ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಂದು 2024 ಲೋಕಸಭಾ ಚುನಾವಣೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಎಐಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯ ಪ್ರಣಾಳಿಕೆಗೆ ʻನ್ಯಾಯಪತ್ರʼ ಎಂದು ಕರೆಯಲಾಗಿದೆ.
ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಜಾರಿಗೆ ತರಲಿರುವ ಯೋಜನೆಗಳು, ನೀತಿ ನಿರೂಪಣೆಗಳ ಕುರಿತು ನ್ಯಾಯಪತ್ರದಲ್ಲಿ ಮಾಹಿತಿ ನೀಡಲಾಗಿದೆ.
ಪ್ರಣಾಳಿಕೆಯಲ್ಲಿ ಐದು ನ್ಯಾಯಗಳನ್ನು ನೀಡುವ ಭರವಸೆ ನೀಡಲಾಗಿದ್ದು, ಯುವ ನ್ಯಾಯ, ನಾರಿ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಮತ್ತು ಹಿಸ್ಸೇದಾರಿ ನ್ಯಾಯ ಎಂಬ ಐದು ಭಾಗಗಳನ್ನು ಮಾಡಲಾಗಿದೆ. ಐದು ಗ್ಯಾರೆಂಟಿಗಳನ್ನು ಕಾಂಗ್ರೆಸ್ ಪಕ್ಷ ಈ ನ್ಯಾಯಪತ್ರದ ಮೂಲಕ ನೀಡಿದ್ದು, ಅಧಿಕಾರಕ್ಕೆ ಬಂದಲ್ಲಿ ಐದೂ ಗ್ಯಾರೆಂಟಿಗಳನ್ನು ಈಡೇರಿಸುವ ಭರವಸೆ ನೀಡಿದೆ.