ದಲಿತರಿಂದ ದಲಿತರನ್ನು ಹತ್ತಿಕ್ಕುವ ತಂತ್ರದಲ್ಲಿ ಆರ್‌ಎಸ್‌ಎಸ್

Most read

ಕಾಲದಿಂದ ಕಾಲಕ್ಕೆ ಆರ್‌ಎಸ್‌ಎಸ್ ದಲಿತ ಸಮುದಾಯಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಮನುವಾದಿಯ ಎದೆಹಾಲನ್ನು ಉಣಿಸುತ್ತಿದೆ. ಅದನ್ನೇ ಭಾರತ ಮಾತೆಯ ಪ್ರೀತಿಯೆಂದು ದಲಿತ ಸಮುದಾಯಗಳು ನಂಬಿ ಅನೇಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಆಕಾಶ್‌ ಆರ್‌ ಎಸ್‌, ಪತ್ರಕರ್ತರು.

ಆರ್‌ಎಸ್‌ಎಸ್‌ ನಿಂದ ದಲಿತರು ತಮ್ಮನ್ನೆ ತಾವು ನಾಶ ಪಡಿಸಿಕೊಳ್ಳುತ್ತಿದ್ದಾರೆ. ಭಾರತದ ಚರಿತ್ರೆಯಲ್ಲಿ ಧರ್ಮ ವಹಿಸಿದಂತಹ ಮಹತ್ತರ ಪಾತ್ರವನ್ನು ಇನ್ನಾವ ದೇಶದ ಧರ್ಮವೂ ವಹಿಸಿಲ್ಲ. ಭಾರತದ ಚರಿತ್ರೆ ಎಂದರೆ ಬೌದ್ಧ ಧರ್ಮ ಹಾಗೂ ಬ್ರಾಹ್ಮಣ ಧರ್ಮಗಳ ನಡುವಣ ಮಾರಕ ಕಾಳಗದ ಚರಿತ್ರೆ ಆಗಿದೆ.

ಆಶೋಕನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯ ವಿಸ್ತರಿಸಿತು. ಆಶೋಕ ಬೌದ್ದ ಧರ್ಮವನ್ನು ರಾಜ್ಯಧರ್ಮವಾಗಿ ಮಾಡಿದ. ಇದು ಬ್ರಾಹ್ಮಣ ಧರ್ಮಕ್ಕೆ ಬಹುದೊಡ್ಡ ಪೆಟ್ಟು ನೀಡಿತು. ಇದರಿಂದ ಅಶೋಕನ ಸಾಮ್ರಾಜ್ಯದಲ್ಲಿ ಬ್ರಾಹ್ಮಣರು ಎಲ್ಲ ರಾಜಾಶ್ರಯ ಕಳೆದುಕೊಂಡು, ಎರಡನೆಯ ಹಾಗೂ ಅಧೀನ ಸ್ಥಾನಕ್ಕೆ ತಳ್ಳಲ್ಪಟ್ಟರು. ತನ್ನ ಸಾಮ್ರಾಜ್ಯದಲ್ಲಿ ಬ್ರಾಹ್ಮಣ ಧರ್ಮದ ಜೀವಾಳವಾದ ಪ್ರಾಣಿಬಲಿಯ ಯಜ್ಞಗಳನ್ನು ಅಶೋಕ ನಿಷೇಧಿಸಿ ಅವರಿಗೆ ವೃತ್ತಿನಷ್ಟವನ್ನು ಉಂಟು ಮಾಡಿದನು. ಆದ್ದರಿಂದ ಬ್ರಾಹ್ಮಣರಿಗೆ ಬೌದ್ದ ರಾಜ್ಯದ ವಿರುದ್ದ ದಂಗೆ ಏಳುವುದೊಂದೇ ಮಾರ್ಗವಾಗಿತ್ತು. ಈ ಕಾರಣಕ್ಕಾಗಿಯೇ ಶುಂಗಗೋತ್ರದವನೂ, ಸಾಮವೇದಿ ಬ್ರಾಹ್ಮಣನೂ, ಪ್ರಾಣಿ ಬಲಿ ಹಾಗೂ ಸೋಮಯಜ್ಞದಲ್ಲಿ ನಂಬಿಕೆಯುಳ್ಳವನೂ ಆದ ಪುಷ್ಯಶೃಂಗಮಿತ್ರನು ಬೌದ್ದ ಧರ್ಮವನ್ನು ನಾಶ ಮಾಡಲು ರಾಜಕೀಯ ಅಧಿಕಾರ ಉಪಯೋಗಿಸಿ ರಾಜಹತ್ಯೆ ಮಾಡಿದನು. ಪುಷ್ಯಶೃಂಗಮಿತ್ರ ಸಿಂಹಾಸನಾರೂಢನಾಗುತ್ತಿದ್ದಂತೆಯೆ ಮಾಡಿದ ಅಶ್ವಮೇಧ ಯಾಗವೆಂಬ ವೈದಿಕ ಯಜ್ಞವು ಬ್ರಾಹ್ಮಣ ಧರ್ಮ ಸ್ಥಾಪನೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಪ್ರತಿಯೊಬ್ಬ ಬೌದ್ಧ ಭಿಕ್ಕುವಿನ ತಲೆಗೆ ಆತ ನೂರು ಚಿನ್ನದ ನಾಣ್ಯಗಳ ಬೆಲೆ ಕಟ್ಟುವ ಮೂಲಕ ಬೌದ್ಧ ಧರ್ಮ ನಾಶಕ್ಕೆ ಹವಣಿಸಿದ್ದನು. ನಂತರದಲ್ಲಿ ಪುಷ್ಯಶೃಂಗ ಮಿತ್ರ ಬ್ರಾಹ್ಮಣರನ್ನು ಸಮಾಜದ ಮೇಲಂತಸ್ತಿನಲ್ಲಿ ಪ್ರತಿಷ್ಠಾಪಿಸಲು ಮತ್ತು ಶೂದ್ರರನ್ನು, ದಲಿತರನ್ನು ಸಮಾಜದ ಅಂಚಿಗೆ ತಳ್ಳುವ ಮನುಸ್ಮೃತಿಯನ್ನು ರಚನೆ ಮಾಡಿಸಿದ್ದನ್ನೂ, ತರತಮ ಸಮಾಜ ವ್ಯವಸ್ಥೆಗೆ ಕಾನೂನುಬದ್ದ ಚೌಕಟ್ಟನ್ನ ಕೊಟ್ಟನು. (ಅಂಬೇಡ್ಕರ್ ಅವರ ಕ್ರಾಂತಿ ಮತ್ತು ಪ್ರತಿ-ಕ್ರಾಂತಿ).

ಪ.ರಂಜಿತ್ ಅವರ ತಂಗಲಾನ್ ಸಿನಿಮಾದ ಒಂದು ದೃಶ್ಯ

2024 ರಲ್ಲಿ ತೆರೆಕಂಡ ಪ.ರಂಜಿತ್ ಅವರ ತಂಗಲಾನ್ ಸಿನಿಮಾವೂ ಕೂಡ ಇಂತಹ ಇತಿಹಾಸವನ್ನೆ ಹೇಳಿದೆ. ಅದರಲ್ಲಿನ ಒಂದು ಸನ್ನಿವೇಶದಲ್ಲಿ ಬಂಗಾರದ ಶೋಧಕ್ಕಾಗಿ ಶೂದ್ರರ ಬಳಿ ಬೇಡುವಂತಾಯಿತಲ್ಲ ಎಂಬ ಉದ್ವೇಗದಲ್ಲಿದ್ದ ಬ್ರಾಹ್ಮಣನಿಗೆ ಬುದ್ದ ಮೂರ್ತಿ ಕಾಣುತ್ತದೆ. ಆಗ ಆತ ಇವನಿಂದಲ್ಲೆ ಇಷ್ಟೇಲ್ಲಾ ಆಗುತ್ತಿರುವುದು ಈತನ ತಲೆ ಕತ್ತರಿಸಿ ಎಂದು ಹೇಳುವ ಮೂಲಕ ಶೂದ್ರ ರಾಜನ ಕೈಯಲ್ಲೆ ಬುದ್ದ ತಲೆಯನ್ನು ಕತ್ತರಿಸುತ್ತಾನೆ.

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಮೇಲೆ ಶೂ ಎಸೆದ ಪ್ರಕರಣವು ಕೂಡ ಇಂತಹ ಇತಿಹಾಸದ ಒಂದು ರೂಪಕವಾಗಿದೆ.

ಹೌದು..

ಬಿ.ಆರ್.ಗವಾಯಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿ “ ಜೈಭೀಮ್” ಎಂದು ಘೋಷಣೆ ಕೂಗಿದ್ದರು. “ಸಂವಿಧಾನವೇ ಸರ್ವೋಚ್ಛ ಅದರಡಿ ಪ್ರಜಾಪ್ರಭುತ್ವದ ಮೂರು ಶಾಖೆಗಳು ಕೆಲಸ ಮಾಡಬೇಕು” ಎಂದಿದ್ದರು, ದೇಶದ ಆಕ್ರಮ ಬುಲ್ಡೋಜರ್ ನ್ಯಾಯದ ವಿರುದ್ಧ ಆದೇಶ, ಎಲೆಕ್ಟೋರಲ್ ಬಾಂಡ್‌ಗಳ ನಿಷೇಧ, ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಆದೇಶ ಹಾಗೂ ಖಜೂರಾಂ ವಿಷ್ಣು ದೇವಾಲಯ ಮರು ಸ್ಥಾಪನೆಯು ಆರ್ಕಲಾಜಿಕಲ್ ಆಫ್ ಸರ್ವೇ ಅಡಿಯಲ್ಲಿ ಬರುತ್ತದೆ ಎಂಬ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು ಹಾಗೂ ಅದಕ್ಕೆ ಬೆಂಬಲವೂ ದೊರಕಿತು. ಆದರೆ ಮನುವಾದಿಗಳಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದ್ದು, ದಲಿತರನ್ನು ಬಳಸಿಕೊಳ್ಳುವ ಮೂಲಕ ಇದನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದ್ದಾರೆ.

ಕಾಲದಿಂದ ಕಾಲಕ್ಕೆ ಆರ್‌ಎಸ್‌ಎಸ್ ದಲಿತ ಸಮುದಾಯಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಮನುವಾದಿಯ ಎದೆಹಾಲನ್ನು ಉಣಿಸುತ್ತಿದೆ. ಅದನ್ನೇ ಭಾರತ ಮಾತೆಯ ಪ್ರೀತಿಯೆಂದು ದಲಿತ ಸಮುದಾಯಗಳು ನಂಬಿ ಇಂತಹ ಅನೇಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆರ್‌ಎಸ್‌ಎಸ್ ಮನು ಪ್ರವರ್ತಕನ ಹೊಸ ಜನರೇಶನ್ ಎಂದರೆ ತಪ್ಪಿಲ್ಲಾ. ಯಾಕೆಂದರೆ ಆರ್‌ಎಸ್‌ಎಸ್ ಹಾಗೂ ಅದರ ಸಂತಾನ ಸಂಸ್ಥೆಗಳು ಬರುಬರುತ್ತಾ ತನ್ನ ರೂಪುರೇಷೆಗಳನ್ನು ಬದಲಾಯಿಸಿಕೊಳ್ಳುತ್ತಿವೆ. ಶತಮಾನಗಳಿಂದ ಸಂಘದ ಗೂರೂಜಿ ಗೋಲ್ವಾಲ್ಕರ್ ಆದೇಶವನ್ನೇ ಪಾಲನೆ ಮಾಡುತ್ತಾ, ದಲಿತರನ್ನು ಶೋಷಿಸುತ್ತಾ ಬಂದಿದ್ದವರು, ಈ ಶತಮಾನದಲ್ಲಿ ಅದೇ ಸಮುದಾಯಗಳನ್ನು ಬಳಸಿಕೊಂಡು ತಮ್ಮ ಮನುವಾದ ಸಾಮ್ರಾಜ್ಯವನ್ನು ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಇದರಿಂದ ದಲಿತರಿಂದ ದಲಿತರನ್ನೇ ಹತ್ತಿಕ್ಕುವ ಹುನ್ನಾರವನ್ನೂ ಮಾಡಲಾಗುತ್ತಿದೆ.

ಆರ್‌ಎಸ್‌ಎಸ್ ಸುಳ್ಳು ಮತ್ತು ಅಂಬೇಡ್ಕರ್

ಈ ದೇಶದ ಇತಿಹಾಸದಲ್ಲಿ ಮನುವಾದಿಗಳನ್ನು ಭೀಕರವಾಗಿ ಕಾಡಿದ್ದು ಯಾರಾದರೂ ಇದ್ದರೆ ಅದು ಬುದ್ದ ಮತ್ತು ಅಂಬೇಡ್ಕರ್. ಕಾಲಕ್ರಮೇಣ ಮನುವಾದಿಗಳು ಬುದ್ದನನ್ನು ವಿಷ್ಣುವಿನ ಅವತಾರವೆಂದು ಬಣ್ಣಿಸಿಕೊಂಡು ಲಾಭ ಮಾಡಿಕೊಂಡಿದ್ದಾರೆ. ಆದರೆ ಬುದ್ದನಷ್ಟು ಸುಲಭವಾಗಿ ಬಾಬಾ ಸಾಹೇಬರು ಅವರ ಕೈಗೆ ಸಿಗಲಿಲ್ಲ. ಆದರೂ ಅಂಬೇಡ್ಕರ್ ನ್ನು ಬಳಸಿಕೊಳ್ಳಲು ಶತಾಯಗತಾಯವಾಗಿ ಪ್ರಯತ್ನ ಕೂಡ ಮಾಡಿದ್ದಾರೆ. “1939 ರಲ್ಲಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೆಳಿಗ್ಗೆ ಸಂಘ ಶಿಕ್ಷಾ ವರ್ಗಕ್ಕೆ ಬಂದು ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು, ಮತ್ತು ಮಧ್ಯಾಹ್ನ, ಡಾ. ಹೆಡ್ಗೆವಾರ್‌ ಜಿ ಮತ್ತು ಇತರ ಸ್ವಯಂಸೇವಕರೊಂದಿಗೆ ಊಟ ಮಾಡಿದರು. ಅವರು ಸ್ವಯಂಸೇವಕರೊಂದಿಗೆ ಚರ್ಚಿಸಿ ಶಾಖೆಯಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಪರಿಶೀಲಿಸಿದರು. ದಲಿತರು ದೇವಾಲಯಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದ್ದಕ್ಕಾಗಿ ಮೇಲ್ಜಾತಿಯ ಹಿಂದೂಗಳನ್ನು ಆರ್‌ಎಸ್‌ಎಸ್ ಖಂಡಿಸಿದೆ, “ದಲಿತರು ಪ್ರವೇಶಿಸಲು ಸಾಧ್ಯವಾಗದ ದೇವಾಲಯವನ್ನು ದೇವರು ಸಹ ತ್ಯಜಿಸುತ್ತಾನೆ” ಎಂದು ಹೇಳಿಕೊಂಡಿದೆ. (ಆರ್‌ಎಸ್‌ಎಸ್‌ನ ಪತ್ರಿಕೆ ಅರ್ಗನೈಸರ್ ಪತ್ರಿಕೆಯಲ್ಲಿ ಏ.2023, 14), “ಅಂಬೇಡ್ಕರ್ ಜ.2 1940 ರಲ್ಲಿ ಶಾಖೆಗೆ ಭೇಟಿ ಕೊಟ್ಟಿದ್ದರು ಎಂದು ಆರ್‌ಎಸ್‌ಎಸ್‌ನ ಮಾಧ್ಯಮ ವಿಭಾಗವು ತಿಳಿಸಿದೆ.

ಮೇಲೆ, ಆರ್‌ಎಸ್‌ಎಸ್ ಹೇಳುವಂತೆ ಅಂಬೇಡ್ಕರ್ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ನೋಡುವುದಾರೆ 1939 ಜ. 19 ರಂದು ಅಸ್ಪೃಶ್ಯತೆ ನಿವಾರಣೆ ಕುರಿತು ಗಾಂಧೀಜಿ ಜೊತೆ ಮಾತುಕತೆಯಿಂದ ಹಿಡಿದು ಡಿ. 1940 ಮುಂಬೈನಲ್ಲಿ ಸುಭಾಷ್‌ಚಂದ್ರ ಬೋಸ್ ಭೇಟಿಯವರೆಗೂ ಎಲ್ಲವನ್ನು ದಾಖಲಿಸಿದ್ದಾರೆ. ಹಾಗೂ “1951 ರಲ್ಲಿ ಎಸ್ ಸಿ ಎಫ್  ನ ಚುನಾವಣಾ ಪ್ರಣಾಳಿಕೆಯನ್ನು ರೂಪಿಸುವಾಗ ತಮ್ಮ ಪಕ್ಷ ಯಾವ ಕಾರಣಕ್ಕೂ ಅತ್ಯಂತ ಪ್ರತಿಗಾಮಿ ಪಕ್ಷವಾದ ಹಿಂದೂ ಮಹಾಸಭಾ ಮತ್ತು ಆರ್‌ಎಸ್‌ಎಸ್ ಜೊತೆಗೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ” ( ಅವರ ಬರಹ-ಭಾಷಣದ ಸಂ.17, ಭಾಗ 1 ರಲ್ಲಿ ದಾಖಲಾಗಿದೆ) ಇದರ ಹೊರತು ಆರ್‌ಎಸ್‌ಎಸ್ ಶಾಖೆ ಭೇಟಿಯ ಬಗ್ಗೆ ಎಳ್ಳಷ್ಟು ವಿವರ ಎಲ್ಲೂ ಇಲ್ಲ. ಇರಲಿ ಬಿಡಿ, ಕ್ಷಮೆ ಕೇಳಿದ ಡಿಎನ್‌ಎಗೆ ಸುಳ್ಳು ಹೊಸದೇನಲ್ಲಾ.

ಆರ್‌ಎಸ್‌ಎಸ್ ಮತ್ತು ಅಂಬೇಡ್ಕರ್ ಮೇಲಿನ ದ್ವೇಷ

ಅಂಬೇಡ್ಕರ್ ಈ ದೇಶದಲ್ಲಿನ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆ ಹೋಗಲಾಡಿಸಲು ಇಡೀ ಬದುಕನ್ನೆ ಸವೆಸಿದರು. ಆ ನಿಟ್ಟಿನಲ್ಲಿ ಮೊದಲು ದಲಿತ, ಮಹಿಳೆಯರ ಮೇಲೆ ಕಠೋರ ನೀತಿಯನ್ನು ರೂಪಿಸಿದ ಮನುಸ್ಮೃತಿಯನ್ನು ಸುಟ್ಟು ಹಾಕಿದರು. ಈ ಬೆಂಕಿ ಇನ್ನೂ ಮನುವಾದಿಗಳ ಒಡಲೊಳಗೆ ಉರಿಯುತ್ತಲೆ ಇದೆ. ಅದರಂತೆ “ಸಂಘ ಪರಿವಾರ ಜ.1 1993 ರಂದು ಶ್ವೇತಪತ್ರ ಹೊರಡಿಸಿ “ಸಂವಿಧಾನ ಹಿಂದೂ ವಿರೋಧಿ ಆಗಿದೆ” ಎಂದು ಖಂಡಿಸಿದರು. “ಡಿ. 19 2024 ರಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ “ಅಂಬೇಡ್ಕರ್ ಹೆಸರನ್ನು ಪುನರಾವರ್ತಿಸುವ ಫ್ಯಾಷನ್” ಅನ್ನು ಅನುಸರಿಸುವ ಬದಲು ದೇವರ ಹೆಸರನ್ನು ಜಪಿಸಿದ್ದರೆ ಕಾಂಗ್ರೆಸ್ ನಾಯಕರು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಿದ್ದರು”, ಶೂ ಪ್ರಕರಣದ ಬೆನ್ನಲ್ಲೆ ಗ್ವಾಲಿಯರ್‌ನ ಹೈಕೋರ್ಟ್ ವಕೀಲ ಸಂಘದ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ “ ಅಂಬೇಡ್ಕರ್ ಒಬ್ಬ ಕೊಳಕು ಮನುಷ್ಯ. ಸವರ್ಣೀಯರ ಮೇಲಿನ ಅನ್ಯಾಯ ಮತ್ತು ರಕ್ತಪಾತಗಳಿಗೆ ಅಂಬೇಡ್ಕರ್ ಕಾರಣ”, “ಆರ್‌ಎಸ್‌ಎಸ್ ಮುಖಂಡನೊಬ್ಬನ ಸಂವಿಧಾನ ಬರೆದಿರುವುದು ಅಂಬೇಡ್ಕರ್ ಅಲ್ಲ” ಎಂಬ ಹೇಳಿಕೆಗಳು ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಶೂ ಪ್ರಕರಣದಲ್ಲಿ ರಾಕೇಶ್ ಕಿಶೋರ್‌ರನ್ನು ಸಮರ್ಥಿಸಿಕೊಂಡಿರುವುದು… ಈ ಎಲ್ಲಾ ಘಟನೆಗಳು ಆರ್‌ಎಸ್‌ಎಸ್ ಹಾಗೂ ಬಿಜೆಪಿಗೆ ಅಂಬೇಡ್ಕರ್ ಮೇಲಿನ ದ್ವೇಷವನ್ನು ಎದ್ದು ಕಾಣುವಂತೆ ಮಾಡಿದೆ.

ಇಂತಹ ದ್ವೇಷಕಾರುವ ಮತ್ತು ಸುಳ್ಳು ಇತಿಹಾಸವನ್ನು ಅಂಬೇಡ್ಕರ್ ಮೇಲೆ ಸೃಷ್ಟಿಸುತ್ತಾ ಬಂದಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಿದ್ಧಾಂತಗಳಿಗೆ ವರ್ತಮಾನದಲ್ಲಿ ಅಂಬೇಡ್ಕರ್ ಬಿಟ್ಟು ಮುಂದೆ ಸಾಗುವುದು ಕಷ್ಟವೆಂದು ಅರ್ಥವಾಗಿದೆ. ಈ ದಿಶೆಯಿಂದಲೆ ದಲಿತರಿಗೆ ಭಾರತ ದೇಶದ ಸುಳ್ಳು ಇತಿಹಾಸವನ್ನು ಹೇಳುತ್ತಾ ಆರ್‌ಎಸ್‌ಎಸ್ ಕಟ್ಟಾಳುಗಳಾನ್ನಾಗಿ ಮಾಡಿ, ಧರ್ಮಾಂಧತೆಯಲ್ಲಿ ಮುಳುಗಿಸಿ ದೇವರು ಎಂಬ ಮೌಢ್ಯದೊಳಗೆ ಅದ್ದಿ ತೆಗೆಯಲಾಗುತ್ತಿದೆ. ಇದರಿಂದ ಹಿಂದೂ-ಮುಸ್ಲಿಂ ಎಂಬ ಧರ್ಮ ದ್ವೇಷದ ಬೀಜಬಿತ್ತಿ ಅವರನ್ನು ಬಲಿ ತೆಗೆದು ಕೊಳ್ಳಲಾಗುತ್ತಿದ್ದು, ಅದು ಯಶಸ್ವಿಯಾಗಿಯೂ ನಡೆಯುತ್ತಿದೆ. ಇನ್ನೂ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅವರನ್ನು ದುರ್ಬಲಗೊಳಿಸಲು ಬಿಜೆಪಿ ಸರ್ಕಾರವು ಈ ಹಿಂದೆ ರೋಹಿತ್ ಚಕ್ರತೀರ್ಥನ ಮೂಲಕ ಕುವೆಂಪುರವರಂತಹ ಪಠ್ಯವನ್ನು ಕೈಬಿಟ್ಟು, ಹೆಡ್ಗೆವಾರ್ ಮೂಲಕ ಆರ್‌ಎಸ್‌ಎಸ್ ಅಜೆಂಡಾ ಸೇರಿಸುವ ಪ್ರಯತ್ನವನ್ನೂ ಮಾಡಿದೆ. ಇನ್ನೊಂದೆಡೆ ವಿದ್ಯಾವಂತ, ಅವಿದ್ಯಾವಂತ ಎಂಬ ಯಾವುದೇ ಇಬ್ಬಾಗ ಮಾಡದೆ ಎಲ್ಲಾ ಕ್ಷೇತ್ರದಲ್ಲಿನ ದಲಿತರನ್ನು ಟಾರ್ಗೆಟ್ ಮಾಡಿಕೊಂಡು ಮನುವಾದಿಯ ಕಾರ್ಯ ಸಾಧನೆ ಮಾಡುತ್ತಿದೆ. ಇದಕ್ಕೆ “ ನಾನು ಒಬ್ಬ ದಲಿತ, ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದರಿಂದ ಇಂತಹ ಕೃತ್ಯ ಎಸಗಿದ್ದೇನೆ ಎಂದು ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್” ನೀಡಿದ ಹೇಳಿಕೆ ಹಾಗೂ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ದಲಿತರ ನಾಯಕರಾಗಲಿ ಅಥವಾ ಮುಖಂಡರಾಗಲಿ ಆ ಘಟನೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ ಧೈರ್ಯ ತೋರದೆ ಇರುವುದು ಮನುವಾದಿ ತನವನ್ನು ಬಲವಾಗಿ ಸಾಕ್ಷೀಕರಿಸಿದೆ.

ಇನ್ನೂ ದಲಿತ ಯುವಕರ ಕೂಡ ತಮ್ಮ ನಾಯಕನ ಬಗೆಗಿನ ಅವಹೇಳನ ಹಾಗೂ ಸಮುದಾಯದ ಮೇಲಾಗುತ್ತಿರುವ ಶೋಷಣೆ, ಜಾತಿ ತಾರತಮ್ಯ ಬಗ್ಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಯಾಕೆ ಬೀದಿಗಿಳಿಯುತ್ತಿಲ್ಲ ಎಂಬ ಚಿಂತನೆಯನ್ನು ಮಾಡದೆ, ಅದನ್ನು ಪ್ರಶ್ನಿಸುವ ಗೋಜಿಗೂ ಹೋಗದೆ ಅವರು ತುಂಬಿರುವ ಧರ್ಮಾಂಧತೆಯ ದಾಸರಾಗಿ ಅನ್ಯಧರ್ಮಗಳ ಮೇಲೆ ವಿಷಕಾರುತ್ತಾ ತಮ್ಮ ನಾಶವನ್ನು ತಾವೇ ಮಾಡಿಕೊಳ್ಳಲು ಸನ್ನದ್ದರಾಗಿದ್ದಾರೆ. ಇತ್ತ ಆರ್‌ಎಸ್‌ಎಸ್ ಮತ್ತು ಅದರ ಪರಿವಾರಗಳು ಇತಿಹಾಸದ ಪುಷ್ಯಶೃಂಗ ಮಿತ್ರ ಹಾಗೂ ತಂಗಲಾನ್‌ ನ ಬ್ರಾಹ್ಮಣನಾಗಿ ತಮ್ಮ ಹಿತಾಸಕ್ತಿ ಸಾಧಿಸಿಕೊಳ್ಳಲು ಯಶಸ್ವಿಯಾಗುತ್ತಿವೆ.!

ಆಕಾಶ್.ಆರ್.ಎಸ್

ಪತ್ರಕರ್ತ

ಇದನ್ನೂ ಓದಿ- http://ದಸರಾ, ಬಾನು ಮುಷ್ತಾಕ್ ಮತ್ತು ನಾಡ ಸಂಸ್ಕೃತಿ‌ -ಭಾಗ-2 https://kannadaplanet.com/dussehra-banu-mushtaq-and-the-culture-of-the-country-part-2/

More articles

Latest article