ಪ್ರತಿಸುಂಕ : ಟ್ರಂಪ್‌ ವಿರುದ್ಧ ದಿಟ್ಟವಾಗಿ ಎದ್ದು ನಿಲ್ಲಬೇಡವೇ  ಭಾರತ?

Most read

ದೇಶವೊಂದು ಎಲ್ಲ ರೀತಿಯಲ್ಲಿಯೂ ಸಾರ್ವಭೌಮ ಅನಿಸಿಕೊಳ್ಳಬೇಕಾದರೆ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವ ವಿಷಯದಲ್ಲಿಯೂ ಅದು ಸಾರ್ವಭೌಮ ದೇಶದಂತೆ ನಡೆದುಕೊಳ್ಳಬೇಡವೇ? ಇತ್ತೀಚಿನ ಅನೇಕ ಜಾಗತಿಕ ವಿದ್ಯಮಾನಗಳು ಈ ಅರ್ಥದಲ್ಲಿ ಸಾರ್ವಭೌಮ ದೇಶವಾದ ಭಾರತಕ್ಕೆ ಒಂದು ಅಗ್ನಿಪರೀಕ್ಷೆಯ ಸಂದರ್ಭವನ್ನು ತಂದೊಡ್ಡಿವೆ. ಆದರೆ, ಇಂತಹ ಇತ್ತೀಚಿನ ಅನೇಕ ನಿರ್ಣಾಯಕ ಸಂದರ್ಭಗಳಲ್ಲಿ ನಮ್ಮ ರಾಜಕೀಯ ನಾಯಕತ್ವ ತೆಗೆದುಕೊಂಡ ನಿರ್ಧಾರಗಳು ಭರವಸೆ ಹುಟ್ಟಿಸುವಂತೆಯೇನೂ ಇಲ್ಲ ಶ್ರೀನಿವಾಸ ಕಾರ್ಕಳ, ಚಿಂತಕರು.

ಎಪ್ರಿಲ್‌ 2, 2025ರಂದು ಅಮೆರಿಕಾವು ʼವಿಮೋಚನಾ ದಿನʼ (Liberation Day ) ಆಚರಿಸಲಿದ್ದು, ತಮ್ಮೊಂದಿಗೆ ವ್ಯಾಪಾರ ವ್ಯವಹಾರ ನಡೆಸುವ ದೇಶಗಳ ಮೇಲಣ ಪ್ರತಿಸುಂಕವನ್ನು ತಾನು ಆ ದಿನ ಘೋಷಿಸಲಿದ್ದೇನೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಂದೆರಡು ವಾರದ ಹಿಂದೆ ಹೇಳಿದ್ದರು. ಆದರೆ, ಹಾಸ್ಯಾಸ್ಪದ ಮಾತು ಮತ್ತು ಕೃತಿಗಳಿಗೆ ಪ್ರಸಿದ್ಧರಾದ ಟ್ರಂಪ್‌ ಇಂತಹ ಒಂದು ಆಘಾತಕಾರಿ ನಿರ್ಧಾರ ಮಾಡಲಿಕ್ಕಿಲ್ಲ ಎಂದು ಅನೇಕರು ಭಾವಿಸಿದ್ದರು.

ಪ್ರತಿಸುಂಕ ಘೋಷಿಸುತ್ತಿರುವ ಟ್ರಂಪ್

ಆದರೆ. ತಾನು ಆಡಿದ ಮಾತಿನಂತೆಯೇ ನಡೆದುಕೊಂಡ ಟ್ರಂಪ್‌ ಕಳೆದ ಎಪ್ರಿಲ್‌ 2 ರಂದು ಅಮೆರಿಕಾದ ಆಮದುಗಳ ಮೇಲೆ 10% ದಿಂದ 49% ದ ವರೆಗೆ ಪ್ರತಿಸುಂಕ (ರೆಸಿಪ್ರೋಕಲ್‌ ಟ್ಯಾರಿಫ್) ಘೋಷಿಸುವುದರೊಂದಿಗೆ ಇತರ ದೇಶಗಳ ಮೇಲೆ ಪೂರ್ಣ ಪ್ರಮಾಣದ  ವ್ಯಾಪಾರ ಯುದ್ಧ ಘೋಷಿಸಿದರು. ತನ್ನನ್ನು ʼಆಪ್ತ ಗೆಳೆಯʼ ಎಂದು ಆಗಾಗ ಕೊಂಡಾಡುವ, ʼಅಬ್‌ ಕೀ ಬಾರ್‌ ಟ್ರಂಪ್‌ ಸರಕಾರ್‌ʼ ಎಂದು ಅಮೆರಿಕಾ ಚುನಾವಣೆಯಲ್ಲಿ ಟ್ರಂಪ್‌ ಪರ ಪ್ರಚಾರ ಮಾಡಿದ ಮೋದಿಯವರ ಭಾರತಕ್ಕೂ ರಿಯಾಯಿತಿ ಸಿಗಲಿಲ್ಲ. ಭಾರತದ ಸರಕುಗಳಿಗೆ ಅವರು ಬರೋಬ್ಬರಿ 26% ಸುಂಕ ಘೋಷಿಸಿದರು.

ಜಾಗತಿಕ ಪ್ರತಿಕ್ರಿಯೆ

ಈ ಸುದ್ದಿ ಹೊರಬೀಳುತ್ತಿದ್ದಂತೆ ಚೀನಾ ಮತ್ತು ಯುರೋಪಿಯನ್‌ ಒಕ್ಕೂಟಗಳು ಪ್ರತೀಕಾರದ ಪ್ರತಿಜ್ಞೆ ಮಾಡಿದವು. ಚೀನಾವು ಅಮೆರಿಕಾದ ಸರಕುಗಳಿಗೆ 34% ಸುಂಕ ಘೋಷಿಸಿತು. ಆದರೆ ಗ್ಲೋಬಲ್‌ ಲೀಡರ್‌ ಆಗ ಹೊರಟ ಭಾರತ ಗಾಢ ಮೌನಕ್ಕೆ ಜಾರಿತು. ಪ್ರತಿಯೊಂದು ಸಣ್ಣ ಪುಟ್ಟ ವಿಷಯಗಳಿಗೂ ಪ್ರತಿಕ್ರಿಯೆಯ ಟ್ವೀಟ್‌ ಮಾಡುವ ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಈತನಕ ಪ್ರತಿಕ್ರಿಯೆಯನ್ನೇ ನೀಡಿಲ್ಲ! ʼಟ್ರಂಪ್‌ ನ ಈ ನಿರ್ಧಾರದಿಂದ ಪ್ರತಿಕೂಲ ಪರಿಣಾಮವೇನೂ ಇಲ್ಲʼ ಎಂದು ವಿದೇಶ ಮಂತ್ರಿ ಜೈಶಂಕರ್‌ ತಿಪ್ಪೆ ಸಾರಿಸಿಬಿಟ್ಟರು. ವಾಣಿಜ್ಯ ಸಚಿವಾಲಯದ ಪಿಯೂಷ್‌ ಗೋಯಲ್‌ ಅಂತೂ ʼನಾವು ಇದನ್ನು ಅಧ್ಯಯನ ಮಾಡುತ್ತಿದ್ದೇವೆ ಎಂದವರು, ಅಧ್ಯಯನ ಮುಗಿದಿದೆ ಪರಿಣಾಮವೇನೂ ಇಲ್ಲ” ಎಂದು ಹೇಳಿದ್ದಾರೆ!!

ʼಆಪ್ತ ಗೆಳೆಯʼರು- ಮೋದಿ ಮತ್ತು ಟ್ರಂಪ್

ಟ್ರಂಪ್‌ ನ ಈ ಪ್ರತಿಸುಂಕ ನಿರ್ಧಾರದಿಂದ ಏನೂ ಪ್ರತಿಕೂಲ ಪರಿಣಾಮವಿಲ್ಲ ಎಂಬ ಭಾರತದ ರಾಜಕೀಯ ನಾಯಕರ ಮಾತನ್ನು ನಂಬಬಹುದೇ? ಟ್ರಂಪ್‌ ಪ್ರತಿಸುಂಕವನ್ನು ಘೋಷಿಸುತ್ತಿದ್ದಂತೆ ಜಾಗತಿಕ ಶೇರು ಮಾರುಕಟ್ಟೆಗಳು ತಕ್ಷಣ ಅದಕ್ಕೆ ಸ್ಪಂದಿಸಿದವು. ಜಪಾನಿನ ನಿಕ್ಕಿ 4% ಕಳೆದುಕೊಂಡರೆ ಯುರೋಪ್‌ ಮಾರುಕಟ್ಟೆ 2% ಕ್ಕಿಂತಲೂ ಅಧಿಕ ನಷ್ಟ ಅನುಭವಿಸಿತು. ಭಾರತದ ಶೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು 19 ಲಕ್ಷ ಕೋಟಿ ರುಪಾಯಿಯನ್ನು ಕಳೆದುಕೊಂಡರು. ಅಮೆರಿಕಾದಲ್ಲಿ ವಹಿವಾಟು ಆರಂಭದ ಮೊದಲ ಗಂಟೆಯಲ್ಲಿಯೇ ಡೌ ಜೋನ್ಸ್ 3% ನಷ್ಟ ಅನುಭವಿಸಿದರೆ‌, ನಾಸ್ಡಾಕ್‌ 4% ಕಳೆದುಕೊಂಡಿತು.

ಮೌನಕ್ಕೆ ಶರಣಾದ ಭಾರತ!

ಟ್ರಂಪ್‌ ನಿರ್ಧಾರದಿಂದ ಭಾರತದ ವಜ್ರ ಮತ್ತು ಆಭರಣ ವಲಯ ತೀವ್ರ ಹೊಡೆತ ಅನುಭವಿಸಲಿದೆ ಎಂದು ಉದ್ಯಮಿಗಳು ಹೇಳಿದ್ದಾರೆ. ಭಾರತವು ಯು ಎಸ್‌ ಮಾರುಕಟ್ಟೆಗೆ 10 ಬಿಲಿಯನ್‌ ಡಾಲರ್‌ ಪ್ರಮಾಣದ ರಫ್ತು ಮಾಡುತ್ತಿದ್ದು ಹೊಸ ಸುಂಕದ ಹಿನ್ನೆಲೆಯಲ್ಲಿ ಅದನ್ನು ಅಷ್ಟೇ ಪ್ರಮಾಣದಲ್ಲಿ ಕಾಪಾಡಿಕೊಂಡು ಹೋಗುವುದು ಕಡುಕಷ್ಟವಾಗಲಿದೆ ಎಂದು ʼದಿ ಜೆಮ್ಸ್‌ ಅಂಡ್‌ ಜುವಲರಿ ಎಕ್ಸ್ ಪೋರ್ಟ್ ಪ್ರೊಮೋಶನ್‌ ಕೌನ್ಸಿಲ್‌ (GJEPC)ʼ ಆತಂಕ ವ್ಯಕ್ತಪಡಿಸಿದೆ. ಇದೇ ಎಪ್ರಿಲ್‌ 9 ರಿಂದ ಹೊಸ ಸುಂಕಗಳು ಜಾರಿಗೆ ಬರಲಿದ್ದು ಇದು ಭಾರತದ ಉಕ್ಕು, ಅಲ್ಯುಮಿನಿಯಂ ಮತ್ತು ವಾಹನ ಕ್ಷೇತ್ರದ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ತೀವ್ರ ಸ್ವರೂಪದ ಆರ್ಥಿಕ ಹಿನ್ನಡೆ ಮತ್ತು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಭಾರತಕ್ಕೆ ಅಮೆರಿಕಾದ ಈ ನಿರ್ಧಾರ ಇನ್ನೊಂದು ಹೊಡೆತ ನೀಡಲಾರದು ಎಂಬುದನ್ನು ನಂಬುವುದು ಕಷ್ಟ. ಚೀನಾದಂತಹ ಜಾಗತಿಕ ಶಕ್ತಿಗಳಿಗೆ ಇಂತಹ ಹೊಡೆತವನ್ನು ಎದುರಿಸುವ ಶಕ್ತಿ ಇದೆ. ಭಾರತ ಆ ಸ್ಥಿತಿಯಲ್ಲಿಲ್ಲ ಎಂಬುದು ಗುಟ್ಟಿನ ಸಂಗತಿಯೇನೂ ಅಲ್ಲ. ಇದೇ ಕಾರಣದಿಂದ ಇರಬಹುದೇ ಭಾರತ ಟ್ರಂಪ್‌ ನ ನಿರ್ಧಾರಕ್ಕೆ ತೀವ್ರ ಪ್ರತಿಕ್ರಿಯೆಯನ್ನು ನೀಡದೆ ‌ʼಏನೂ ಆಗೇ ಇಲ್ಲʼ ಎಂಬಂತೆ ತಣ್ಣಗೆ ಇದ್ದುಬಿಡಲು ನಿರ್ಧರಿಸಿರುವುದು?

ಶೇರು ಮಾರುಕಟ್ಟೆಗಳ ಕುಸಿತ

ಆದರೆ, ಜಗತ್ತಿನ ಬಹುತೇಕ ಎಲ್ಲ ದೊಡ್ಡ ದೇಶಗಳು ಅಮೆರಿಕಾದ ವಿರುದ್ಧ ದನಿ ಎತ್ತಿರುವಾಗ, ಚೀನಾದ ಅತಿಕ್ರಮಣ ಇರಬಹುದು, ಭಾರತೀಯ ಪ್ರಜೆಗಳನ್ನು ಕೈಕೋಳ ತೊಡಿಸಿ ಕಾಲಿಗೆ ಸಂಕೋಲೆ ತೊಡಿಸಿ ಭಾರತಕ್ಕೆ ಮರಳಿಸಿದಾಗ ಇರಬಹುದು, ಅಮೆರಿಕಾದ ಸುಂಕ ಪ್ರತೀಕಾರವಿರಬಹುದು ಸಾರ್ವಭೌಮ ದೇಶವಾದ ಭಾರತ ಇವುಗಳಿಗೆ ದಿಟ್ಟ ಉತ್ತರ ನೀಡದೆ ಹೆದರಿದಂತೆ ವರ್ತಿಸುವುದು ವಿಶ್ವಗುರುವಾಗ ಹೊರಟ ದೇಶಕ್ಕೆ ಶೋಭೆ ತರುವಂಥ ನಡೆಗಳೇ? ಭಾರತದ ಪ್ರಧಾನಿಯಾಗುವ ಮೊದಲು ಡಾಲರ್‌ ಬಲಪಡಿಸುವುದು ಹೇಗೆ, ಶತ್ರುರಾಷ್ಟ್ರಗಳಿಗೆ ಹೇಗೆ ಕೆಂಪು ಕೆಂಪು ಕಣ್ಣು ತೋರಿಸಬೇಕು ಎಂದೆಲ್ಲ ಅಬ್ಬರಿಸಿ ಬೊಬ್ಬಿರಿದವರಲ್ಲವೇ ನರೇಂದ್ರ ಮೋದಿಯವರು?

ಭಾರತ ಇಡಬೇಕಾದ ಹೆಜ್ಜೆ

ಈ ವಿಚಾರದಲ್ಲಿ ಖ್ಯಾತ ಚಿಂತಕ, ಅಂಕಣಕಾರ ಪ್ರತಾಪ್‌ ಭಾನು ಮೆಹತಾ ಅವರ ಈ ಮಾತುಗಳು ಗಮನಾರ್ಹ. ಅವರು ಹೇಳುತ್ತಾರೆ – “ ಅಮೆರಿಕಾದ ವಿದೇಶ ನೀತಿಗಳಲ್ಲಿ ಯಾವತ್ತೂ ಒಂದು ಸಾಮ್ರಾಜ್ಯ ವಿಸ್ತರಣಾವಾದಿ ಅಂಶ ಇದ್ದೇ ಇರುತ್ತಿತ್ತು. ಸಾಮಾನ್ಯವಾಗಿ ಇದರ ಉದ್ದೇಶ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣ. ಮಾರುಕಟ್ಟೆಗಳನ್ನು ತೆರೆಯಲು ಮತ್ತು ಸಂಪನ್ಮೂಲಗಳ ಮೇಲೆ ಕೈ ಹಾಕಲು ಅಧಿಕಾರವನ್ನು ಬಳಸಲಾಗುತ್ತಿತ್ತು. ಆದರೆ ಈ ವಿಸ್ತರಣವಾದಿ ನೀತಿಯನ್ನು  ಅಂತರ್‌ ಅವಲಂಬನೆಯ ಮೇಲಣ ತಕ್ಕಮಟ್ಟಿನದಾದರೂ ಒಂದು ಬದ್ಧತೆಯು ಸದಾ ತಡೆ ಹಿಡಿಯುತ್ತಿತ್ತು. ಇದೊಂದು ರೀತಿಯ ಸೈದ್ಧಾಂತಿಕ ಬದ್ಧತೆ. ಆದರೆ ಟ್ರಂಪ್‌ ಆ ಬದ್ಧತೆಯನ್ನು ತಿರಸ್ಕರಿಸಿದ್ದಾರೆ. ಅವರ ಪ್ರಕಾರ ವ್ಯಾಪಾರ  ಎನ್ನುವುದು ಈಗ ಸಂಪೂರ್ಣವಾಗಿ ʼಅಮೆರಿಕ ಮೊದಲುʼ ಎಂಬ ನೀತಿ.

ಟ್ರಂಪ್‌ ಈಗ ಬೆಲೆ ಶೋಧದಲ್ಲಿ ತೊಡಗಿದ್ದಾರೆ. ಟ್ರಂಪ್‌ ಗೆ ಬಲುಬೇಗನೇ ಅನುಕೂಲಕರವಾಗಿ ನಡೆದುಕೊಳ್ಳುವವರಿಗೆ ಟ್ರಂಪ್‌ ಸಹಾಯ ಮಾಡಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಈ ಯಾವುದೇ ವ್ಯವಹಾರ ಅವಲಂಬನೆಗೆ ಯೋಗ್ಯವಲ್ಲ. ʼಭಾರತ ಇಂತಹ ಬೆದರಿಕೆಗಳಿಗೆ ತಲೆಬಾಗುವುದಿಲ್ಲ, ಅದು ತನ್ನದೇ ಶರ್ತದ ಮೇಲೆ ತನ್ನಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆʼ ಎಂಬ ಸಂದೇಶ ರವಾನಿಸುವುದರಲ್ಲಿಯೇ  ನಮ್ಮ ದೀರ್ಘಾವಧಿ ಹಿತಾಸಕ್ತಿ ಅಡಗಿದೆ. ಇಲ್ಲಿ ಇರುವ ಒಂದೇ ಒಂದು ಕಾರ್ಯಸಾಧ್ಯ ಕಾರ್ಯತಂತ್ರವೆಂದರೆ, ಟ್ರಂಪ್‌ ನ ವಿಸ್ತರಣಾವಾದಿ ನಡೆಗೆ ತಡೆ ಒಡ್ಡುವ  ದಿಶೆಯಲ್ಲಿ ಒಂದು ಅಂತಾರಾಷ್ಟ್ರೀಯ ಮೈತ್ರಿಕೂಟವನ್ನು ಸ್ಥಾಪಿಸುವುದು. ನಮಗೆ ಈಗಿನಷ್ಟು ಶಕ್ತಿ ಇಲ್ಲದ ಕಾಲದಲ್ಲಿಯೂ ಈ ಅಟವನ್ನು ನಾವು ಆಡಿದ್ದೆವು. ನಮಗೆ ಈಗ ಇರುವುದು ಒಂದೇ ದಾರಿ – ದಬ್ಬಾಳಿಕೆಯ ಮುಂದೆ ಮಂಡಿಯೂರುವುದು ಅಥವಾ ಕೆಲವೊಂದು ಗಾಯ ಅನುಭವಿಸಿಯಾದರೂ ಕ್ರಮೇಣ ಎತ್ತರಕ್ಕೆ ಎದ್ದು ನಿಲ್ಲುವುದು. ಈಗಣ ಚರ್ಚೆ ಇರುವುದು ವ್ಯಾಪಾರದ ತಾಂತ್ರಿಕತೆಯ ಬಗ್ಗೆಯಲ್ಲ. ಬದಲಿಗೆ ಅದು ನಾವು ಸೋಲಿಸಲೇ ಬೇಕಾಗಿರುವ, ʼಜಾಗತಿಕ ರಾಜಕಾರಣದ ನಿರ್ದಯಿ ಅಧಿಕಾರದಾಟʼದ ಬಗ್ಗೆ”

Hands off  ಪ್ರತಿಭಟನೆ

ದೇಶವೊಂದು ಎಲ್ಲ ರೀತಿಯಲ್ಲಿಯೂ ಸಾರ್ವಭೌಮ ಅನಿಸಿಕೊಳ್ಳಬೇಕಾದರೆ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವ ವಿಷಯದಲ್ಲಿಯೂ ಅದು ಸಾರ್ವಭೌಮ ದೇಶದಂತೆ ನಡೆದುಕೊಳ್ಳಬೇಡವೇ? ಇತ್ತೀಚಿನ ಅನೇಕ ಜಾಗತಿಕ ವಿದ್ಯಮಾನಗಳು ಈ ಅರ್ಥದಲ್ಲಿ ಸಾರ್ವಭೌಮ ದೇಶವಾದ ಭಾರತಕ್ಕೆ ಒಂದು ಅಗ್ನಿಪರೀಕ್ಷೆಯ ಸಂದರ್ಭವನ್ನು ತಂದೊಡ್ಡಿವೆ. ಆದರೆ, ಇಂತಹ ಇತ್ತೀಚಿನ ಅನೇಕ ನಿರ್ಣಾಯಕ ಸಂದರ್ಭಗಳಲ್ಲಿ ನಮ್ಮ ರಾಜಕೀಯ ನಾಯಕತ್ವ ತೆಗೆದುಕೊಂಡ ನಿರ್ಧಾರಗಳು ಭರವಸೆ ಹುಟ್ಟಿಸುವಂತೆಯೇನೂ ಇಲ್ಲ.

ಅಂದ ಹಾಗೆ, ನಿನ್ನೆ ಅಂದರೆ ಎಪ್ರಿಲ್‌ 6 ರಂದು ಅಮೆರಿಕಾದ 1500 ನಗರಗಳು ಮತ್ತು ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪ್ರದರ್ಶನ ನಡೆಸಿ ಟ್ರಂಪ್‌ ನ ನೀತಿಗಳನ್ನು ಖಂಡಿಸಿದ್ದಾರೆ. ಟ್ರಂಪ್‌ ಅನ್ನು ಖಂಡಿಸುವಾಗ ಅವರು ಟ್ರಂಪ್‌ ನ ಗೆಳೆಯ ಎಲಾನ್‌ ಮಸ್ಕ್‌ ಅನ್ನೂ ಬಿಟ್ಟಿಲ್ಲ. ಟ್ರಂಪ್‌ ಮತ್ತು ಮಸ್ಕ್‌ ವಿರುದ್ಧದ Hands off  ಎಂಬ ಹೆಸರಿನ ಅವರ ಪ್ರತಿಭಟನೆ ಅಮೆರಿಕಾದಲ್ಲಿ ಈಗ ದೊಡ್ಡ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- ಭಾರತದ ʼಆರ್ಥಿಕತೆ ಏರುವಿಕೆʼಯ ಹಿಂದಿನ ಕರಾಳ ಕಥೆ | ಭಾಗ 2

More articles

Latest article