ಸಂವಿಧಾನಕ್ಕೆ ಬಿಜೆಪಿ, ಆರ್​ಎಸ್​ಎಸ್ ನಿರಂತರ ಅವಮಾನ; ರಾಹುಲ್‌ ಗಾಂಧಿ ಆರೋಪ

Most read

ನವದೆಹಲಿ: ಬಿಜೆಪಿ- ಆರ್​ಎಸ್​ಎಸ್​ ಸಂವಿಧಾನ ಶಿಲ್ಪಿ ಬಿ.ಆರ್​ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನವನ್ನು ಅವಮಾನಿಸುತ್ತಲೇ ಬಂದಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದಲ್ಲಿರುವವರು ಸಂವಿಧಾನ ರಕ್ಷಿಸುವಂತೆ ಪಕ್ಷದ ಕಾರ್ಯಕರ್ತರು ನಿರಮತರವಾಗಿ ಆಗ್ರಹಪಡಿಸುತ್ತಲೇ ಇರಬೇಕು ಎಂದೂ ಅವರು ಕರೆ ನೀಡಿದ್ದಾರೆ.

ಮಧ್ಯಪ್ರದೇಶದ ಇಂಡೋರ್‌ ನಲ್ಲಿ ನಡೆದ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಎಂದಿಗೂ ಜಾತಿ ಜನಗಣತಿಯನ್ನು ಮಾಡಲಾರರು ಎಂದು ಟೀಕಿಸಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಜಾತಿಗಣತಿ ಆರಂಭಿಸುವುದಾಗಿ ಹೇಳಿದರು.  ಕಾಂಗ್ರೆಸ್ ಶೇ. 50ರಷ್ಟು ಮೀಸಲಾತಿಯ ಮಿತಿಯನ್ನು ದಾಟಿ ಮೀಸಲಾತಿ ತರಲಿದೆ. ಇದಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕಾನೂನು ತರಲಿದೆ ಎಂದು ಪ್ರತಿಪಾದಿಸಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋಟ್ಯಧಿಪತಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದೆ ಮತ್ತು ದೇಶದ ಸಂಪತ್ತನ್ನು ಕೆಲವೇ ಕೆಲವು ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ಮತ್ತು ಬಡವರನ್ನು ಮತ್ತೊಮ್ಮೆ ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ-ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ಅವರು ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ “400 ಪಾರ್” ಎಂಬ ಘೋಷಣೆಯನ್ನು ನೀಡಿದರು ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ದರಗಳು ಕಡಿಮೆಯಾಗುತ್ತಿದ್ದರೂ ಪೆಟ್ರೋಲ್ ಬೆಲೆಗಳು ಏರುತ್ತಿರುವ ಬಗ್ಗೆ ರಾಹುಲ್ ಕಳವಳ ವ್ಯಕ್ತಪಡಿಸಿ ಐಐಎಂ ಮತ್ತು ಐಐಟಿ ಪದವೀಧರರು ಕೂಡ ಉದ್ಯೋಗ ಹುಡುಕಲು ಹೆಣಗಾಡುತ್ತಿದ್ದಾರೆ ಎಂದ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

More articles

Latest article