ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್ ಮಳೀಮಠ್. ಹಾಸ್ಟೆಲ್‌ನಲ್ಲಿ ದೆವ್ವದ ಚಮತ್ಕಾರ ಮತ್ತು ದೆವ್ವ ಬಿಡಿಸಿದ ಪ್ರಸಂಗ ಈ ಕೊನೆಯ ಕಂತಿನಲ್ಲಿದೆ.
ಈ ಹಿಂದಿನ ಕಂತುಗಳನ್ನು ಓದಿದ್ದೀರಾ? ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 3
ಶಾಲೆಯ ದೆವ್ವದ ಗಲಾಟೆಯು ಕೋಡೂರನ್ನು ಒಂದು ಮಾಡಿತ್ತು. ಶಾಲೆಗೆ ಬಂದ ಎಲ್ಲಾ ವಿದ್ಯಾರ್ಥಿಗಳು “ನಿನ್ನೆ ರಾತ್ರಿ ಯಾರಿಗಾದರೂ ದೆವ್ವ ಬಂದಿತ್ತಾ? ಬೆಳಿಗ್ಗೆ ಯಾರಿಗಾದ್ರೂ ಬಂದಿತ್ತಾ?” ಇತ್ಯಾದಿ ಪ್ರಶ್ನೆಗಳನ್ನು ಕೇಳಿ ನಾವು ಉತ್ತರಿಸಿಯೇ ತರಗತಿಯನ್ನು ಕೇಳಬಹುದಾದ ಸನ್ನಿವೇಶಕ್ಕೆ ಬಂದು ನಿಂತಿತ್ತು. ಅವತ್ತೊಂದು ದಿನ ವಾರ್ಡನ್ ತಮ್ಮ ಕೆಲಸ ನಿಮಿತ್ತ ಸಂಜೆ ಹಾಸ್ಟೆಲ್ಲಿಗೆ ಭೇಟಿ ನೀಡದೆ ಊರಿಗೆ ಹೋಗಿದ್ದರು. ಇದೇ ಸಮಯ ಕಾದ, ಕೋಡೂರಿನ ಊರೊಳಗೆ ರೂಂ ಮಾಡಿಕೊಂಡಿದ್ದ ಶೇಖರಪ್ಪ ಮತ್ತು ತಂಡದವರು ಇವತ್ತು ರಾತ್ರಿ ಹಾಸ್ಟೆಲ್ಲಿನಲ್ಲಿ ಇರೋರಿಗೆ ಹೆದ್ರುಸ ಬೇಕೆಂದು ತೀರ್ಮಾನಿಸಿದ್ದರು. ವಾರ್ಡನ್ನು ಹಾಸ್ಟೆಲ್ಲಿನಲ್ಲಿ ಇಲ್ಲಾಂದ್ರೆ ಏನೋ ಒಂದು ರೀತಿಯ ಸಂಭ್ರಮ ನಮ್ಮೆಲ್ಲರದಾಗಿರುತ್ತಿತ್ತು.
ಎಂದಿನಂತೆ ಗಡದ್ದಾಗಿ ಊಟ ಮುಗಿಸಿ, ದೆವ್ವದ ಸುದ್ದಿಯೂ ಸೇರಿದಂತೆ ಬೇಕಾದ ಬೇಡವಾದ ಮಾತುಗಳನ್ನಾಡಿ ನಿದ್ರೆಗೆ ಜಾರಿದ್ದೆವು. ರಾತ್ರಿ ಹನ್ನೊಂದರ ಸಮಯಕ್ಕೆ ಹಾಸ್ಟೆಲ್ಲಿನ ಹಂಚಿನ ಮನೆಗೆ ಶೇಖರಪ್ಪ ಮತ್ತು ತಂಡದವರು ಕಲ್ಲುಗಳನ್ನು ತೂರಿ ಬಿಟ್ಟರು. ಒಂದೊಂದೆ ಕಲ್ಲುಗಳು ಕಟ ಕಟ ಶಬ್ದ ಮಾಡಿಕೊಂಡು ಇಳಿದಿಳಿದು ಹೋದವು. ಹೀಗೆ ನಾಲ್ಕಾರು ಬಾರಿ ಕಲ್ಲುಗಳನ್ನು ತೂರಿದರು. ಇಷ್ಟಲ್ಲದೇ ಹಾಸ್ಟೆಲ್ಲಿನ ಹಿಂಬದಿಯಲ್ಲಿ ಹುಂ…. ಹುಂ…. ಹೂಂ… ಊಂ… ಊಂ… ಅನ್ನುವ ಶಬ್ದವನ್ನು ಮಾಡಿದರು. ಈಗಾಗಲೇ ದೆವ್ವದ ಸುದ್ದಿ ಹುಡುಗರ ಮನಸ್ಸಿನ ಆಳದೊಳಗೆ ಜಾಗಮಾಡಿಕೊಂಡು ಹೊರಬರುವ ಹವಣಿಕೆಯಲ್ಲಿತ್ತು. ಕಲ್ಲು ತೂರಾಟವೂ ದೆವ್ವವೆಂದೇ ಭಾವಿಸಲು ಸಮಯ ಬೇಕಿರಲಿಲ್ಲ. ಕಲ್ಲಿನ ಶಬ್ದವನ್ನು ಕೇಳಿಸಿಕೊಂಡ ಎಂಟನೇ ತರಗತಿಯ ಮಲಗದೇ ಇರುವ ಕೆಲವು ಹುಡುಗರು, ಮಲಗಿದವರನ್ನು ಎಬ್ಬಿಸಿ, ದೆವ್ವ ಬಂದಿದೇ ಓಡಿ ಬರ್ರೋ ಎಂದು ಕೂಗೆಬ್ಬಿಸಿ ಓಡಿದರು. ಇವರ ಕೂಗಿಗೆ ಜಗುಲಿಯಲ್ಲಿ ಮಲಗಿದ, ಕಡಿಮಾಡಲ್ಲಿ ಮಲಗಿದ ಎಲ್ಲರೂ ಓಡೋಡಿ ಮುಂಬಾಗಿಲನ ಕಡೆ ಸಾಗಿದರು. ಚಿಕ್ಕದಾದ, ಒಂದು ಬಾರಿಗೆ ಇಬ್ಬರು ಮಾತ್ರ ಪ್ರವೇಶಿಸುವ ಈ ದ್ವಾರಂದದಲ್ಲಿ ನಾಲ್ಕಾರು ಹುಡುಗರು ನುಗ್ಗಿ ಮುಂದಿನ ರಸ್ತೆಗೆ ಹಾರಿದರು. ಬಾಗಿಲು ದಾಟಿದ ಮೇಲೆಯೂ ಒಂದು ಬಿದಿರು ಬೇಲಿ ಇತ್ತು. ಅದರ ಮೇಲೆಯೂ ಕೆಲವರು ನೆಗೆದರು. ಬಾಗಿಲು ದಾಟುವಾಗ ಕೆಲವರ ಕಿವಿಯೂ ಹರಿಯಿತು, ಕೆಲವರು ಕಾಲೂ, ಕೈಯನ್ನು ಉಳ್ಕು ಮಾಡಿಕೊಂಡರು. ಓಡುವಾಗ ಬಿದ್ದವರ ಮೇಲೆಯೇ ಕೆಲವರು ದಾಟಿ ಹೋದರು. ಬೇಲಿ ಹಾರಿದ ರಭಸದಲ್ಲಿ ಗಣಪತಿಯ ಗುಪ್ತಾಂಗದ ಬದಿಯ ತೊಡೆ ಸೀಳಿ, ರಕ್ತ ಪಾದದವರೆಗೆ ಇಳಿದಿತ್ತು. ಗಣೇಶನ ಕಾಲಿನ ಮಂಡಿಯೂ, ಸತೀಶನ ಮುಂಗೈ, ಈಶ್ವರನ ತಲೆಯೂ, ಗುರುಮೂರ್ತಿಯ ಕಾಲಿನ ಹೆಬ್ಬೆರಳು, ಪ್ರಕಾಶನ ತುಟಿಯೂ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಮರೆಯಲು ಅಸಾಧ್ಯವಾದ ಗುರುತುಗಳು ಆದವು.
ಈ ಗಲಾಟೆಯೂ ಸುತ್ತಮುತ್ತಲ ಮನೆಗಳನ್ನು ಆವರಿಸಿ, ಎಲ್ಲರೂ ಓಡೋಡಿ ಬಂದರು. ಯಾರೋ ವಾರ್ಡನ್ನಿಗೆ, ಊರಲ್ಲಿರುವ ಮೇಷ್ಟ್ರುಗಳಿಗೂ ಸುದ್ದಿಯನ್ನು ಮುಟ್ಟಿಸಿದರು. ಹುಡುಗರ ಈ ಪರಿಸ್ಥಿತಿಯನ್ನು ನೋಡಿ ಅವರ ಎದುರಿಗೆ ಊರಿಗೆ ಹೋದ ಧರ್ಮಪ್ಪ, ರಮೇಶ, ಸ್ವಾಮಿ ನೆನಪಾಗಿ, ಇದು ದೆವ್ವದ ಚಮತ್ಕಾರವೇ ಸರಿ ಎಂದು ಮನದಲ್ಲಿ ಮಾತಾಡಿಕೊಂಡರು. ಹುಡುಗರಿಗೆ ಧೈರ್ಯವನ್ನು ಹೇಳಿ, ಮಲಕೊಳ್ಳಿ ಹೆದರಬೇಡಿ ಎಂದು ಮೇಷ್ಟ್ರು ಹೋದರು. ಊರಿಗೆ ಹೋದ ವಾರ್ಡನ್ ಕೊನೆ ಬಸ್ಸಿಗೆ ಬಂದಿಳಿದರು. ವಾರ್ಡನ್ನು ಅವತ್ತು ಹಾಸ್ಟೆಲ್ಲಿನಲ್ಲಿ ತಮ್ಮ ಕಛೇರಿಯಲ್ಲಿ ಮಲಗಿಕೊಂಡು ದೆವ್ವ ಮತ್ತೆ ಬರಬಹುದಾ ಎಂಬ ಯೋಚನೆಯಲ್ಲಿ ಇದ್ದು, ಕಾದರು. ದೆವ್ವದ ಸುಳಿವೂ ಎಳ್ಳಷ್ಟೂ ಸಿಗಲಿಲ್ಲ. ವಾರ್ಡನ್ನಿಗೆ ಇದೊಂದು ಯಕ್ಷಪ್ರಶ್ನೆಯಾಗಿಯೇ ಉಳಿದುಕೊಂಡಿತು. ಮಾರನೇ ದಿನ ಬೆಳಿಗ್ಗೆ ತಿಂಡಿ ತಿಂದು ಬರುವ ನನಗೆ ಮೂಲೆಯಲ್ಲಿ ಬಿದ್ದ ಕಲ್ಲೊಂದು ಸಿಕ್ಕಿತು.
“ನೋಡ್ರೋ ಇದೇ ಕಲ್ಲು, ನಿನ್ನೆ ನಮ್ಮನ್ನೆಲ್ಲ ಕಲ್ಲು ಹೊಡೆದು ಹೆದುರಿಸಿದ್ದು ಎಂದು ಎದುರಿಗೆ ಬಂದ ರಮೇಶನಿಗೆ ತೋರಿಸಿದೆ. ಅವನು ಆ ಕಲ್ಲನ್ನು ನೋಡಿ, “ನಿನ್ನ ತಲೆ, ನಿನ್ನೆ ದೆವ್ವದ ಚಮತ್ಕಾರವೇ ನಡೆದಿದ್ದು, ನಿನಗೆ ಯಂಥಾ ಗೊತ್ತು” ಎಂದು ಕೊಟ್ಟ ಕಲ್ಲನ್ನು ಮತ್ತು ನನ್ನ ಮಾತನ್ನು ಬಿಸಾಕಿದ. ದೆವ್ವದ ಲೋಕದಲ್ಲಿ ಮುಳುಗಿದ್ದ ಗೆಳೆಯರಿಗೆಲ್ಲ ನನ್ನ ಮಾತನ್ನು ಸೌಜನ್ಯಕ್ಕೂ ಕೇಳಿಸಿಕೊಳ್ಳುವ ಪರಿಯಿರಲಿಲ್ಲ.
ಅತ್ತ ಊರಿಗೆ ಹೋದ ಧರ್ಮಪ್ಪನಿಗೆ ಅವನ ಅಪ್ಪ ತಾನು ನಂಬಿಕೊಂಡಿದ್ದೆಲ್ಲಾ ಪೂಜೆಪುನಸ್ಕಾರಗಳನ್ನೆಲ್ಲಾ ಮಾಡಿ ಮುಗಿಸಿದ. ಆದರೆ ನೆಮ್ಮದಿ ಸಿಗಲಿಲ್ಲ. ಮುಂಬಾರು ಸಮೀಪದ ಗಾಡಿಗನೊಬ್ಬನು ತಾನು ನಿನ್ನ ಮಗನ ದೆವ್ವ ಬಿಡಿಸುವುದಾಗಿ ಹೇಳಿದನು. ಇದನ್ನು ನಂಬಿದ ತಂದೆಯೂ ಗಾಡಿಗ ಹೇಳಿದ ಹತಾರಗಳನ್ನೆಲ್ಲಾ ಸಿದ್ದಮಾಡಿಕೊಂಡು, ಕೋಡೂರಿನಿಂದ ಹಾಸ್ಟೆಲ್ ಮನೆಮಾಲಿಕ ದಿವಾಕರಣ್ಣನನ್ನು ಕರೆಸಿಕೊಂಡು ಮೂರು ಹೊಳೆ ಕೂಡುವ ಜಾಗದಲ್ಲಿ ಸೇರಿಕೊಂಡರು. ಮೂರು ಹೊಳೆ ಕೂಡುವ ಮಧ್ಯದಲ್ಲಿ ದೊಡ್ಡ ಕಲ್ಲಿನ ಮೇಲೆ ಕೂರಿಸಿಕೊಂಡು, ಒಂದು ಗಿಂಡಿಯಲ್ಲಿ ನೀರು ತುಂಬಿಸಿಕೊಂಡು, ಕೆಂಪು, ಅರಿಶಿನ ಬಣ್ಣದ ಹೂವುಗಳನ್ನು ಮುಡಿಸಿ, ಕುಂಕುಮ, ಕರ್ಪೂರ ಹಚ್ಚಿದನು. ಹತ್ತಾರು ಕಡಬತ್ತಿಗಳು ಸುತ್ತಲೂ ಉರಿಯುವಂತೆ ಮಾಡಿ, ಹೊಳೆಯಿಂದಲೇ ಬೆಂಕಿ ಎದ್ದು ಬಂದಂತೆ ಕಾಣಿಸುವಂತೆ ಮಾಡಿದನು. ಆ ಹೊತ್ತಿಗೆ ದೆವ್ವ ಬಂದಂತೆ ನಟಿಸಿದ ಗಾಡಿಗನು ಮಂಕಾಗಿದ್ದ ಧರ್ಮಪ್ಪನನ್ನು ಧುರ ಧುರನೇ ನೋಡಿ, “ಈ ಬಾಲೆಯ ಮೇಲೆ ಬಂದಿದ್ದು ನೀನಾರು? ಉಸ್ಸು ಉಸ್ಸೋ, ಆಂ…. ರೀಂ…. ಊಂ” ಎಂದನು. “ಇವನಿಂದ ನೀನು ದೂರ ಹೋಗು. ಇಲ್ಲ ನಾನೇ ನಿನ್ನನ್ನು ಕಳಿಸಬೇಕೋ.. ಯಾರು ನೀನು. ನನ್ನ ಸರ್ವೇ ನಂಬರ್ ಒಳಗೆ ಬಂದದ್ದು. ನಿನಗೆಷ್ಟು ಧೈರ್ಯ.. ಒಳ್ಳೆ ಮಾತಲ್ಲಿ ಹೇಳ್ತೀನಿ. ಹೊರಟು ಹೋಗು” ಎಂದಿತು. ಮಂಕಾಗಿದ್ದ ಧರ್ಮಪ್ಪನನ್ನು ಮತ್ತೆ ಮತ್ತೆ ನೋಡಿ “ನನಗೆ ಭಾಷೆ ಕೊಡು, ಇವನಿಂದ ದೂರ ಹೋಗ್ತೀನಿ ಅಂತ. ಬಾಳಿ ಬದುಕ ಬೇಕಾದ ಇವನ ಮೇಲೆ ಬಂದು, ಅವನ್ ಹಾಳ್ ಮಾಡ್ತೀಯ” ಎಂದು ಮತ್ತೆ ಮತ್ತೆ ಗದರಿದನು. ಅಂತೂ ಮಂಕಾಗಿದ್ದ ಧರ್ಮಪ್ಪ ಭಾಷೆಯನ್ನು ನೀಡಿದನು. ಸುತ್ತ ಇದ್ದ ದಿವಾಕರಣ್ಣ, ಸೇರಿದ್ದ ಊರಿನ ಹಿರಿಕರು ಒಂದೇ ಬಾರಿಗೆ “ ಓ ಭಾಷೆ ಕೊಡ್ತು, ಭಾಷೆ ಕೊಡ್ತು, ಈ ಹುಡುಗನ ಆಳ್ತಾ ಇದ್ದ ದೆವ್ವ ಹೊರಟು ಹೋತು, ಇನ್ನೇನು ತೊಂದರೆಯಿಲ್ಲ” ಎಂದು ಖುಷಿಯಾದರು. ಎಲ್ಲಾ ಪೂಜೆ ಮುಗಿಸಿ ಊರ ಕಡೆ ಹೆಜ್ಜೆ ಹಾಕಿದರು. ಧರ್ಮಪ್ಪನಿಂದ ಅವತ್ತು ಸನ್ನಿಯಾಗಿ ಹಿಡಿದ ದೆವ್ವ ತಿರುಗಿ ಬಾರಲಿಲ್ಲ.
ಹಿಂದಿನ ಕಂತುಗಳನ್ನು ಓದಿದ್ದೀರಾ?
ಅನ್ನದ ನೆರಳೂ ದೆವ್ವದ ಕಾಟವೂ
ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 2
ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 3
ಇದನ್ನೂ ಓದಿ- http://“ವೈಫೈ ಯುಗದ ಹೈಫೈ ಜೀತ”
https://kannadaplanet.com/hi-fi-slavery-in-wifi-age/