ಮೈಸೂರು: ಬೀದರ್ ಮತ್ತು ಮಂಗಳೂರಿನಲ್ಲಿ ನಡೆದಿರುವ ದರೋಡೆ ಪ್ರಕರಣಗಳು ಮರೆಯುವ ಮನ್ನವೇ ಮೈಸೂರಿನಲ್ಲಿಯೂ ಇಂತಹುದೇ ಘಟನೆ ನಡೆದಿದ್ದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಹಾಡುಹಗಲೇ ಉದ್ಯಮಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರುನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಕಾರು ಸಮೇತ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಸಮೀಪ ಈ ಘಟನೆ ನಡೆದಿದೆ. ಇವರೆಲ್ಲರೂ ಮುಸುಕುದಾರಿಗಳಾಗಿದ್ದರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಕೇರಳ ಮೂಲದ ಉದ್ಯಮಿ ಸೂಫಿ ಎಂಬವರು ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು, ಹಣ ಮತ್ತು ಸೂಫಿ ಅವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಎರಡು ಕಾರುಗಳಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಈ ದರೋಡೆ ನಡೆಸಿದ್ದಾರೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮೈಸೂರಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸೂಫಿ ಅವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.