ಬೆಂಗಳೂರು: ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರುತ್ತೇವೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಲು ಡಿ.ಕೆ ಶಿವಕುಮಾರ್ ಅವರು ಸಂವಿಧಾನ ತಿದ್ದುಪಡಿ ಮಾಡುವುದಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಇಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್ ಮತ್ತು ಬಿಜೆಪಿಯ ಸದಸ್ಯರ ನಡುವೆ ಕೋಲಾಹಲಕ್ಕೆ ಕಾರಣವಾಗಿತ್ತು.
ರಿಜಿಜು ಹೇಳಿಕೆಗೆ ಎಕ್ಸ್ ನಲ್ಲಿ ಸೃಷ್ಟೀಕರಣ ನೀಡಿರುವ ಡಿಕೆಶಿ, ಹತಾಶಗೊಂಡಿರುವ ಬಿಜೆಪಿ ಮತ್ತು ಅದರ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳು ನನ್ನ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಕೇಂದ್ರ ಸಚಿವರಿಗೆ ತಿಳಿಸುವುದೆನೆಂದರೆ ವಿಧೇಯಕದ ಮೇಲೆ ಚರ್ಚೆ ನಡೆಯುವಾಗ ನಾನು ವಿಧಾನಸಭೆಯಲ್ಲಿ ಹಾಜರಿರಲಿಲ್ಲ. ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು ಎಂದು ನಾನು ಎಲ್ಲಿಯೂ ಹೇಳಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದಾಗ ಬಿಜೆಪಿಯ ಮಾತೃಸಂಸ್ಥೆ ಅದನ್ನು ವಿರೋಧಿಸಿತ್ತು. ಕಳೆದ ಚುನಾವಣೆವರೆಗೂ ಸಂವಿಧಾನ ಬದಲಾವಣೆ ಮಾಡುವ ಬಯಕೆಯನ್ನು ಬಿಜೆಪಿ ಹೊಂದಿತ್ತು. ಅದಕ್ಕಾಗಿ 400 ಸ್ಥಾನಗಳನ್ನು ಗೆಲ್ಲುವ ಹಠಕ್ಕೆ ಬಿದ್ದಿತ್ತು. ತನ್ನ ಪಾಪವನ್ನು ಮರೆಮಾಚಲು ಇದೀಗ ನನ್ನ ಮತ್ತು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಮಾನದಂಡಗಳ ಆಧಾರದ ಮೇಲೆಯೇ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿರುವುದು ಬಿಜೆಪಿಗೆ ನಿರಾಸೆ ಉಂಟು ಮಾಡಿದೆ. ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಬೇಕೆಂದು ಅದು ಬಯಸುತ್ತಿದೆ. ನಾನು ಬದುಕಿರುವವರೆಗೂ ಅದು ಸಾಧ್ಯವಿಲ್ಲ ಎಂದು ತಿಳಿಸಿದರು.