ಬೆಂಗಳೂರು: ರೌಡಿಶೀಟರ್ ಸುಹಾಸ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ 4 ತಂಡಗಳನ್ನು ರಚಿಸಲಾಗಿದೆ. ಮಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಜನತೆ ಶಾಂತಿ ಕಾಪಾಡಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಗುರುವಾರ ರಾತ್ರಿ 8.30 ಗಂಟೆಗೆ ಈ ಹತ್ಯೆ ನಡೆದಿದೆ. ಸುಹಾಸ್ ಶೆಟ್ಟಿ ಎಂಬ ರೌಡಿ ಶೀಟರ್ ವೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಹತ್ಯೆಯನ್ನು ಯಾರೇ ಮಾಡಿದ್ದರೂ ಸುಮ್ಮನೆ ಬಿಡುವುದಿಲ್ಲ. ಮಂಗಳೂರಿನಲ್ಲಿ ನಡೆದ ಎರಡು ಕೊಲೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಶಾಂತಿ ಕಾಪಾಡಬೇಕು. ಸರ್ಕಾರ ಜನತೆಯ ಜೊತೆಗಿರುತ್ತದೆ. ಪೊಲೀಸ್ ಇಲಾಖೆಯೂ ನಿಮ್ಮ ಜೊತೆಗಿದೆ. ಈಗಾಗಲೇ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಇಂತಹ ಘಟನೆಗಳನ್ನು ಮರುಕಳಿಸದಂತೆ ಎಚ್ಚರಿಎಕ ವಹಿಸಬೇಕು. ಯಾವುದೇ ಪಕ್ಷದ ಸರ್ಕಾರವೂ ಕೊಲೆಗಳಾಗುವುದನ್ನು ಬಯಸುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದರು.
ಹಿಂದೂ ಕಾರ್ಯಕರ್ತ ಎನ್ನಲಾದ ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳ ತಂಡವು ಬಜಪೆಯ ಕಿನ್ನಿಪದವಿನಲ್ಲಿ ತಲವಾರಿನಿಂದ ಕೊಚ್ಚಿ ಗುರುವಾರ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬಜಪೆಯ ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ ಪ್ರಕರಣಗಳೂ ಸೇರಿದಂತೆ ಐದು ಪ್ರಕರಣಗಳು ದಾಖಲಾಗಿದ್ದವು. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾದ ಬೆನ್ನಲ್ಲೇ ಸುರತ್ಕಲ್‌ನಲ್ಲಿ 2022ರ ಜುಲೈ 28ರಂದು ನಡೆದಿದ್ದ ಮಹಮ್ಮದ್ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಕಳೆದ ವರ್ಷ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎಂದು ತಿಳಿದುಬಂದಿದೆ.
ಸುಹಾಸ್ ಶೆಟ್ಟಿ ತನ್ನ ಸಹಚರರಾದ ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಹಾಗೂ ಶಶಾಂಕ್ ಜೊತೆ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳ ತಂಡ ಸ್ವಿಫ್ಟ್ ಕಾರು ಹಾಗೂ ಪಿಕಪ್ ವಾಹನದಲ್ಲಿ ಹಿಂಬಾಲಿಸಿ ಹತ್ಯೆ ಮಾಡಿತ್ತು. ಈ ದುರ್ಘಟನೆಯಲ್ಲಿ ಸುಹಾಸ್ ಶೆಟ್ಟಿಯ ಸಹಚರನೊಬ್ಬ ಗಾಯಗೊಂಡಿದ್ದು, ಆತ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಜಪೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.