ಬೆಂಗಳೂರು: ಮೀಸಲು ಅರಣ್ಯ ಒತ್ತುವರಿ ದೂರು ನನ್ನ ತೇಜೋವಧೆ ಮಾಡುವ ಹುನ್ನಾರವಾಗಿದೆ. ನಾನು ಅಥವಾ ನನ್ನ ಕುಟುಂಬ ಮೀಸಲು ಅರಣ್ಯ ಒತ್ತುವರಿ ಮಾಡಿಕೊಂಡಿಲ್ಲ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಸಲ್ಲಿಸಿದ್ದ ಎಫ್.ಓ.ಸಿ ನಂ. 16/2022-23 ನೋಟೀಸನ್ನು ಈಗಾಗಲೇ ಉಚ್ಚನ್ಯಾಯಾಲಯದ ಕಲಬುರ್ಗಿ ಪೀಠ ರದ್ದುಮಾಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ಪ್ರತಿಕ್ರಿಯಿಸಿದ್ದಾರೆ.
ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 1987 ರಲ್ಲಿ ನಾನು ಯಾವುದೇ ಹುದ್ದೆಯಲ್ಲೂ ಇರಲಿಲ್ಲ. ಕೃಷಿಗಾಗಿ ಅಂದಿನ ಕಾಲದಲ್ಲಿ ನನ್ನ ಕುಟುಂಬದಿಂದ ಭೂಮಿಯನ್ನು ಖರೀದಿಸಲಾಗಿತ್ತು. ಭೂಮಿ ಖರೀದಿಯ ಸಂಧರ್ಭದಲ್ಲಿ ಕಂದಾಯ ದಾಖಲೆಗಳು, ಕ್ರಯಪತ್ರಗಳು ಹಾಗೂ ಇನ್ನಿತರೆ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಲಾಗಿತ್ತು. ಪರಿಶೀಲನೆ ನಂತರ ಮೂಲ ಜಮೀನಿನ ಮಾಲೀಕರಿಂದ ಭೂಮಿಯನ್ನು ಖರೀದಿಸಲಾಗಿತ್ತು ಎಂದು ಹೇಳಿದ್ದಾರೆ.
ನಾನು ಇದೇ ಮೊದಲ ಬಾರಿಗೆ ಸಚಿವನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮೊದಲ ಬಾರಿ ಶಾಸಕನಾಗಿದ್ದೂ ಕೂಡಾ 1999 ರಲ್ಲಿ. 1987 ರಲ್ಲಿ ಪ್ರಭಾವ ಬೀರಲು ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದರು. ದೂರಿನಲ್ಲಿ ನೀಡಿರುವ ಸರ್ವೇ ನಂಬರ್‌ಗಳಷ್ಟೇ ಅಲ್ಲದೇ ಸುಮಾರು 1700 ಏಕರೆ ಭೂಮಿಯನ್ನು ಮೀಸಲು ಅರಣ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ನಾವು ಖರೀದಿಸಿದ್ದ ಜಮೀನಿನ ಬಗ್ಗೆಯೂ ಅರಣ್ಯ ಅಧಿಕಾರಿಗಳು ಎಫ್.ಓ.ಸಿ ನಂ. 16/2022-23 ನೋಟೀಸ್ ನೀಡಿದ್ದರು. ಈ ನೋಟಿಸ್‌ನ್ನು ಉಚ್ಚ ನ್ಯಾಯಾಲಯದ ಕಲಬುರ್ಗಿ ಪೀಠದಲ್ಲಿ ಪ್ರಶ್ನಿಸಿ ದಾವೆ ಹೂಡಲಾಗಿತ್ತು. ಸಿಆರ್‌ಎಲ್.ಪಿ. ನಂ. 201608/2022 ನಲ್ಲಿ ಅಡಿಯಲ್ಲಿ ನಡೆದ ವಿಚಾರಣೆಯಲ್ಲಿ ಎಫ್.ಓ.ಸಿ ನಂ. 16/2022-23 ನೋಟೀಸ್ ಏಪ್ರಿಲ್ 18, 2023 ರಲ್ಲೇ ಉಚ್ಚನ್ಯಾಯಾಲಯ ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ.