ಅವರನ್ನು ಕಳೆದುಕೊಳ್ಳುವುದು ಎಂದರೆ ಸ್ವರಗಳೇ ಇಲ್ಲದೆ ಬದುಕುವುದು..

Most read

ಶಾಸ್ತ್ರೀಯ ಸಂಗೀತ ಅಥವಾ ಯಾವುದೇ  ಶಾಸ್ತ್ರೀಯ ಎನ್ನುವ  ಕ್ಷೇತ್ರದಲ್ಲಿ ತಲೆ ಕಿತ್ತೋಗೋವಂಥ ಆಚರಣೆಗಳನ್ನು ರಚಿಸಿ ಒಬ್ಬ ಗುರು ತನ್ನ ಶಿಷ್ಯರ ಜೊತೆ ಒಂದು ರೀತಿ ಆಜ್ಞಾಕಾರಿ ಅಧಿಕಾರಿಯಂತೆ ನಡೆದುಕೊಳ್ಳುವುದೇ ಹೆಚ್ಚು. ಅದರ ಜೊತೆಗೆ “ಗುರು ಸೇವೆ” ಎಂಬ ಫ್ಯೂಡಲ್ ವ್ಯವಸ್ಥೆಯ ಆಚಾರಗಳು…. ಕಂಡ ಕಲಾಕಾರರಿಗೆಲ್ಲಾ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳಬೇಕು. ಅವರ ಜೊತೆ ಅತೀ ವಿನಮ್ರವಾಗಿ ನಡೆದುಕೊಳ್ಳಬೇಕು. ಅವರು ಕೇಳದೇ ಕೊಡುವ ಸಲಹೆಗಳು, ಅವರ ಸುತ್ತಲಿರುವ ಮರಿ ಉಸ್ತಾದರು ಪಂಡಿತರು ಅವರನ್ನು ಹೊಗಳೀ ಹೊಗಳೀ ಹೊನ್ನ ಕಲಶಕ್ಕೇರಿಸಿ, ಅವರು ಹೂಸೂ ಸಿಂಹ ಗರ್ಜನೆ ಎಂಬಂತೆ ಮಾತನಾಡುವ ಭಕ್ತ ವೃಂದದ ಅತಿರೇಕಗಳನ್ನು ಕೇಳಿದರೆ, ಮೈಯೊಳಗೆ ಇರುವ ಎಲ್ಲಾ ಅಂಗಗಳೂ ಅಲ್ಲೇ ಸುತ್ತಿ ತಿರುಗಿ ಗ್ರೈಂಡರ್ ತರ ಅನಿಸುತ್ತದೆ ಹೊಟ್ಟೆಯೊಳಗೆ.

ರಾಜೀವ್ ತಾರಾನಾಥರಾಗಲೀ ರಾಮರಾವ್ ನಾಯಕರಾಗಲೀ ಇಂತಹ ಆಚಾರಗಳಿಗೆ ಸಿಕ್ಕಿಕೊಂಡವರೇ ಅಲ್ಲ. ಎಲ್ಲೋ ಒಂದು ಪ್ರಾಕ್ಟಿಕಲ್ ದೃಷ್ಟಿ ಇತ್ತು. ತಾನ್ಸೇನ ಹಾಡಿ ಮಳೆ ಬರೆಸಿದ, ಕಲ್ಲು ಕರಗಿಸಿದ, ದೀಪ ಹಚ್ಚಿದ ಎಂಬ ದಂತ ಕಥೆಗಳನ್ನು ರಾಮರಾಯರು ಹೇಳೋರು, “ಈ ತರ ಅವರ ಬಗ್ಗೆ ಪ್ರಚಾರ ಮಾಡಿಲ್ಲಾ ಅಂದ್ರೆ ಆ ಮನುಷ್ಯನ ಹೆಸರು ಇತಿಹಾಸದಲ್ಲೇ ಇರುತ್ತಿರಲಿಲ್ಲ” ಈ ರೀತಿಯ ವಿವೇಚನೆ ಹಳೆಯ ತಲೆಮಾರಿನ ಜನಕ್ಕೆ ಇರುವುದು ಬಹಳ ಅಪರೂಪ.

ಒಮ್ಮೆ ಹೀಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ರಾಜೀವರನ್ನು ಸಂದರ್ಶನ ಮಾಡಲು ಹೇಳಿದರು. ನಾನು ಅವರನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೆ ಮತ್ತು ಅವರ ಬಗ್ಗೆ ತಿಳಿಯದೆಯೇ ಅವರ ಮುಂದೆ ಹಲವಾರು ಸಲ ಹಾಡಿದ್ದೆ. ಆದರೆ ಅವರ ಬಗ್ಗೆ ತಿಳಿದ ಮೇಲೆ, ಅವರ ಸಂಗೀತ ಕೇಳಿದ ಮೇಲಂತೂ ಅವರನ್ನು ನೋಡೋದಂದ್ರೆ ನನಗೆ ಯಾವಾಗಲೂ ಭಯ. ಸಂದರ್ಶನ ಮಾಡಲು ಅವರ ಮನೆಗೆ ಹೋದಾಗ ಅವರು ಕೇಳಿದರು “ಹಾ! ನನ್ನ ಅಮ್ಮನ ಹೆಸರು ನಿನಗೆ, ಬಾಮ್ಮ ತಾಯೇ, ಏನು ಓದ್ತಾ ಇದ್ಯ” ಎಂದರು. ನಾನಾಗ ಬಿಎ 2ನೇ ವರ್ಷದಲ್ಲಿದ್ದೆ. ಆದರೆ  ಅವರನ್ನು ನೋಡಿದ ಭಯದಲ್ಲಿ ಎರಡನೇ ಪಿಯು ಎಂದೆ. ತಕ್ಷಣ ಅಲ್ಲ ಅಲ್ಲ ಸೆಕೆಂಡ್‌ ಈಯರ್‌  ಬಿಎ ಎಂದೆ. ಅವರ ಜೋರಾದ ರಾಕ್ಷಸ ನಗು ನನ್ನನ್ನ ಇನ್ನಷ್ಟು ಹೆದರಿಸಿತು. ಆಗ ಇಂಗ್ಲೀಷ್ ನಲ್ಲಿ ಹೇಳಿದರು “ಬೀ ಕಂಫರ್ಟಬಲ್ ಡೋಂಟ್ ಬಿ ಕ್ಲಂಸಿ, ಐ ನೋ ಯು ಆರ್ ಎ ಗುಡ್ ಸಿಂಗರ್, ಐ ವೋಂಟ್ ಈಟ್ ಯೂ” ಅಂದರು. ಆ ಮೇಲೆ ಮಹಾ ಹರಟೆ ಸೆಷನ್ ಆಯ್ತು.

ಇದೇ ತರ ಇನ್ನೊಬ್ಬರು  ಸಂಗೀತಗಾರರನ್ನು ಭೇಟಿ ಮಾಡಿ ಚರ್ಚೆ ಮಾಡಲು ಹೋದಾಗ ಅವರು ಅವರ ‘ಸಂಗೀತ’ ಕೊಠಡಿಯಲ್ಲಿ ಕೂತಿದ್ದರು. ಎಲ್ಲಾ ಕೈ ಸನ್ನೆಯಲ್ಲೆ…. ಕೂತ್ಕೋ ಅಂದ್ರು.  ಅರ್ಧ ಗಂಟೆ ಮೌನ. ನನಗೆ ತುಂಬಾ ಮುಜುಗರ ಆಯ್ತು. ಆಮೇಲೆ “ಏನ್ ಬಂದಿದ್ದು” ಎಂದು ಅವರು ಕೇಳಿದ ರೀತಿಯಿಂದಾಗಿ  ನನಗೆ ಎದ್ದು ಓಡಬೇಕನ್ನಿಸಿತು. ಆಗ ನಾನು ರಾಗ ಕಲ್ಯಾಣಿಯ ಬಗ್ಗೆ ಸಂಶೋಧನೆ ಮಾಡುತ್ತಿದ್ದೆ. ನಾನು ‘ಕಲ್ಯಾಣಿ’ ಅಂದದ್ದೆ ತಡ ಇಂಥಾ ಮೇಳಕರ್ತ, ಇಂಥಾ ಜಾತಿ…. ಎಂದೆಲ್ಲಾ ಹೇಳಿ ಕಡೆಗೆ ಹೇಳಿದರು, “ಈ ರಾಗ ಮ್ಲೇಚ್ಛ ರಾಗ ಅಂದ್ರೆ ಬ್ರಾಹ್ಮಣ ರಾಗವಲ್ಲ. ಈ ರಾಗ ನಮ್ಮ ದೇಶದ್ದಲ್ಲ. ಈ ರಾಗ ಶೃತಿ ಪ್ರಬಂಧ ಹಾಡಲು ಲಾಯಕ್ಕಿಲ್ಲ”  ಎಂದು  ಹೇಳಿ ಈ ರಾಗವನ್ನು ಬಹಿಷ್ಕರಿಸಿದ್ದರು. ಕೇಳಿದ ಕೂಡಲೆ ಮೈಯೆಲ್ಲ ಉರೀತು. ಬ್ರಾಹ್ಮಣರ ಬುದ್ಧಿಗೆ ಏನು ಹೇಳೋದು? ಇವರು ರಾಗಗಳಲ್ಲೂ ಜಾತಿ ವ್ಯವಸ್ಥೆಯನ್ನು ತರುತ್ತಾರೆ. ಇವರ ಸಂಗೀತ ಕಿತ್ತೋಗ, ಇವರ ಬ್ರಾಹ್ಮಣ ರಾಗಗಳು ಉರ್ದೋಗ ಎಂದು ಬೈಕೊಂಡ್ ಬಂದೆ.

ನನ್ನ ಮೇಷ್ಟ್ರು ಮಾಧ್ವ ಬ್ರಾಹ್ಮಣರಾಗಿದ್ದೂ 17 ವರ್ಷ ಉಸ್ತಾದ್ ಆತ್ತಾ ಹುಸೇನ್ ಖಾನರ ಮನೆಯಲ್ಲಿದ್ದು ಗುರು ಸೇವೆ ಮಾಡಿ ಸಂಗೀತ ಕಲಿತವರು. ಈ ವಿಷಯ ಅವರ ಹತ್ತಿರ ಹೇಳಿದಾಗ ಅವರು “ಇವರ ಬ್ರಾಹ್ಮಣಿಕೆಗೆ ಬೆಂಕಿಹಾಕಾ” ಅಂತ ಶಪಿಸುತ್ತಾ “ಅಲ್ಲಾ ಒಂದಿಡೀ ಜನ್ಮ ಸಾಲದು ಈ ರಾಗವನ್ನು ತಿಳಿದುಕೊಳ್ಳಲು, ಇವರಿಗೆ ಇದು ಮ್ಲೇಚ್ಛವಂತೆ ಥೋ” ಅಂದರು.

ತಮಿಳುನಾಡಿನಿಂದ ಒಬ್ಬ ಹೆಸರಾಂತ ವಯಲಿನ್ ವಾದಕರು ಅವರ ಶಿಷ್ಯ ವೃಂದದೊಂದಿಗೆ ಹೆಚ್ಚಿನ ಅಭ್ಯಾಸ ಮಾಡಲು ಜಾಗ ಸಿಗುತ್ತದೆಂದು ನಮ್ಮ ಮನೆಗೆ ಬಂದರು. ಆಗ ಅಂದರೆ ಸುಮಾರು 1986-87 ರಲ್ಲಿ ನಾವು ಕೋರ್ಟ್ ಕೇಸಿನಲ್ಲಿ ಇದ್ದ ರೆಂಟ್ ಕಂಟ್ರೋಲ್ ನಿಂದ ಸಿಕ್ಕ  ಒಂದು ದೊಡ್ಡ ಮನೆಯಲ್ಲಿ ಅತೀ ಕಡಿಮೆ ಬಾಡಿಗೆ ಕೊಟ್ಟು ಇದ್ವಿ. ನನಗೆ ನನ್ನ ಅಭ್ಯಾಸವೂ ಮಾಡಬೇಕಿತ್ತು. ಎಲ್ಲರ ಬಲವಂತಕ್ಕೆ ನಾನೂ ಆ ಅಭ್ಯಾಸದ ಸೆಷನ್ನಲ್ಲಿ ಕಲಿಯಲು ಕೂತೆ. ಅವರು ನನ್ನನ್ನೂ ಹಾಡಿಸಿ ತಮ್ಮ ಶಿಷ್ಯರಿಗೆ ಏನೇನೋ ವಿವರಗಳನ್ನು ಕೊಡುತ್ತಿದ್ದರು. ನಾನು ಹೇಗಿದ್ದರೂ ಆಡ್ ಮ್ಯಾನ್ ಔಟ್. ಆ ವಿದ್ವಾಂಸರು ನನ್ನ ಕೇಳಿದರು “ನಿನಗೆ ಯಾವ ವಾದ್ಯ ಇಷ್ಟ” ಎಂದು. ಅವರು ವಯಲಿನ್ ನುಡಿಸುವವರು. ಆದರೆ, ಸ್ವಲ್ಪವೂ ಯೋಚಿಸದೇ ನನ್ನ ಬಾಯಿಂದ ಬಂದದ್ದು ಸಾರಂಗಿ ಎನ್ನುವ ಉತ್ತರ ಭಾರತದ ವಾದ್ಯ. ಅದರ ಮೂಲ ರಾಜಸ್ಥಾನದ ಹಲವು ತಂತಿ ವಾದ್ಯಗಳು. ನಾನು ಸಾರಂಗಿ ಅಂದ ಕೂಡಲೇ ಆ ವಿದ್ವಾಂಸರ ಮುಖ ಕಹಿಯೆಣ್ಣೆ ಕುಡಿದಂತೆ ಆಗಿ ಅವರು ತಮಿಳಿನಲ್ಲಿ ಹೀಗೆ ಹೇಳಿದರು “ಅಯ್ಯಯ್ಯೋ ಎನ್ನಾಮ್ಮಾ ಸೊಲ್ರೇ, ಶಾಂತಂ ಪಾಪಂ ಶಾಂತಂ ಪಾಪಂ. ಅದೂ ಒರು ಮ್ಯೂಸಿಕ್ ಇನ್ಸ್‌ಟ್ರುಮೆಂಟಾ? ನಾಂಗೊ ಬ್ರಾಮಿನ್ ಕಾರಂಗೋ ಅದ ತೊಡಕೂಡಾದು. ಅದಲೇ ಆಡಿಂಡೆ ಕರಳು ತಂತಿಯಾಕರಾ, ಛಿ ಛೀ…. ಇಂದ ಮಾದ್ರಿ ಕೆಟ್ಟು ಪೋವಾದೆ” ಎಂದರು. (ಅಯ್ಯೋ ಅದೂ ಒಂದು ವಾದ್ಯಾನಾ, ಅದಕ್ಕೆ ಆಡಿನ ಕರುಳಿನಿಂದ ತಂತಿ ಮಾಡಿ ನುಡಿಸುತ್ತಾರೆ…. ಹೀಗೆಲ್ಲಾ ಕೆಟ್ಟೋಗ್ಬೇಡ ಎಂದರು).

ಇಂತವರ ನಡುವೆ ನನ್ನ ರಾಮಣ್ಣ, ನನ್ನ ರಾಜೀವ ಎಲ್ಲ ಬಹಳಾ ಅಪರೂಪದವರು. ಅವರನ್ನು ಕಳೆದುಕೊಳ್ಳುವುದು ಎಂದರೆ ಸ್ವರಗಳೇ ಇಲ್ಲದೆ ಬದುಕುವುದು. 

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article