RSS ಚಾತುರ್ವಣ ವ್ಯವಸ್ಥೆಯನ್ನು ನಂಬಿದೆ; ಸಂವಿಧಾನವನ್ನು ಅಲ್ಲ; ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Most read

ಬೆಂಗಳೂರು: . ಇಂದಿರಾ ಗಾಂಧಿಯವರು ಹುತಾತ್ಮರಾಗಿ ಅವರ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಆದರ್ಶಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಅವರು ಇಂದು ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ  ಹಾಗೂ ದಿವಂಗತ ಸರ್ದಾರ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದಿಟ್ಟ ಮಹಿಳೆಯಾಗಿದ್ದು, ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯಲಾಗುತ್ತಿತ್ತು. ಬಾಂಗ್ಲಾದೇಶದ ವಿಮೋಚನಾ ಸಂದರ್ಭದಲ್ಲಿ ವಾಜಪೇಯಿಯವರು ದುರ್ಗೆಯೆಂದು ಇಂದಿರಾ ಅವರನ್ನು ಸಂಭೋಧಿಸಿದ್ದರು. ಪಾಕಿಸ್ತಾನವನ್ನು ಸದೆಬಡೆದು ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ ಈ ಯುದ್ಧದಲ್ಲಿ ಸುಮಾರು  90 ಸಾವಿರ ಪಾಕಿಸ್ತಾನ ಸೈನಿಕರು ಸೆರೆಯಾಗಿದ್ದರು ಎಂದರು.

ಇಂದಿರಾಗಾಂಧಿಯವರು ಧೀಮಂತ ನಾಯಕಿ. ದೀರ್ಘ ಕಾಲದವರೆಗೆ ದೇಶವನ್ನಾಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಅವಧಿಯಲ್ಲಿ ಬಡತನ ನಿರ್ಮೂಲನೆಗೊಳಿಸುವ ‘ಗರೀಬಿ ಹಠಾವೋ’ ಘೋಷಣೆಯನ್ನು ಮಾಡಿದ್ದರು. ಭಾರತದಲ್ಲಿ ಅಸಮಾನತೆಯಿದೆ. ಇಂದಿರಾಗಾಂಧಿಯವರ ಕಾಲಘಟ್ಟದಲ್ಲಿ ಬಡವರ ಸಂಖ್ಯೆ ಹೆಚ್ಚಿತ್ತು. ಆದ್ದರಿಂದ ಬಡತನ ಹೋಗಲಾಡಿಸಲು 20 ಅಂಶಗಳ  ಕಾರ್ಯಕ್ರಮವನ್ನು ಜಾರಿಗೆ ತಂದರು ಎಂದು ತಿಳಿಸಿದರು.

ಜಾತಿವ್ಯವಸ್ಥೆಯಿಂದ ಅಸಮಾನತೆ ಹೆಚ್ಚಿದೆ:

ನಮ್ಮ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ. ಜಾತಿವ್ಯವಸ್ಥೆಯಿಂದ ಅಸಮಾನತೆ ಹೆಚ್ಚಿದ್ದು, ಬಹುಸಂಖ್ಯಾತ ಜನರು, ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ . ಚತುರ್ವರ್ಣ ವ್ಯವಸ್ಥೆಯಲ್ಲಿ ಮೊದಲ ಮೂರು ವರ್ಗಗಳಿಗೆ ಎಲ್ಲ ಅವಕಾಶಗಳು ಸಿಗುತ್ತಿತ್ತು. ಆದರೆ ಮೇಲ್ವರ್ಗದ ಹೆಣ್ಣುಮಕ್ಕಳೂ ಸಹ ಶಿಕ್ಷಣದಿಂದ ವಂಚಿತರಾಗಿದ್ದರು. ಸಮಸಮಾಜ ಪರಿಕಲ್ಪನೆಗೆ ಜೀವತುಂಬಿದ್ದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣವರ ಫೋಟೋವನ್ನು ಅಳವಡಿಸಲು ಆದೇಶ ನೀಡಿದೆ ಎಂದರು.

ಇಂದಿರಾ ಗಾಂಧಿಯವರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲೇ ನಡೆಯುವ ಪ್ರಯತ್ನವನ್ನು ಮಾಡಿದ್ದರು ಎಂದರು. ದೇಶದ ಸ್ವಾತಂತ್ರ್ಯಕ್ಕಾಗಿ  ಹೋರಾಟ ಮಾಡಿದವರಲ್ಲಿ ವಲ್ಲಭಭಾಯಿ ಪಟೇಲರು ಅಗ್ರಗಣ್ಯರು   ವಲ್ಲಭಭಾಯಿ  ಪಟೇಲರು ದೇಶದ ಉಪಪ್ರಧಾನಿಗಳಾಗಿದ್ದರಲ್ಲದೇ ದೇಶದ ಸ್ವಾತಂತ್ರ್ಯಕ್ಕಾಗಿ  ಹೋರಾಟ ಮಾಡಿದವರಲ್ಲಿ ಅಗ್ರಗಣ್ಯರು.   ಸ್ವಾತಂತ್ರ್ಯ ಗಳಿಸಿದಾಗ  ದೇಶದಲ್ಲಿ 562 ಸಂಸ್ಥಾನಗಳನ್ನು  ಭಾರತಕ್ಕೆ ಸೇರಿಸಲು ಗೃಹ ಸಚಿವರಾಗಿದ್ದ ವಲ್ಲಭ ಭಾಯಿ ಪಟೇಲರ ಪ್ರಯತ್ನವೇ ಕಾರಣ.  ಅದಕ್ಕಾಗಿಯೇ ಅವರನ್ನು ಉಕ್ಕಿನ ಮನುಷ್ಯ ಎಂದು ಕರೆಯುತ್ತೇವೆ. ಅವರ 150 ನೇ ಜನ್ಮ ದಿನದಂದು ಗೌರವದಿಂದ ಸ್ಮರಿಸುತ್ತೇವೆ ಎಂದರು. 

ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ:

ಬಿಜೆಪಿ ಯವರು ನೆಹರೂ ಅವರನ್ನು ಟೀಕಿಸುತ್ತಾರೆ. ಆದರೆ ಅವರು ದೇಶದ ಸ್ವಾತಂತ್ರ್ಯಕ್ಕಾಗಿ  ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ  ನೆಹರೂ, ವಲ್ಲಭಭಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕರು ಹೋರಾಡಿದರು. ಇಂದು ದೇಶ ಸ್ವತಂತ್ರವಾಗಿದ್ದರೆ ಅದು ಅವರ ಹೋರಾಟದ ಫಲ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ. ಸಾವರ್ಕರ್, ಗೋಲ್ವಾಲ್ಕರ್ ಆಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಈಗ ಬಿಜೆಪಿಯವರು ಮಹಾನ್ ದೇಶಭಕ್ತರಂತೆ ಮಾತನಾಡುತ್ತಾರೆ. ಇದನ್ನು ಬಿಜೆಪಿಯವರ ಢೋಂಗಿತನ ಎಂದು ಮುಖ್ಯಮಂತ್ರಿಗಳು  ಲೇವಡಿ ಮಾಡಿದರು.

ಹೆಡ್ಗೆವಾರ್ ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಎಂದು  ಆರ್. ಎಸ್. ಎಸ್ ಕಾರ್ಯಕರ್ತರಿಗೆ ಕರೆ ನೀಡಲಿಲ್ಲ

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಕಾಂಗ್ರೆಸ್ ಹೊರತು ಬೇರೆ ಯಾರೂ ಅಲ್ಲ. 1925 ರಲ್ಲಿಯೇ ಆರ್.ಎಸ್.ಎಸ್  ಸ್ಥಾಪನೆಯಾಗಿತ್ತು. ಆಗ ಸ್ವಾತಂತ್ರ್ಯ ಹೋರಾಟ ಬಹಳ ಬಿರುಸಾಗಿ ನಡೆಯುತ್ತಿದ್ದ ಕಾಲ. ಹೆಡ್ಗೆವಾರ್ ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಎಂದು ಆರ್. ಎಸ್. ಎಸ್ ಕಾರ್ಯಕರ್ತರಿಗೆ ಕರೆ ನೀಡಲಿಲ್ಲ. ಸಾವರ್ಕರ್ ಮತ್ತು ಹಿಂದೂ ಮಹಾ ಸಭಾದ ಅಧ್ಯಕ್ಷ ಗೋಲ್ವಾಲ್ಕರ್ ಇಬ್ಬರೂ ಸಂವಿಧಾನವನ್ನು ವಿರೋಧಿಸಿದವರು. ಮನುವಾದಿಗಳು, ಚಾತುರ್ವಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡವರು ಯಾವತ್ತೂ ಸಂವಿಧಾನದ ಪರವಾಗಿಲ್ಲ ಎಂದರು.

More articles

Latest article