ಬೆಂಗಳೂರು: ಆರಂಭದಿಂದಲೂ ನಾನು ಸನಾತನವಾದಿ ಆರ್ ಎಸ್ ಎಸ್, ಜಾತಿ ವ್ಯವಸ್ಥೆ ಮತ್ತು ಮೌಡ್ಯದ ವಿರುದ್ಧ ಇದ್ದೇನೆ ಎಂದು ಸಿ.ಎಂ.ಸಿದ್ದರಾಮಯ್ಯ ಹೇಳೀದ್ದಾರೆ. ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜವನ್ನು ಒಡೆದು ಜಾತಿ ವ್ಯವಸ್ಥೆ ರೂಪಿಸಿದ ಸಿದ್ಧಾಂತ RSS ನದ್ದು. ಈ ಸಿದ್ಧಾಂತ ಶ್ರಮಿಕ ಜಾತಿ, ವರ್ಗಗಳ ವಿರೋಧಿ. ಅದಕ್ಕೇ ನಾನು RSS ಅನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಇದೇ ಕಾರಣಕ್ಕೆ ಕಾಗಿನೆಲೆ ಪೀಠ ಎಲ್ಲಾ ಶೋಷಿತ ಸಮುದಾಯಗಳ ಪೀಠ ಆಗಬೇಕು ಎನ್ನುವುದನ್ನು ಪ್ರತಿಪಾದಿಸಿದ್ದೆ ಎಂದರು.
ನೂರು ವರ್ಷದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರದೇಶ ಕುರುಬರ ಸಂಘದಿಂದ ಬೇಡಿಕೆ ಮತ್ತು ಒತ್ತಾಯ ಬಹಳ ವರ್ಷಗಳಿಂದ ಇತ್ತು. ಈಗ ಎಲ್ಲರನ್ನೂ ಒಪ್ಪಿಸಿ ಹಳೆ ಕಟ್ಟಡ ನೆಲಸಮ ಮಾಡಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕೂಡ ಆಗಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ 18 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದರು.
ಹಳೆ ಕಟ್ಟಡದಲ್ಲಿದ್ದ ಹಾಸ್ಟೆಲ್ ನಲ್ಲಿ ಓದಿದವರು ಒಳ್ಳೊಳ್ಳೆ ಅಧಿಕಾರಿಗಳಾಗಿದ್ದಾರೆ. ಜಡ್ಜ್ ಗಳೂ ಆಗಿದ್ದಾರೆ. ನಾನು 1983 ರಲ್ಲಿ ಶಾಸಕನಾಗಿ 1984 ರಲ್ಲಿ ಮಂತ್ರಿ ಆದೆ. ನಾನು ಸಾರಿಗೆ ಮಂತ್ರಿ ಆಗಿದ್ದಾಗ 1988 ರಲ್ಲೇ ಕನಕದಾಸರ 500ನೇ ಜಯಂತ್ಸೋವವನ್ನು ಆಚರಣೆ ಮಾಡಿಸಿದೆ. ಇದೇ ಸಂದರ್ಭದಲ್ಲಿ ಸಮಾಜಕ್ಕೊಂದು ಗುರುಪೀಠ ಬೇಕು ಎಂದು ತೀರ್ಮಾನಿಸಿದೆ. ಆಗ ಸಂಘದ ಕಟ್ಟಡದ ಮೇಲೆ 3 ಕೋಟಿ ರೂಪಾಯಿ ಸಾಲ ಇತ್ತು. ಆ ಸಾಲದ ಸುಳಿಯಿಂದ ಸಂಘವನ್ನು ಬಿಡಿಸಿದ್ದು ನಾವು. ಇದು ಇತಿಹಾಸ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬ ಸಂಘದ ಕಟ್ಟಡವೂ ಉಳಿಯುತ್ತಿರಲಿಲ್ಲ, ಕಾಗಿನೆಲೆ ಪೀಠವೂ ಆಗುತ್ತಿರಲಿಲ್ಲ, ರಿಯಲ್ ಎಸ್ಟೇಟ್ ರೌಡಿಗಳಿಂದ ಬೈರಪ್ಪನ ಗುಡಿ ಮತ್ತು ಸಮಾಜದ ಭೂಮಿ, ಕಟ್ಟಡಗಳನ್ನು ಉಳಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಇತಿಹಾಸದ ಘಟನೆಗಳನ್ನು ಒಂದೊಂದಾಗಿ ವಿವರಿಸಿದರು.
ನಾನು ಕೇವಲ ಕುರುಬ ಸಮಾಜಕ್ಕೆ ಮಾತ್ರ ಕೊಡುಗೆ ನೀಡಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲಾ ಶೋಷಿತ ಸಮುದಾಯಗಳ ಏಳಿಗೆಗೂ ನಾನು ಕೆಲಸ ಮಾಡಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಭಾಗ್ಯಗಳು, ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಜಾರಿಗೆ ತಂದ ಗ್ಯಾರಂಟಿಗಳು ಎಲ್ಲಾ ಜಾತಿಯ ಬಡವರಿಗಾಗಿ ಜಾರಿ ಆಗಿದೆ. ಸರ್ವರನ್ನೂ ಒಳಗೊಂಡ, ಸರ್ವರ ಅಭಿವೃದ್ಧಿಯ ಸಮಾಜ ನಿರ್ಮಾಣ ನನ್ನ ಗುರಿ ಎಂದರು.
ಅದಕ್ಕೇ ರಾಜ್ಯದ ಎಲ್ಲಾ ಜಾತಿಯ, ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರೂ ನನ್ನನ್ನು ಪ್ರೀತಿಸ್ತಾರೆ. ಹೀಗಾಗಿ ನಾನು ನಮ್ಮ ಜಾತಿ ಸೇರಿ ಸಮಾಜದ ಎಲ್ಲಾ ಜಾತಿ, ಧರ್ಮದವರ ಆಶೀರ್ವಾದಕ್ಕಾಗಿ ನಾನು ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಮತ್ತು ತಿಂತಿಣಿ ಮಠದ ಸಿದ್ದರಾಮೇಶ್ವರ ನಂದಾಪುರಿ ಸ್ವಾಮೀಜಿ, ಸಚಿವ ಬೈರತಿ ಸುರೇಶ್ ಸೇರಿ ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮಾಜದ ಹಾಲಿ/ಮಾಜಿ ಸಚಿವರುಗಳು, ಶಾಸಕರುಗಳು ಸೇರಿ ಹಲವು ಗಣ್ಯರುಗಳು ಉಪಸ್ಥಿತರಿದ್ದರು.

