ಕವಿ, ಬರಹಗಾರ, ಸಾಹಿತಿ ಲಕ್ಕೂರು ಆನಂದ ನಮ್ಮನ್ನಗಲಿದಾಗ ನನ್ನೊಳಗೆ ಒಂದು ಅರ್ಥ ಆಗದ ಖೇದ, ಸಂಕಟ, ಚಡಪಡಿಕೆ ಒಂದು ಕಡೆ. ಇದನ್ನು ನನ್ನ ದೋಸ್ತ್ ನೋಡಿ ಅವನು ಆಘಾತಗೊಂಡರೆ ಎನ್ನುವ ಭಯ ಇನ್ನೊಂದು ಕಡೆ.
ಫೇಸ್ ಬುಕ್ ನಲ್ಲಿ ಹಲವಾರು ಜನ ಆನಂದನ ಬಗ್ಗೆ ಬರೆದಿದ್ದರು. ಕೆಲವರಿಗೆ ಕುಡಿತದ ಅಡಿಕ್ಷನ್ ಆಗಿ ಕಂಡಿತು, ಕೆಲವರಿಗೆ ಮಾನಸಿಕ ದೌರ್ಬಲ್ಯವಾಗಿ ಕಂಡಿತು, ಕೆಲವರು ಪುಂಖಾನುಪುಂಖವಾಗಿ ಅಡ್ವೈಸ್ ನೀಡಿದ್ದರು. ಇವುಗಳೆಲ್ಲ ನನಗೆ ನೆನಪಿಸಿದ್ದು ತಮ್ಮ ಜೀವನವನ್ನು ಇಲ್ಲಿಗೆ ನಿಲ್ಲಿಸುತ್ತೇವೆ ಎಂಬ ತೀರ್ಮಾನ ತೆಗೆದುಕೊಂಡು ತೀರಿದ ನನ್ನಿಬ್ಬರು ಗೆಳತಿಯರನ್ನು. ಒಬ್ಬಳಂತೂ ‘ಎಂಡಿಂಗ್ ಸೆಲ್ಫ್ ಇಸ್ ನಾಟ್ ಮರ್ಡರ್ ಇಟ್ ಇಸ್ ಎ ರೈಟ್’ ಎಂದು ಘೋಷಿಸಿದ್ದವಳು. ನಾವಿಬ್ಬರು ಒಬ್ಬರನ್ನೊಬ್ಬರು ಪ್ಲಗ್ಗಿಕ ಸಾಕೆಟಿಕಾ ಅಂತ ಕರ್ಕೊತಿದ್ವಿ. ತಮ್ಮನ್ನು ತಾವು ಕೊನೆಗೊಳಿಸಿಕೊಳ್ಳುವ ವಿಷಯದ ಬಗ್ಗೆ ಅವಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಬರಹ ಪ್ರಸ್ತುತಪಡಿಸಿದ್ದಳು.
ನಾನು ನನ್ನ ಜೀವನವನ್ನು ಕೊನೆಗೊಳಿಸಬೇಕೆಂದು ಮೊದಲ ಬಾರಿಗೆ ಪ್ರಯತ್ನ ಮಾಡಿದ್ದು ಕೊಲ್ಕೊತ್ತದಲ್ಲಿ ಒಂದು ಸಂಗೀತ ಶಾಲೆಯಲ್ಲಿ ಇರುವಾಗ. ಅಲ್ಲಿನ ಗುರುಸೇವೆ ಮಿತಿ ಮೀರಿ ನಾನು ಇನ್ನೆಂದೂ ಹಾಡುವುದಿಲ್ಲ, ಕಲಿಯುವುದಿಲ್ಲ ಎಂದು ತೀರ್ಮಾನಿಸಿ ಅಮ್ಮನಿಗೆ ಹೇಳಿದೆ. ಅದಕ್ಕವರು “ನೀನು ಸತ್ತರೂ ಚಿಂತೆ ಇಲ್ಲ. ನನ್ನ ಮುಖ ನೋಡಬೇಕೆಂದರೆ ಅಲ್ಲೇ ಇರಬೇಕು” ಅಂತ ಹೇಳಿಬಿಟ್ಟರು. ಕರುಣೆಯೇ ಇಲ್ಲದ ಈ ತಾಯಿಯನ್ನು ಕೊಂದು ತಿಂದು ಬಿಡ್ಲಾ ಎಂದು ಅನಿಸಿತ್ತು ಆಗ! ನೇಣು ಹಾಕಿಕೊಳ್ಳಲು ಹಗ್ಗ, ಅದು ಸಾಧ್ಯವಾಗದಿದ್ದರೆ ಇರಲಿ ಅಂತ ವಿಷ ತಂದಿಟ್ಟುಕೊಂಡೆ. ಕೊನೇ ಬಾರಿ ಬೆಂಗಳೂರಿನ ನಮ್ಮ ಮೇಷ್ಟ್ರು ರಾಮರಾಯರ ಹತ್ತಿರ ಮಾತನಾಡ ಬೇಕೆನಿಸಿ ಫೋನ್ ಮಾಡಿದೆ. ಅವರು ಫೋನ್ ಎತ್ತಿ ‘ಹಾ! ಹೇಳು ಪುಟ್ಟಿ’ ಎಂದ ತಕ್ಷಣ ಜೋರಾಗಿ ಅತ್ತು ಬಿಟ್ಟೆ. ಏನಾಯ್ತು ಅಂತ ಪ್ರೀತಿಯಿಂದ ಕೇಳಿದರು. ನಾನೇ ಸಮಾಧಾನ ಮಾಡಿಕೊಂಡು ಮಾತಾಡಿದೆ. ಗುರುಸೇವೆ ಅಂದ್ರೆ ಇದೆಲ್ಲಾನಾ? ಅಂತ ಕೇಳಿದೆ. ಯಾಕೆ? ಏನು ಮಾಡಿಸಿದರು? ಅಂತ ಅವರು ಆ ರಾತ್ರಿಯಲ್ಲೂ ನನ್ನ ಬಗ್ಗೆ ಕಾಳಜಿ ವಹಿಸಿ ಮಾತನಾಡಲು ಶುರು ಮಾಡಿದರು. ನಡೆದದ್ದೆಲ್ಲಾ ಹೇಳಿದೆ.
ಬೆಳಿಗ್ಗೆ ಚಹಾ ತಿಂಡಿ ಮಾಡಲು ಅವರ ಮನೆಗೆ 5.30ಗೆ ಹೋಗಬೇಕು ಆದರೆ ಗುರುವಿಗೆ ಮುಖ ತೋರಿಸುವಂತಿಲ್ಲ. ಗುರುವಿಗೆ ನನ್ನ ಮುಖ ದರ್ಶನದಿಂದ ಆ ದಿನ ಕೆಟ್ಟದಾದರೆ? ಹಾಗೆ ಪ್ರತೀ ದಿನ ಮೀನು ಅಡುಗೆ ಮಾಡಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೆ “ನೋಡು ಹೇಗೆ ಮಾಡಿದ್ದೀಯ ಮೀನ್ ಸಾರು… ನಿಂಗೆ ಈ ಜನ್ಮದಲ್ಲಿ ಹಾಡಲು ಬರುವುದಿಲ್ಲ. ಹಾಡಿನ ಹಿತ ಮೀನ್ ಸಾರಲ್ಲೇ ಕಾಣಬೇಕು” ಎನ್ನುತ್ತಿದ್ದರು. ಹಾಡಲು ಟೈಮ್ ಕೊಟ್ಟರೆ ತಾನೆ ಹಾಡಲು ಬರುವುದು? ಬರೇ ಮೀನ್ ಸಾರ್ ಮಾಡ್ತಾ ಇದ್ರೆ ಹೇಗೆ ಹಾಡೋದು?. ಅವಳಿಗೆ ಪೀರಿಯೆಡ್ಸ್ ಬಂದ್ರೆ ಅವಳ ಬಟ್ಟೆ ನಾನು ತೊಳೆಯ ಬೇಕು, ಮನೆ ಕೆಲಸ ಮಾಡಿ ದಿನಕ್ಕೆ 8 ಬಾರಿ ಪಾನ್ ತರಲು ಹೋಗಿ ಬರಬೇಕು. ಅಲ್ಲಿಗೆ ಹೋಗೋ ಮುಂಚೆ 1994-95ರಲ್ಲಿ ಮನೆಯಲ್ಲೇ ನಾನು 12 ಗಂಟೆ ಹಾಡುತ್ತಿದ್ದೆ. ನಾನು ಅಲ್ಲಿ ಹೋದರೆ 18 ಗಂಟೆ ಅಭ್ಯಾಸ ಮಾಡಬಹುದು ಅಂದುಕೊಂಡೇ ಹೋಗಿದ್ದೆ. ಅದರೆ ಆದದ್ದು ಬೇರೆಯೇ…
ಅದಕ್ಕೇ ಕೇಳಿದೆ ಮೇಷ್ಟ್ರನ್ನ ಹಾಡದೆಯೂ ಬದುಕಬಹುದಾ ಅಂತ. ʼಹಾಡೆಲ್ಲ ಬಿಡು.. ಜೀವನ ದೊಡ್ಡದು.. ಅದು ನಿನ್ನದು.. ನಿನ್ನಿಷ್ಟದಂತೆ ಬದುಕು ಅಂತ ಅವರು ಹೇಳಿದರು. ನಾನು ಮತ್ತೆ ಬೆಂಗಳೂರಿಗೆ ಬಂದು ಅವರ ಹತ್ತಿರವೇ ಸಂಗೀತಾಭ್ಯಾಸ ಮಾಡಿದೆ. ಹೀಗೆ ಆಗೊಮ್ಮೆ ಸಾವಿನಿಂದ ಬಚಾವ್ ಆದೆ.
ನಾನು ಸಾಯಲು ತೀರ್ಮಾನಿಸಿದ ಆ ಕ್ಷಣದಲ್ಲಿ ಕಣ್ಣ ಮುಂದೆ ಜಿಗುಪ್ಸೆ, ಅತೀವ ಹತಾಶೆ, ಸ್ವಂತದ ಬಗ್ಗೆ ಕೀಳರಿಮೆ, ನನಗಾರೂ ಇಲ್ಲ ಎನ್ನುವ ಅನಾಥ ಭಾವ, ಯಾರೂ ನನ್ನ ಕೇಳಿಸಿ ಕೊಳ್ಳುವವರಿಲ್ಲ ಅರ್ಥಮಾಡಿ ಕೊಳ್ಳುವವರಿಲ್ಲ ಎನ್ನುವ ಖಿನ್ನತೆ ಎಲ್ಲಾ ಸೇರಿಕೊಂಡು ತಲೆಯಲ್ಲಿ ಒಂದು ಚಿಕ್ಕ ಜಾಗವೂ ಸಮಾಧಾನವಾಗಿ ಯೋಚಿಸಲೂ ಇರಲಿಲ್ಲ. ಮೇಲಿಂದ ಮೇಲೆ ಅದೇ ಯೋಚನೆಗಳು ಕಿತ್ತು ಹರಿದು ತಿನ್ನುವ ಆ ಕ್ಷಣದಲ್ಲಿ ಒಂದು ಶೂನ್ಯ ಕಣ್ಣೆದುರಿಗೆ ಬಂದು ಬದುಕು ಬೇಡವೆನ್ನುವ ತೀರ್ಮಾನ ಬಲಗೊಂಡು ಕಣ್ಣು ಮುಚ್ಚಿ ಬಿಡುವಲ್ಲಿ ಒಂದೋ ಸಾವು ಇಲ್ಲಾ ಅರೆ ಸಾವು ಇಷ್ಟೇ. ಇದು ನಾನು ಅನುಭವಿಸಿದ್ದು ನಾನು ನನ್ನ ಸಂಗಾತಿ ಬ್ರೇಕಪ್ ಆದಾಗ.
ಆದರೆ ಆ ಬಳಿಕ ಸಾಯುವ ಮನಸಾದರೂ ತಕ್ಷಣವೇ ಕಣ್ ಮುಂದೆ ಬರೋದು ಬದುಕಿಬಿಡೋಣ, ನೋಡೋಣ ಅನ್ನೋ ಭಾವನೆ. ನಾನು ತುಂಬಾ ಯೋಚನೆ ಮಾಡಿದೆ, ಮಾಡಿದ್ದೀನಿ….. ಹಲವರು ಕುಡಿಯೋ ಕಾರಣಕ್ಕೆ ಸಾಯೋದು ಸುಲಭ ಅಂದ್ಕೊಂಡಿದ್ದಾರೆ. ನಂಗೆ ಯಾಕೋ ಈ ವಿಷಯದಲ್ಲಿ ಸ್ವಲ್ಪ ಬೇರೆ ಯೋಚನೆ ಇದೆ. ಕುಡಿತ ಮತ್ತು ಬೇರೇ ಲತ್ತುಗಳು (ವ್ಯಸನ ಅಲ್ಲ) ಸಾಯುವ ಮನಸ್ಥಿತಿಯನ್ನು ಹೆಚ್ಚಿಸುತ್ತವೆ ಎಂದೆನಿಸಬಹುದು. ಆದರೆ ಹಾಗೆ ಯಾವುದಾದರೂ ಲತ್ತಿಗೆ ಅಂಟಿರುವ ಒಂದೇ ಒಂದು ವಿಷಯ ಎಂದರೆ ನಿದ್ದೆ. ಕಿತ್ತು ತಿನ್ನುವ ಚಿಂತೆಗಳನ್ನು ಅಥವಾ ಖಾಲಿತನದ ಚಡಪಡಿಕೆಗಳು ಆತಂಕ ಹತಾಶೆಗಳನ್ನು ನೀಗಿಸಿ ಸ್ವಲ್ಪವಾದರೂ ನಿದ್ದೆ ಬರಲು ಒಂದು ಸಪೋರ್ಟ್ ಸಿಸ್ಟಮ್ ಬೇಕಾಗುತ್ತೆ. ನಾವು ಇಂಥಾ ಪರಿಸ್ಥಿತಿಗಳಲ್ಲಿ ಬಳಲುವಾಗ ಯಾರೇ ಆಗಲಿ ಹತ್ತಿರ ಬಂದು ಮಾತನಾಡಲು ಹೆದರುತ್ತಾರೆ. ಕಾಟಾಚಾರಕ್ಕೆ ಎಲ್ಲರೂ ಕೇಳುವ “ಹೇಗಿದ್ದೀರಿ” ಎಂಬ ಪ್ರಶ್ನೆಗೆ ನಮ್ಮ ಉತ್ತರ ಕೇಳಲು ಅವರಿಗೂ ವ್ಯವಧಾನ ಇರುವುದಿಲ್ಲ.. ಆದರೆ ಎಲ್ಲರ ಬಾಯಲ್ಲಿ ಮಾನಸಿಕ ಆರೋಗ್ಯದ ಪದಗಳು ಹೊರಳಾಡುತ್ತಿರುತ್ತವೆ!
ನಾನಂತೂ ಯಾರು ಉತ್ತರ ಕೇಳಿದರೂ ಕೇಳದಿದ್ದರೂ ನನ್ನ ಪರಿಸ್ಥಿತಿ ಹೇಳೇ ಹೇಳ್ತೀನಿ. ಯಾಕಂದ್ರೆ ಅಷ್ಟೂ ಸಾರಿ ನಮ್ಮ ಮನಸಿನ ದುಗುಡಗಳನ್ನು ಹೊರಹಾಕಬಹುದು. ತೊಂದರೆ ಬರುವುದು ಇಂಥಾ ತೀಕ್ಷ್ಣ ಸಮಯಗಳಲ್ಲೇ…. ಆಗ ಯಾರೂ ಫೋನ್ ತೆಗೆಯೋದಿಲ್ಲ, ಮಾತಾಡೋದಿಲ್ಲ. ಕೇಳಿದರೇ ಅಯ್ಯೋ ನನ್ ಕೆಲಸನೇ ನಂಗೆ ಸುಸ್ತಾಗಿರುತ್ತೆ ಅನ್ನೋ ಉತ್ತರ…ಅಂದ್ರೆ ದುಗುಡದೊಳಗೆ ಸಿಲುಕಿದ ಜನರು ಕೆಲಸ ಮಾಡದೆ ಇರ್ತಾರೆ ಅಂತ ಅರ್ಥವಾ? ಕುಡಿದೇ ಕೆಲಸ ಮಾಡುವ ಹಲವಾರು ಸಮುದಾಯಗಳಿವೆ. ಅವರು ಕುಡಿದಿಲ್ಲವೆಂದರೆ ಅವರಿಗೆ ಕೆಲಸ ಮಾಡಲಾಗುವುದಿಲ್ಲ. ಹೌದಲ್ವಾ? ಸಾರಾಸಗಟಾಗಿ ಹೇಳಿಕೆಗಳನ್ನು ಕೊಡುವವರು ಒಮ್ಮೆಯಾದರೂ ಈ ರೀತಿಯ ಕೆಲಸ ಮಾಡುವ ಸಮುದಾಯಗಳ ಜೀವನದೊಳಗೆ ಇಣುಕಿ ನೋಡಿರುತ್ತಾರೆಯೇ?
ಒಂದು ಕಾಲದಲ್ಲಿ ನಾನು ಒಂದು ಫ್ಲೈಓವರ್ ಕೆಳಗೆ ಧಂಧೆ ಮಾಡೋ ಮಹಿಳೆಯರ ಜಗಳ ಬಿಡಿಸುವ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡ್ತಿದ್ದೆ. ಯಾರೂ ಕೂಡಾ ಈ ಸಮುದಾಯಗಳ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಅವರು ಹೇಳುವುದನ್ನೆಲ್ಲಾ ಕೇಳಿಸಿಕೊಂಡು ಅವರಿಗೆ ಮತ್ತೆ ದೋಸ್ತಿ ಮಾಡಿಸಿ, ತಮಾಷೆ ಹಾಡುಗಳನ್ನು ಹಾಡಿ ಬರುತ್ತಿದ್ದೆ. ಆಗೆಲ್ಲಾ ಅವರು ಕುಡಿದೇ ನಿಂತಿರುತ್ತಿದ್ದರು. ಪರಿಸ್ಥಿತಿಗಳು ಒಬ್ಬೊಬ್ಬರಿಗೂ ಬೇರೆ ಬೇರೆ ಇರುತ್ತೆ.
ಒಂದೇ ಮಂತ್ರವನ್ನು ಎಲ್ಲರ ತಲೆಗೆ ಕಟ್ಟಲು ಸಾಧ್ಯವಿಲ್ಲ. ಇದನ್ನು ಸತ್ತವರ ಬಗ್ಗೆ ಬೇಕಾಬಿಟ್ಟಿ ಮಾತಾಡುವವರು ಅರ್ಥಮಾಡಿ ಕೊಳ್ಳಬೇಕು.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.
ಇದನ್ನೂ ಓದಿ- ರಸ್ತೆಗಳು ಹೇಳಿದ ಕಥೆಗಳು