ಶುಕ್ರವಾರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ರಾಯಲ್‌ ಚಾಲೆಂಜರ್ಸ್‌ ಹಾಗೂ ಸನ್‌ ರೈಸರ್ಸ್‌ ಪಂದ್ಯ ಲಖನೌಗೆ ಶಿಫ್ಟ್

Most read

ಬೆಂಗಳೂರು: ಮೇ 23ರ ಶುಕ್ರವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್‌ ಚಾಲೆಂಜರ್ಸ್‌ (ಆರ್‌ ಸಿಬಿ) ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ (ಎಸ್ ಆರ್‌ಎಚ್) ನಡುವಿನ ಪಂದ್ಯವನ್ನು ಉತ್ತರಪ್ರದೇಶದ ಲಖನೌ ಏಕನಾ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಮೇ 17 ರಂದು ನಗರದಲ್ಲಿ ನಡೆಯಬೇಕಿದ್ದ ಆರ್‌ ಸಿಬಿ ಹಾಗೂ ಕೆಕೆಆರ್‌ ತಂಡಗಳ ನಡುವಿನ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು. ಮೇ 23, ಶುಕ್ರವಾರ ನಗರದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವಿನ ಪಂದ್ಯ ನಡೆಯಬೇಕಿತ್ತು. ಆದರೆ, ಈ ಪಂದ್ಯಕ್ಕೂ ಮಳೆಯ ಆತಂಕ ಎದುರಾಗಿದೆ.

ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ನೀಡಿದ ಕಾರಣದಿಂದ ಪಂದ್ಯದ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ವರದಿಯಾಗಿದೆ. ಗುರುವಾರದವರೆಗೆ ಬೆಂಗಳೂರಿನಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಆದ್ದರಿಂದ ಆರ್‌ ಸಿಬಿ ತಂಡವು ಟೂರ್ನಿಯ ಲೀಗ್‌ ಹಂತದಲ್ಲಿ ತನ್ನ ಉಳಿದ ಎರಡು ಪಂದ್ಯಗಳನ್ನು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಆಡಲಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಗಳು ಮುಕ್ತಾಯವಾಗಿವೆ.

ಅತ್ತ, ಐಪಿಎಲ್‌ ಪ್ಲೇಆಫ್‌ ಹಂತದ ಪಂದ್ಯಗಳಿಗೂ ಆತಿಥ್ಯ ಸ್ಥಳ ಬಹುತೇಕ ಅಂತಿಮವಾಗಿದೆ. ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂ ಜೂನ್ 3ರಂದು ಐಪಿಎಲ್ 2025ರ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಇಎಸ್‌ ಪಿಎನ್ ಕ್ರಿಕ್ ಇನ್ಫೋ ಮಾಹಿತಿ ಪ್ರಕಾರ, ಈ ಸ್ಥಳವು ಜೂನ್ 1ರಂದು ನಡೆಯುವ ಕ್ವಾಲಿಫೈಯರ್ 2 ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೇ 29 ಮತ್ತು 30ರಂದು ಕ್ರಮವಾಗಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.

More articles

Latest article