ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ವಿಡಿಯೋ ಚಿತ್ರಿಕರಣ ಮಾಡಿದ ವಿಷಯವಾಗಿ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಸೇರಿದ್ದ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಇಂದು ಜೈಲಿನಿಂದ ಹೊರ ಬಂದಿದ್ದಾರೆ.
ಸೋಮವಾರವೇ ಷರತ್ತುಬದ್ದ ಜಾಮೀನು (Bail) ಸಿಕ್ಕಿದ್ರೂ ಎಲ್ಲಾ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಇಂದು ಜೈಲಿನಿಂದ ಹೊರ ಬಂದಿದ್ದಾರೆ. ಇಂದು ಮಧ್ಯಾಹ್ನ 12;45ರ ವೇಳೆಗೆ ಎಚ್‌ಡಿ ರೇವಣ್ಣ ಜಾಮೀನು ಷರತ್ತು ಪ್ರಕ್ರಿಯೆ ಪೂರ್ಣಗೊಂಡಿತ್ತು. ನಂತರ ಅವರನ್ನು ಮಧ್ಯಾಹ್ನದ ವೇಳೆ ಜೈಲಿನಿಂದ ಬಿಡುಗಡೆ ಗೊಳಿಸಲಾಗಿದೆ.
ಇಬ್ಬರ ಶ್ಯೂರಿಟಿ, ₹5 ಲಕ್ಷ ಬಾಂಡ್ ನೀಡಬೇಕು, ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು, ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ, ಕೆಆರ್ ನಗರ ತಾಲೂಕು ಪ್ರವೇಶಿಸುವಂತಿಲ್ಲ, ಎಸ್ಐಟಿ ತನಿಖೆಗೆ ಸಹಕರಿಸಬೇಕು ಮತ್ತು ಪಾಸ್ಪೋರ್ಟ್ ಕೋರ್ಟ್ಗೆ ಸಲ್ಲಿಸಬೇಕು ಎಂದು ಸಾಲು ಸಾಲು ಷರತ್ತನ್ನು ವಿಧಿಸಿ ರೇವಣ್ಣಗೆ ಜಾಮೀನು ನೀಡಿದೆ.
ಮೇ 4ರಂದು ಅಪಹರಣ ಪ್ರಕರಣದಲ್ಲಿ ರೇವಣ್ಣ ಬಂಧನವಾಗಿತ್ತು. ಮೇ 8ರಂದು ರೇವಣ್ಣಗೆ ನ್ಯಾಯಾಂಗ ಬಂಧನ ನೀಡಿದ್ದರಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಅವರಿಗೆ ಷರತ್ತುಬದ್ದ ಜಾಮೀನು (Bail) ಸಿಕ್ಕಿದೆ.