿಬರುತ್ತಿದೆ ಎಂದರು.
ಉಪ ಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಅಂತರದ ಗೆಲುವು ಸಾಧಿಸುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಹಾಗೂ ಬಾಗಲಕೋಟೆಯಲ್ಲಿ ಎಚ್.ವೈ.ಮೇಟಿ ಅವರ ತಮ್ಮತಮ್ಮ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ನೆರವಿಗೆ ಬಂದಿವೆ ಎಂದರು.
ಬಿಜೆಪಿಯವರು ಬಡವರ ಯೋಜನೆಗಳಾದ ಗ್ಯಾರಂಟಿಗಳನ್ನು ವಿರೋಧಿಸುತ್ತಾರೆ. ಒಟ್ಟು ಗ್ಯಾರಂಟಿ ಯೋಜನೆಗೆ ಸುಮಾರು 1,31,000 ಕೋಟಿ ರೂ.ಗಳನ್ನು ನಾವು ವ್ಯಯ ಮಾಡಿ ಜನ ಸಾಮಾನ್ಯರ ಬದುಕಿಗೆ ಅರ್ಪಿಸಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರ ಒಂದರಲ್ಲಿ 535 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಬಿಜೆಪಿಯವರು ರಾಜ್ಯದಲ್ಲಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ, ದಾವಣಗೆರೆ, ಬಾಗಲಕೋಟೆಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಅನುದಾನವನ್ನು ಜಿಲ್ಲೆಗಳಿಗೆ ನೀಡಲಿದೆ. ಬಿಜೆಪಿಯವರ ಅಪಪ್ರಚಾರದ ನಡುವೆಯೂ ಹಿಂದೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತವನ್ನು ಸಾಧಿಸಿತ್ತು. ಮಾಜಿ ಮುಖ್ಯಮಂತ್ರಿಗಳ ಪುತ್ರರು ನಿಂತಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು ಎಂದರು.
ಬಿಜೆಪಿ ಅವಧಿಯಲ್ಲಿ ಹೆಚ್ಚು ಸಾಲ : ಬಿಜೆಪಿಯವರು ಗ್ಯಾರಂಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ, ಖಜಾನೆ ಖಾಲಿಯಾಗುತ್ತದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೆ ಜನರ ಖಾತೆಗೆ ನೇರವಾಗಿ ಹಣ ತಲುಪುದರಿಂದ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಅಂದರೆ 2023ರ ಮಾರ್ಚ್ ವರೆಗೆ 530000 ಕೋಟಿಗೂ ಹೆಚ್ಚು ಸಾಲ ಮಾಡಿದ್ದರೆ, ನಮ್ಮ ಕಾಂಗ್ರೆಸ್ ಸರ್ಕಾರ, ಕಳೆದ ನಾಲ್ಕು ವರ್ಷದಲ್ಲಿ 256000 ಕೋಟಿ ರೂ. ಸಾಲ ಮಾಡಿದೆ. ಅಂತೆಯೇ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ದೇಶದ ಮೇಲೆ 53.11 ಲಕ್ಷ ಕೋಟಿ ಸಾಲವಿತ್ತು. ಈಗ 218 ಲಕ್ಷ ಕೋಟಿ ಸಾಲವಿದೆ, ಅಂದರೆ ಪ್ರಧಾನಿ ಮೋದಿಯವರ 12 ವರ್ಷದ ಅಧಿಕಾರದ ಅವಧಿಯಲ್ಲಿ 165 ಲಕ್ಷ ಕೋಟಿಯಷ್ಟು ಸಾಲ ಮಾಡಿದ್ದಾರೆ. ಈ ಸಂಖ್ಯೆಯು ಬಿಜೆಪಿ ಸರ್ಕಾರ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೆಚ್ಚು ಸಾಲ ಮಾಡಿದೆ ಎಂಬುದನ್ನು ಸೂಚಿಸುತ್ತದೆ ಎಂದರು.
ಅಧಿವೇಶನದಲ್ಲಿ ಬಜೆಟ್ ಬಗ್ಗೆ ವಿಸ್ತೃತ ಚರ್ಚೆಗಳಾಗಿದ್ದು, ಈಗಾಗಲೇ ಸುದೀರ್ಘ ಉತ್ತರವನ್ನೂ ನೀಡಲಾಗಿದೆ. ದೇಶದ ಜಿಡಿಪಿಯು 7.14 ರಷ್ಟಿದ್ದರೆ, ರಾಜ್ಯದ ಜಿಡಿಪಿ 8.1 ರಷ್ಟಿದೆ. ರಾಜ್ಯದ ಬಜೆಟ್ನ ಗಾತ್ರ ಈ ಬಾರಿ ಕಳೆದ ವರ್ಷಕ್ಕಿಂತ 9.4 ರಷ್ಟು ಹೆಚ್ಚಿದೆ. ಕೇಂದ್ರ ಬಜೆಟ್ ಗಿಂತ ಕರ್ನಾಟಕದ ಬಜೆಟ್ ಉತ್ತಮವಾಗಿದೆ. ರಾಜ್ಯ ಜಿಎಸ್ಟಿ ಸಂಗ್ರಹಣೆಯಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ, ಬಂಡವಾಳ ಹೂಡಿಕೆಯಲ್ಲಿಯೂ ರಾಜ್ಯ 2 ನೇ ಸ್ಥಾನದಲ್ಲಿದೆ. ಆದಾಗ್ಯೂ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಶ್ವೇತಪತ್ರ ಹೊರಡಿಸುವ ಅವಶ್ಯಕತೆ ಇಲ್ಲ ಎಂದರು.
ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ : ಬಿಜೆಪಿಯವರ ಪ್ರಣಾಳಿಕೆಯಲ್ಲಿ ಸರ್ಕಾರದ ಬೆಲೆಏರಿಕೆಯನ್ನು ಟೀಕಿಸಲಾಗಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಎಲ್ಪಿಜಿ ಸಿಲಿಂಡರ್ ಗೆ 414 ರೂ. ಇದ್ದದ್ದು , ಪ್ರಧಾನಿ ಮೋದಿಯವರು ಬಂದ ನಂತರ ಈಗ ಸುಮಾರು 1ಸಾವಿರ ರೂ. ತಲುಪಿದೆ. ಅಂತೆಯೇ ಪೆಟ್ರೋಲ್, ಡೀಸೆಲ್ ದರವನ್ನೂ ಕೇಂದ್ರ ಸರ್ಕಾರ ಹೆಚ್ಚಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೆಲೆ ಏರಿಕೆಯನ್ನು ಹೋಲಿಸಿದರೆ, ರಾಜ್ಯದಲ್ಲಿ ಗಣನೀಯವಾಗಿ ಬೆಲೆಗಳು ಕಡಿಮಿಯಿದೆ. ಆದ್ದರಿಂದ ಕರ್ನಾಟಕದ ಹಣಕಾಸಿನ ಸ್ಥಿತಿ ಸುಭದ್ರವಾಗಿದ್ದು, ಬಿಜೆಪಿಯವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.

