ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್ ಅವರು ಶುಕ್ರವಾರ ಮುಂಜಾನೆ ನಿಧನರಾದರು. ಮೃತರಿಗೆ ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇವರಿಗೆ 96 ವರ್ಷ ವರ್ಷವಾಗಿತ್ತು.
ಬಸವನಗುಡಿಯ ಕೃಷ್ಣ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬಿಂಡಿಗೇನವಿಲೆ ಗ್ರಾಮದ ಗರುಡಾಚಾರ್ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಹಂತದ ಅಧಿಕಾರಿಯಾಗಿ ಕೆಲಸ ಮಾಡಿದ್ದರು.
ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ಜಿಲ್ಲೆಯ ಎಸ್.ಪಿ ಹಾಗೂ ಬೆಂಗಳೂರು ನಗರದ ಡಿ.ಸಿ.ಪಿ ಮತ್ತು ಪೊಲೀಸ್ ಕಮಿಷನರ್, ಪೊಲೀಸ್ ಡಿಜಿ/ಐಜಿಪಿ ಯಾಗಿ ಕೆಲಸ ಮಾಡಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಗರುಡಾಚಾರ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಬೆಂಗಳೂರಿನಲ್ಲಿ ಯಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪನೆ ಮಾಡಿದಾಗ ಗರುಡಾಚಾರ್ ಅವರು ಟ್ರಾಫಿಕ್ ಡಿಸಿಪಿ ಆಗಿದ್ದರು.
ಮೃತರ ಅಂತಿಮ ಸಂಸ್ಕಾರವು ವಿಲ್ಸನ್ ಗಾರ್ಡನ್ನ ವಿದ್ಯುತ್ ಚಿತಾಗಾರದಲ್ಲಿ ಶನಿವಾರ ಸಂಜೆ ನಾಲ್ಕಕ್ಕೆ ನಡೆಯಲಿದೆ ಎಂದು ಉದಯ್ ಗರುಡಾಚಾರ್ ತಿಳಿಸಿದ್ದಾರೆ.