ಕೋಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ; ಸಂಜಯ್‌ ರಾಯ್ ತಪ್ಪಿತಸ್ಥ; ಕೋರ್ಟ್‌ ತೀರ್ಪು

Most read

ಕೋಲ್ಕತ್ತಾ: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಆರ್‌.ಜಿ. ಕರ್‌ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಕೊಲೆ ಪ್ರಕರಣದಲ್ಲಿ ಸಂಜಯ್‌ ರಾಯ್ ತಪ್ಪಿತಸ್ಥ ಎಂದು ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ. ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್‌ ದಾಸ್‌ ಅವರು ಶನಿವಾರ ಈ ಮಹತ್ವದ ತೀರ್ಪು ನೀಡಿದ್ದಾರೆ. ಆದರೆ ಶಿಕ್ಷೆಯ ಪ್ರಮಾಣವನ್ನು ಜ.20, ಸೋಮವಾರದಂದು ಪ್ರಕಟಿಸಲಿದ್ದಾರೆ. 

ಕಳೆದ ವರ್ಷ ಆಗಸ್ಟ್‌ 9ರಂದು ನಡೆದಿದ್ದ ಘಟನೆಯು ದೇಶದಾದ್ಯಂತ ಭಾರಿ ಆಕ್ರೋಶ ಮತ್ತು ನಿರಂತರ ಪ್ರತಿಭಟನೆಗೆ ಕಾರಣವಾಗಿತ್ತು. ಸ್ಥಳೀಯ ಪೊಲೀಸರಿಗೆ ಸ್ವಯಂ ಸೇವಕನಂತೆ ಕೆಲಸ ಮಾಡುತ್ತಿದ್ದ ಸಂಜಯ್‌ ರಾಯ್ ಎಂಬಾತನೇ ಈ ಪ್ರಕರಣದ ಮುಖ್ಯ ಆರೋಪಿ. ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್‌ ದಾಸ್‌ ಅವರು ಪ್ರಕರಣದ ವಿಚಾರಣೆ ಆರಂಭಿಸಿದ 57 ದಿನಗಳ ನಂತರ ತೀರ್ಪು ಹೊರ ಬಂದಿದೆ. ತೀರ್ಪು ಪ್ರಕಟಣೆಯ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಸುತ್ತ ಸುಮಾರು 300ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತ ಪೊಲೀಸರು ಆಗಸ್ಟ್‌ 10ರಂದು ರಾಯ್‌ನನ್ನು ಬಂಧಿಸಿದ್ದರು. ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಮರುದಿನ ಈತನನ್ನು ಬಂಧಿಸಲಾಗಿತ್ತು. ಕೋಲ್ಕತ್ತಾ ಹೈಕೋರ್ಟ್‌ ನಂತರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ವಾದಿಸಿತ್ತು.

ಪ್ರಕರಣದ ವಿಚಾರಣೆಯು ನವೆಂಬರ್‌ 12ರಂದು ಆರಂಭವಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿಯ ವಿಚಾರಣೆ ಜನವರಿ 9ರಂದು ಅಂತ್ಯಗೊಂಡಿತ್ತು. ವೈದ್ಯ ವಿದ್ಯಾರ್ಥಿನಿಯ ಹತ್ಯೆ ಪ್ರಕರಣವು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ಸುಧೀರ್ಘ ಅವಧಿಯವರೆಗೆ                ಪ್ರತಿಭಟನೆ ನಡೆಸಿದ್ದರು. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆ ಮತ್ತು ಸುರಕ್ಷತೆ ಹೆಚ್ಚಿಸುವಂತೆ ಆಗ್ರಹಿಸಿ ದೇಶದ ಹಲವು ನಗರಗಳಲ್ಲಿ ವೈದ್ಯರು ಮತ್ತು ಸಾರ್ವಜನಿಕರು ಪ್ರತಿಭಟನೆಗಳನ್ನು ನಡೆಸಿದ್ದರು. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಕ್ಕೂ ಈ ಘಟನೆ ಕಾರಣವಾಗಿತ್ತು.


More articles

Latest article