ನವದೆಹಲಿ: ತನ್ನ ಭಾವ ರಾಬರ್ಟ್ ವಾದ್ರ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಹರಿಯಾಣದ ಶಿಖೊಪುರದಲ್ಲಿ ಜಮೀನು ವಹಿವಾಟಿನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ವಿರುದ್ಧ ಇ.ಡಿ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನ ಭಾವನನ್ನು ಈ ಸರ್ಕಾರ ಕಳೆದ 10 ವರ್ಷಗಳಿಂದ ಇನ್ನಿಲ್ಲದಂತೆ ಪೀಡಿಸಿದೆ. ಹೊಸ ಆರೋಪ ಪಟ್ಟಿ ದ್ವೇಷಸಾಧನೆಯ ಮುಂದುವರಿದ ಭಾಗ. ಸತ್ಯ ಹೊರಬರಲೇಬೇಕು. ಸಹೋದರಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಕುಟುಂಬ ಯಾವುದೇ ತರಹದ ಪ್ರಾಸಿಕ್ಯೂಷನ್ ಎದುರಿಸಲು ಸಿದ್ಧವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಅಪಪ್ರಚಾರ ಮತ್ತು ಕಿರುಕುಳದ ದಾಳಿ ಎದುರಿಸಲು ಸಜ್ಜಾಗಿರುವ ರಾಬರ್ಟ್, ಪ್ರಿಯಾಂಕಾ ಹಾಗೂ ಅವರ ಮಕ್ಕಳ ಜೊತೆ ನಿಲ್ಲುತ್ತೇನೆ. ಯಾವುದೇ ತರಹದ ವಿಚಾರಣೆಯನ್ನು ಎದುರಿಸುವಷ್ಟು ಸಾಮರ್ಥ್ಯ ಅವರಿಗಿದೆ ಎಂದು ನನಗೆ ತಿಳಿದಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.