ಬೆಂಗಳೂರು: ಗೋವಿಂದರಾಜ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ರೌಡಿಯನ್ನು ಬಂಧಿಸಲಾಗಿದ್ದು, ಆತನಿಂದ 43 ಕೆ.ಜಿ 80 ಗ್ರಾಂ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 25 ಲಕ್ಷ ರೂ. ಎಂದು ತಿಳಿದು ಬಂದಿದೆ. ಈತ ಒಡಿಶಾ ರಾಜ್ಯದಿಂದ ಕಡಿಮೆ ಬೆಲೆಗೆ ಖರೀದಿಸಿ ಬೆಂಗಳೂರಿನಲ್ಲಿರುವ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳವು ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 4.20 ಲಕ್ಷ, ರೂ ಮೌಲ್ಯದ 4 ಕೆ.ಜಿ 185 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಎಂ.ಪಾಳ್ಯದ ವೀರಾಂಜನೇಯಸ್ವಾಮಿ ದೇವಸ್ಥಾನದ ಬಳಿ ದ್ವಿ-ಚಕ್ರ ವಾಹನದಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು.
ವಶಕ್ಕೆ ಪಡೆದ ಇಬ್ಬರು ಆರೋಪಿಗಳು ಆಂದ್ರಪ್ರದೇಶದ ಅರಕ್ಕೂವ್ಯಾಲಿಯ ಪರಿಚಯಸ್ಥರಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ತಂದು ಬೆಂಗಳೂರಿನಲ್ಲಿ ನೆಲೆಸಿರುವ ಪರಿಚಯಸ್ಥರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.