ಕೊಡಗಿನಲ್ಲಿ  ಭಾರಿ ಮಳೆಗೆ ಕೊಚ್ಚಿ ಹೋದ ರಸ್ತೆಗಳು: ಬೆಂಗಳೂರಿನಲ್ಲಿ YELLOW ALERT ಘೋಷಣೆ

Most read

ಬೆಂಗಳೂರು: ರಾಜ್ಯದ ನಾನಾ ಭಾಗಗಳಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಹೆಚ್ಚುತ್ತಲೇ ಇದ್ದು, ಕೊಡಗು ಜಿಲ್ಲೆಯಲ್ಲಿ ಹಲವೆಡೆ ಮಳೆಯ ಅಬ್ಬರಕ್ಕೆ ರಸ್ತೆಗಳು ಕೊಚ್ಚಿಹೋಗಿವೆ. ಭಾರೀ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗಿದ್ದು ರಸ್ತೆಗಳು ಜಲಾವೃತಗೊಂಡಿವೆ.

ಭಾಗಮಂಡಲ, ತಲಕಾವೇರಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರು ಮನೆಯಿಂದ ಹೊರಗೆ ಬರುವುದೇ ಕಷ್ಟಕರವಾಗಿದೆ. ಕೊಪ್ಪ ಸಮೀಪದ ಹಾರನಹಳ್ಳಿಯಲ್ಲಿ ಹೋದ ವರ್ಷದ ಹಿಂದಷ್ಟೇ ನಿರ್ಮಿಸಿದ್ದ ರಸ್ತೆ ಕೊಚ್ಚಿಹೋಗಿರುವ ವರದಿಯಾಗಿದೆ.  ರಸ್ತೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಕುಶಾಲನಗರ, ಪಿರಿಯಾಪಟ್ಟಣಗಳಲ್ಲಿ ರಸ್ತೆಗಳು ಕೊಚ್ಚಿಹೋದ ಹಿನ್ನೆಲೆಯಲ್ಲಿ ರಸ್ತೆ ಸಂಪರ್ಕವೇ ಇಲ್ಲದಂತೆ ಸಾರ್ವಜನಿಕರು ಪರದಾಡುವಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಭರ್ಜರಿ ಮಳೆಯಾಗುತ್ತಿದ್ದು ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ. ಕಡೂರು ಹೇಮಗಿರಿ, ಕೆರೆಸಂತೆ ಭಾಗದಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಯರದಕೆರೆ ದೊಡ್ಡಮ್ಮ ದೇವಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ  ಗ್ರಾಮಕ್ಕೆ ಕೆರೆ ನೀರು ನುಗ್ಗಿದೆ. ಭಾರಿ ಮಳೆಯಿಂದಾಗಿ ಶುಂಠಿ ಬೆಳೆ ಸಂಪೂರ್ಣ ನೀರುಪಾಲಾಗಿದೆ. ಜಿಲ್ಲೆಯಲ್ಲಿ ವರುಣನ ಆರ್ಭಟದಿಂದಾಗಿ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಎನ್. ಆರ್.ಪುರ, ಮೂಡಿಗೆರೆ, ಕೊಪ್ಪ, ಜಯಪುರ, ಬಾಳೆಹೊನ್ನೂರು, ಬಸರಿಕಟ್ಟೆ ಭಾಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಇಂದೂ ಸಹ ಭರ್ಜರಿ ಮುಂಗಾರು ಪೂರ್ವ ಮಳೆಯಾಗಿಲಿದೆ. ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಳೆ ಸಾಧ್ಯತೆಯಿದ್ದು  ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಭಾರೀ ಪ್ರಮಾಣದ ಮೇಲ್ಮೈ ಗಾಳಿಯೊಂದಿಗೆ ಗುಡುಗು, ಮಿಂಚಿನೊಂದಿಗೆ ಮಳೆ ಸುರಿಯುವ ನಿರೀಕ್ಷೆ ಇದೆ.

ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅತಿಹೆಚ್ಚು ಮಳೆ ದಾಖಲಾದ ಜಿಲ್ಲೆಗಳ ವಿವರ ಇಲ್ಲಿದೆ:

ದಕ್ಷಿಣ ಕನ್ನಡ – 132.5 ಮೀ.ಮೀ ಮಳೆ.

ಚಿಕ್ಕಮಗಳೂರು- 122 ಮೀ.ಮೀ ಮಳೆ.

ಮೈಸೂರು- 116.5 ಮೀ.ಮೀ ಮಳೆ.

ಚಾಮರಾಜನಗರ – 103 ಮೀ.ಮೀ ಮಳೆ.

ಹಾಸನ- 102 ಮೀ.ಮೀ ಮಳೆ.

ಚಿತ್ರದುರ್ಗ- 101 ಮೀ.ಮೀ ಮಳೆ.

More articles

Latest article