ಬೆಳಗಾವಿ: ಯಾವಾಗಲೂ ಘರ್ಜಿಸುವ ಹುಲಿಗಳೇ ಗುರಿಯಾಗುತ್ತವೆ. ಹನಿಟ್ರ್ಯಾಪ್ ವಿಷಯದಲ್ಲೂ ಘರ್ಜಿಸುವ ಹುಲಿಗಳನ್ನೇ ಟಾರ್ಗೆಟ್ ಮಾಡಿ, ಸಿ.ಡಿಗಳನ್ನು ತೋರಿಸಿ ಹೆದರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ವಿಷಯದ ಸಂಬಂಧ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರೊಂದಿಗೆ ಚರ್ಚಿಸಿದ್ದು, ಅವರು ಕಾನೂನು ಅಭಿಪ್ರಾಯ ಪಡೆದು ದೂರು ದಾಖಲಿಸಬೇಕು. ಹನಿಟ್ರ್ಯಾಪ್ ವಿಷಯದಲ್ಲಿ ದೂರು ಕೊಟ್ಟ ಮೇಲೆಯೇ ಮುಂದಿನ ದಾರಿ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ರಾಜ್ಯ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಸಮರ್ಥರಾಗಿದ್ದಾರೆ ಎಂದರು.
ಹಲೋ, ಹಾಯ್ ಎನ್ನುವವರು ಯಾವ ದೃಷ್ಟಿಯಿಂದ ಹೀಗೆ ಹೇಳುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಹನಿಟ್ರ್ಯಾಪ್ ಬಗ್ಗೆ ಹೆದರಿಕೆ ಇದ್ದವರು, ಯಾರಾದರೂ ಹಾಯ್ ಎಂದು ಹೇಳಿದರೆ ಅದಕ್ಕೆ ಪ್ರತಿಯಾಗಿ ಹಲೋ ಎನ್ನುವುದಿಲ್ಲ. ಯಾರಿಂದಲಾದರೂ ಕರೆ ಬಂದಾಗ ಎಲ್ಲರೂ ಜಾಗರೂಕರಾಗಿರಬೇಕು. ಸೂಕ್ತವಾಗಿ ಪ್ರತಿಕ್ರಿಯಿಸಬೇಕು ಎಂಬ ಪರಿಸ್ಥಿತಿ ಈಗ ಉದ್ಭವಿಸಿದೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಯಾರೂ ಪಿತೂರಿ ಮಾಡಿದ್ದಾರೆ ಎಂದು ನನಗೂ ಗೊತ್ತಿಲ್ಲ. ರಾಜಕೀಯಕ್ಕಾಗಿ ಮಾತ್ರವಲ್ಲ, ಬ್ಲ್ಯಾಕ್‌ಮೇಲ್ ಮತ್ತು ವ್ಯಾಪಾರ ವಿಷಯವಾಗಿಯೂ ಹನಿಟ್ರ್ಯಾಪ್ ಮಾಡುತ್ತಾರೆ. ಹನಿಟ್ರ್ಯಾಪ್ ವಿಷಯದಲ್ಲಿ 40ಕ್ಕೂ ಅಧಿಕ ಶಾಸಕರನ್ನು ಗುರಿಯಾಗಿ ಇರಿಸಿಕೊಂಡಿರಬಹುದು ಎಂದು ರಾಜಣ್ಣ ಹೇಳಿದ್ದಾರೆ. ಆ ಬಗ್ಗೆ ತನಿಖೆಯಾಗಲಿ. ಅಧಿವೇಶನದಲ್ಲಿ ಹನಿಟ್ರ್ಯಾಪ್ ವಿಷಯದ ಮೊದಲು ಮಾತನಾಡಿದ್ದು ನಾನೇ ಹೊರತು, ಬಿಜೆಪಿಯವರಲ್ಲ ಎಂದು ತಿಳಿಸಿದರು
ಈ ಬಗ್ಗೆ ಮಾತನಾಡಲು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಕಾಂಗ್ರೆಸ್‌ನವರೇ ಚೀಟಿ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ, ಚೀಟಿ ಕೊಟ್ಟರೆ ಯತ್ನಾಳ ಮಾತನಾಡುತ್ತಾರಾ ಎಂದು ವ್ಯಂಗ್ಯವಾಡಿದರು. ಹನಿಟ್ರ್ಯಾಪ್ ವಿಚಾರವಾಗಿ ಯಾವ ರೀತಿ ತನಿಖೆ ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗ ನಡೆದ ಹನಿಟ್ರ್ಯಾಪ್ ಯತ್ನ ಯಾವ ಕಾರಣಕ್ಕೆ ಆಗಿದೆ ಎಂದು ತನಿಖೆಯಿಂದ ತಿಳಿಯಬೇಕು. ಅದರ ಹಿಂದೆ ಯಾರು ಇದ್ದಾರೆ ಎಂದು ಗೊತ್ತಾಗಬೇಕು ಎಂದು ತಿಳಿಸಿದರು.