ಮಲಗಿರುವವರಂತೆ ನಟನೆ ಮಾಡುವವರನ್ನು ಏನೇ ಮಾಡಿದರು ಎಬ್ಬಿಸಲು ಸಾಧ್ಯವಿಲ್ಲ. ಇದು ಬಂಡೆ ಮೇಲೆ ನೀರು ಹಾಕಿದಂತೆ. ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಜನಪರ ಕಾರ್ಯಕ್ರಮದ ಮೇಲೆ ನಂಬಿಕೆ ಇಲ್ಲ. ಜನರನ್ನು ಶೋಷಣೆ ಮಾಡುವ ಯಾವುದಾದರೂ ಒಂದು ಪಕ್ಷ ಇದ್ದರೆ ಅದು ಬಿಜೆಪಿ. ನಾನು ಯುವ ಕಾಂಗ್ರೆಸ್ ನಲ್ಲಿ ರಾಜಕೀಯ ಪ್ರವೇಶಿಸಿದಾಗ ಈ ಪಕ್ಷದ ಹೆಸರು ಜನಸಂಘ ಎಂದು ಇತ್ತು. ಅವರ ಕೆಲಸ ಎಂದರೆ ಎಲ್ಲೆಡೆ ಕೋಮು ಗಲಭೆ ಮಾಡುವುದು. ಜನ ಅವರಿಗೆ ಎಂದೂ ಬೆಂಬಲ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಂತರ ಇಂದಿರಾ ಗಾಂಧಿ ಅವರು ಉತ್ತಮ ಆಡಳಿತ ನೀಡುತ್ತಿದ್ದರು. ಇಂದಿರಾ ಗಾಂಧಿ ಪಾಕಿಸ್ತಾನವನ್ನು ಇಬ್ಬಾಗ ಮಾಡಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು. ಆಗ ಜನಸಂಘದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಲೋಕಸಭೆಯಲ್ಲಿ ಇಂದಿರಾ ಗಾಂಧಿ ಅವರು ದುರ್ಗೆ ಎಂದು ಕರೆಯುತ್ತಾರೆ ಎಂಧು ಹೇಳಿದ್ದಾರೆ.
ಜೆಡಿಎಸ್ ಬಿಜೆಪಿ ಬಿ ಟೀಮ್ ಆಗಿದೆ. ದೇವೇಗೌಡರರು ನಾನು ಬದುಕಿರುವವರೆಗೂ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ ತಮ್ಮ ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಎಲ್ಲಾ ಹಿರಿಯ ನಾಯಕರನ್ನು ಹೊರಗೆ ಕಳುಹಿಸಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದರು. ಜೆಡಿಎಸ್ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಸಹಾಯ ಮಾಡಿಕೊಂಡೇ ಬಂದಿದ್ದಾರೆ. ಪರಿಣಾಮ ಬಿಜೆಪಿ ರಾಜ್ಯದಲ್ಲಿ ಬೆಳೆಯಲು ಸಹಕಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಜಾತ್ಯಾತೀತ ತತ್ವ ತೆಗೆದು ಬಿಜೆಪಿ ಜತೆ ಸೇರಿದ್ದಾರೆ. ದೇವೇಗೌಡರು ಮೈಸೂರಿನಲ್ಲಿ ಮೋದಿ ಅವರನ್ನು ಇಂದ್ರ ಚಂದ್ರ ಎಂದು ಹೊಗಳಿದರು. ಕಾರಣ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲು. ಇವರು ಜಾತ್ಯಾತೀತರಲ್ಲ, ಜಾತಿವಾದಿಗಳು. ಅವರು ಅಧಿಕಾರಕ್ಕಾಗಿ ಏನುಬೇಕಾದರೂ ಮಾಡುತ್ತಾರೆ. ಅವರು ಪಕ್ಷಕ್ಕೆ ಅಧಿಕಾರ ನೀಡುವುದಿಲ್ಲ. ಕೇವಲ ತಮ್ಮ ಕುಟುಂಬಕ್ಕೆ ಮಾತ್ರ ಅಧಿಕಾರ ನೀಡುತ್ತಾರೆ ಎಂದು ದೂರಿದ್ದಾರೆ.
ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಇಡೀ ಸಚಿವ ಸಂಪುಟ ಈ ಯೋಜನೆ ಜಾರಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ದೇಶದಾದ್ಯಂತ ಪಾದಯಾತ್ರೆ ಮಾಡಿ ಜನರ ಕಷ್ಟಗಳನ್ನು ಆಲಿಸಿದರು. ಮೋದಿ ಅವರ ಕೆಟ್ಟ ನೀತಿಗಳಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡು, ಅವರ ಕಷ್ಟಕ್ಕೆ ಪರಿಹಾರ ನೀಡಲು ಈ ಯೋಜನೆ ರೂಪಿಸಲಾಯಿತು. ನಮ್ಮ ಸರ್ಕಾರದ ಉತ್ತಮ ಆಡಳಿತ ಸಹಿಸಲಾಗದೇ ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.