Saturday, July 27, 2024

12th ಫೇಲ್ ಸಿನಿಮಾ ಇಷ್ಟೊಂದು ಸದ್ದು ಮಾಡುತ್ತಿರುವುದು ಯಾಕೆ?

Most read

12th ಫೇಲ್ (12th Fail) ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಡಿಸೆಂಬರ್ 29ರಿಂದ OTT ವೇದಿಕೆಯಾದ ಡಿಸ್ನಿ+ಹಾಟ್ ಸ್ಟಾರ್ (Disney+Hotstar) ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಟಾಕೀಸುಗಳಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲೇ ಬಿಡುಗಡೆಯಾಗಿದ್ದರೂ ಮೊದಲಿಗೆ ಅಷ್ಟೇನೂ ಲಾಭ ಗಳಿಸದ ಸಿನಿಮಾ ತಡವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದಿದೆ (sleeping Hit). ಇದೀಗ ಓಟಿಟಿಯಲ್ಲಿ ದೊಡ್ಡ ಮಟ್ಟದಲ್ಲೇ ಜನಪ್ರಿಯತೆಗಳಿಸುತ್ತಾ ಸಾಗಿದೆ.

12th ಫೇಲ್ ಸಿನಿಮಾವನ್ನು IAS, IPS ಪಾಸು ಮಾಡಲು ಓದುತ್ತಿರುವ ಎಲ್ಲರೂ ಮುಗಿಬಿದ್ದು ನೋಡುತ್ತಿದ್ದಾರೆ. ಈಗಾಗಲೇ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿರುವ ಅಧಿಕಾರಿಗಳು ನೋಡುತ್ತಿದ್ದಾರೆ. ಮಾತ್ರವಲ್ಲ ಕಮಲ್ ಹಾಸನ್ ರಂತಹ ನಟರು ಈ ಸಿನಿಮಾದ ಬಗ್ಗೆ ಅತ್ಯಂತ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಈ ಸಿನಿಮಾ ನಿಜಕ್ಕೂ ಹೊಸ ಭರವಸೆಯ ಸಿಂಚನ ನೀಡಿದೆ’ ಎಂದು ಈ ತಮಿಳು ನಟ ನುಡಿದಿದ್ದಾರೆ.

ಯಾಕೆ ಈ ಸಿನಿಮಾ ಎಲ್ಲರಿಗೂ ಇಷ್ಟವಾಗಿದೆ?

12th ಫೇಲ್ ಸಿನಿಮಾ ಬಹಳ ಮುಖ್ಯವಾಗಿ ಒಂದು ನಿಜಜೀವನದ ಘಟನೆ ಆಧಾರಿತ ಸಿನಿಮಾ. 2005ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಮನೋಜ್ ಕುಮಾರ್ ಶರ್ಮಾ ಎಂಬುವವರ ನಿಜ ಜೀವನದ ಘಟನೆಗಳನ್ನು ಆಧರಿಸಿ 12th ಫೇಲ್ ಹೆಸರಿನ ನಾನ್ ಫಿಕ್ಷನ್ ಕೃತಿಯೊಂದು ಹಿಂದಿ ಭಾಷೆಯಲ್ಲಿ ಹೊರಬಂದು ಬಹಳ ಜನಪ್ರಿಯಗೊಂಡಿತ್ತು. ಅನುರಾಗ್ ಪಾಠಕ್ ಬರೆದಿದ್ದ ಇದೇ ಕೃತಿಯನ್ನೇ ವಿಧು ವಿನೋಧ್ ಛೋಪ್ರಾ ಸಿನಿಮಾ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದ ದೃಶ್ಯವೊಂದರಲ್ಲಿ ನಿಜ ಜೀವನದ ಮನೋಜ್ ಕುಮಾರ್ ಶರ್ಮಾ ಮತ್ತು ಅವರ ಬಾಳಸಂಗಾತಿ ಶ್ರದ್ಧಾ ಜೋಷಿ ಕ್ಯಾಮಿಯೋ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಿರ್ದೇಶಕರು ನಿಜ ಎಂದು ಒಪ್ಪಿಕೊಂಡು ಆ ನಿಜಜೀವನದ ತಾರೆಯರಿಗೆ ಸಲ್ಲಿಸಿದ ಸಣ್ಣ ಗೌರವ ಅದು ಎಂದಿದ್ದಾರೆ. ಸಿನಿಮಾ ಜನಪ್ರಿಯಗೊಳ್ಳುತ್ತಿದ್ದಂತೆ ತಮ್ಮ ಮದುವೆ ನಂತರದಲ್ಲಿ ತನ್ನ ಪತ್ನಿಯೊಂದಿಗೆ ತೆಗೆದುಕೊಂಡಿದ್ದ ಹಳೆಯ ಫೋಟೋವೊಂದನ್ನು ಐಪಿಎಸ್ ಅಧಿಕಾರಿ ಮನೋಜ್ ಶರ್ಮಾ X ತಾಣದ ಮೂಲಕ ಹಂಚಿಕೊಂಡಿದ್ದಾರೆ.

ಸ್ಪೂರ್ತಿಯ ಸೆಲೆಯಾಗಬಲ್ಲ ಕತೆ

12th ಫೇಲ್ ಸಿನಿಮಾ ಇಷ್ಟೊಂದು ಜನಪ್ರಿಯತೆ ಗಳಿಸಿಕೊಳ್ಳಲು ಮುಖ್ಯ ಕಾರಣ ಮಧ್ಯಪ್ರದೇಶದ ಡಕಾಯಿತರ ಜಿಲ್ಲೆ ಎಂದೇ ಕುಖ್ಯಾತವಾಗಿರುವ ಚಂಬಲ್ (Chambal) ಪ್ರದೇಶದ ಕಡುಬಡತನದ ಕುಟುಂಬವೊಂದರಿಂದ ಬಂದ ಪಿಯುಸಿ ಫೇಲಾಗಿದ್ದ ವಿದ್ಯಾರ್ಥಿಯೊಬ್ಬ ಸತತ ಪರಿಶ್ರಮ, ಛಲ, ಶ್ರದ್ಧೆ ಮತ್ತು ಆತ್ಮೀಯರ ನೆರವು- ಪ್ರೇರಣೆಗಳಿಂದ UPSC ಪರೀಕ್ಷೆಯಲ್ಲಿ ಟಾಪ್ ಶ್ರೇಣಿಯಲ್ಲಿ ಪಾಸಾಗಿ ತಾನೊಬ್ಬ IPS ಆಫೀಸರ್ ಆಗಬೇಕು ಎಂಬ ಕನಸನ್ನು ನನಸಾಗಿಸಿಕೊಳ್ಳುವ ಕಥಾ ಹಂದರ ಹೊಂದಿದೆ. ಮನೋಜ್ ಶರ್ಮಾ ಆಗಿ ನಟ ವಿಕ್ರಾಂತ್ ಮೆಸ್ಸೇ, ಶ್ರದ್ದಾ ಆಗಿ ಮೇಧಾ ಶಂಕರ್ ಮನೋಜ್ಞ ಅಭಿನಯದೊಂದಿಗೆ ಅನೇಕ ನಿಜ ಜೀವನದ ಪಾತ್ರಗಳನ್ನೇ ತೆರೆಯ ಮೇಲೆ ತರಲಾಗಿದೆ.

ಮನೋಜ್ ಶರ್ಮಾನ ತಂದೆ ಒಬ್ಬ ಗುಮಾಸ್ತನಾಗಿ ತನ್ನ ಮೇಲಧಿಕಾರಿಯ ಭ್ರಷ್ಟಾಚಾರ ಸಹಿಸದೇ ಅವನಿಗೆ ಚಪ್ಪಲಿಯಲ್ಲಿ ಹೊಡೆದ ಕಾರಣಕ್ಕೆ ಸಸ್ಪೆಂಡ್ ಆಗಿರುತ್ತಾನೆ. ಅದನ್ನು ಪ್ರತಿಭಟಿಸಿ ಹೈಕೋರ್ಟಿನಲ್ಲಿ ಕೇಸ್ ಹಾಕಿಕೊಂಡು ಹೋರಾಡ ತೊಡಗುತ್ತಾನೆ. ಚಂಬಲ್ ನಲ್ಲಿ ಪಿಯುಸಿ ಕಾಲೇಜಿನಲ್ಲಿ ಪ್ರಿನ್ಸಿಪಾಲರೇ ನಿಂತು ಕಾಪಿ ಹೊಡೆಸುವುದು ಪರಂಪರಾಗತ ರೂಢಿಯಾಗಿತ್ತುದೆ. ಅಂತಹ ಸಂದರ್ಭದಲ್ಲಿ ಕಾಪಿ ಹೊಡೆಯುವುದನ್ನು ತಪ್ಪಿಸಿ ಎಲ್ಲಾ ಮಕ್ಕಳೂ ಫೇಲಾಗಲು ಕಾರಣವಾದ DSP ದುಶ್ಯಂತ್ ಮನೋಜ್ ಗೆ ಪ್ರೇರಣೆಯಾಗುವುದು ಮಾತ್ರವಲ್ಲ “ನೀನು ಚೀಟಿಂಗ್ ಬಿಟ್ಟ ದಿನ ನನ್ನಂತೆ ಆಫೀಸರ್ ಆಗುತ್ತೀಯ” ಎಂದು ನುಡಿಯುತ್ತಾನೆ. ಇದನ್ನೇ ಗಂಭಿರವಾಗಿ ತೆಗೆದುಕೊಳ್ಳುವ ಮನೋಜ್ ಅಜ್ಜಿ ವರ್ಷಗಟ್ಟಲೆ ಉಳಿಸಿ ಕೊಟ್ಟ ಪಿಂಚಣಿ ಹಣವನ್ನು ಇಟ್ಟುಕೊಂಡು ಗ್ವಾಲಿಯರ್ (Gwalior) ಹೊರಡುತ್ತಾನೆ. ಅಲ್ಲಿಂದ ಮುಂದೆ ಜರುಗುವ ಒಂದೊಂದೇ ಘಟನಾವಳಿಗಳನ್ನು ಸಿನಿಮಾ ಅತ್ಯಂತ ಮನಮುಟ್ಟುವಂತೆ ಕಟ್ಟಿ ಕೊಡುತ್ತದೆ. ಮನೋಜ್ ದೆಹಲಿಯಲ್ಲಿ ಹಿಟ್ಟಿನ ಗಿರಣಿಯಲ್ಲಿ ಹಗಲೂ ರಾತ್ರಿ ಕೆಲಸ ಮಾಡುತ್ತಾ ಓದುವ ಸನ್ನಿವೇಶ, ಈ ನಡುವೆ ಪರಿಚಯವಾಗುವ ಶ್ರೀಮಂತ ಹುಡುಗಿ ಶ್ರದ್ಧಾಳಿಗೆ ಸುಳ್ಳು ಹೇಳಿ ಪೇಚಿಗೆ ಸಿಲುಕಿ ಕೊನೆಗೆ ಆಕೆಯೊಂದಿಗೆ ಪ್ರೇಮಾಂಕುರವಾದ ನಂತರ ನಡೆಯುವ ಘಟನೆಗಳು, ಅವಳನ್ನು ಹುಡುಕಿಕೊಂಡು ಮಸ್ಸೂರಿಗೆ ಹೋದಾಗ ಆಗುವ ನಿರಾಸೆ ಮತ್ತು ವಾಪಾಸು ಚಂಬಲ್ ಗೆ ಹೋದಾಗ ಎದುರುಗೊಳ್ಳುವ ಸನ್ನಿವೇಶಗಳು ಭಾವ ತೀವ್ರತೆಗೆ ಕೊಂಡೊಯ್ಯುತ್ತವೆ.

ದೊಡ್ಡ ಆಸೆ ಕನಸುಗಳನ್ನು ಇಟ್ಟುಕೊಂಡು ದೊಡ್ಡ ನಗರಗಳಿಗೆ ಬಂದು ಹೀಗೆ ಪಡಿಪಾಡಲುಗಳ ನಡುವೆ ಅಧ್ಯಯನ ಕೈಗೊಳ್ಳುವ ಅನೇಕ ಯುವಕ ಯುವತಿಯರ ಬದುಕು 12th ಫೇಲ್ ಸಿನಿಮಾದಲ್ಲಿ ಅನಾವರಣಗೊಳ್ಳುತ್ತದೆ. ಮೂರು ಸಲ ಪ್ರಿಲಿಮ್ಸ್ (Prelims) ಪಾಸಾದರೂ ಮುಖ್ಯ ಪರೀಕ್ಷೆಯಲ್ಲಿ ಪೇಲಾಗಿ ಪ್ರತಿಸಲ ‘ರೀಸ್ಟಾರ್ಟ್’ (Restart) ಮಾಡುವ ಒತ್ತಡಗಳು, ಕಡೆಯ ಸಲ ಮೇನ್ಸ್ ಪಾಸಾಗಿ ಸಂದರ್ಶನದ ಹಂತದಲ್ಲೂ ಕೆಲಸವೇ ತಪ್ಪಿಹೋಗುವ ಸನ್ನಿವೇಶದಲ್ಲೂ ಅದೃಷ್ಟ ಮತ್ತು ಮನೋಜ್ ಶರ್ಮಾ ಪ್ರದರ್ಶಿಸುವ ಪ್ರಾಮಾಣಿಕತೆ ಅವನ ಕೈ ಹಿಡಿಯುತ್ತವೆ. ‘ನೀನು ಐಪಿಎಸ್ ಆಧಿಕಾರಿಯೇ ಆಗು ಹಿಟ್ಟಿನ ಗಿರಣಿಯಲ್ಲೇ ಕೆಲಸ ಮಾಡು ನಾನು ನಿನ್ನೊಂದಿಗಿರುತ್ತೇನೆ, ನನ್ನನ್ನು ಮದುವೇ ಆಗ್ತೀಯಾ? ಎಂದು ಬರೆದ ಸಾಲುಗಳನ್ನು ಓದುವ ಮನೋಜ್ ಶರ್ಮಾ ಮುಖದಲ್ಲಿ ಆಗುವ ಬದಲಾವಣೆ… ಎಲ್ಲಕ್ಕಿಂತ ಹೆಚ್ಚಾಗಿ ಫಲಿತಾಂಶದ ಹೊತ್ತಿನಲ್ಲಿ ಮನೋಜ್ ಶರ್ಮಾನ ಗೆಲುವನ್ನು ಆತನ ಸಂಗಾತಿಗಳು ಸಂಭ್ರಮಿಸುವ ಸಮಯದಲ್ಲಂತೂ ನೋಡುಗರ ಕಣ್ಣಾಲಿಗಳು ತುಂಬುತ್ತವೆ.

ಪ್ರಾಮಾಣಿಕತೆಯನ್ನು ಉಳಿಸಲು, ಭ್ರಷ್ಟಾಚಾರವನ್ನು, ಅನ್ಯಾಯವನ್ನು ನಿಯಂತ್ರಿಸಲು ತಾನು ದೊಡ್ಡ ಆಧಿಕಾರಿಯಾಗಬೇಕು ಎಂದು ಬಯಸುವ ಬಹಳ ಜನರಿರುತ್ತಾರೆ. ಆದರೆ ಯಶಸ್ಸು ಪಡೆಯುವವರು ಬಹಳ ವಿರಳ. ಅದರಲ್ಲೂ ಬಡ ಮತ್ತು ಹಿಂದುಳಿದ ವರ್ಗಗಳ ಹಿನ್ನೆಲೆಯಿಂದ ಬರುವವರಿಗೆ ಇದೊಂದು ಅಗ್ನಿದಿವ್ಯವಾಗಿರುತ್ತದೆ. ಅಧಿಕಾರಿ ಮನೋಜ್ ಶರ್ಮಾ ತಾವು ಸೇವೆಗೆ ಸೇರಿಕೊಂಡ ನಂತರದಲ್ಲಿ ತಮ್ಮ ಜೀವನದ ಉದ್ದೇಶವನ್ನು ಎಷ್ಟರ ಮಟ್ಟಿಗೆ ಈಡೇರಿಸಲು ಸಾಧ್ಯವಾಗಿದೆ ಎಂದು ಗೊತ್ತಿಲ್ಲ. ಬಹುಶಃ ಆ ಕುರಿತೂ ಸಿನಿಮಾ ಮಾಡುವಂತ ಕತೆಗಳೇ ಇರಬಹುದು. ಆದರೆ ಸಮಾಜಗಕ್ಕೆ ಒಳಿತು ಮಾಡಲು ಅಧಿಕಾರಿಯಾಗಬೇಕು ಎಂದು ಬಯಸುವ ಯಾರಿಗೇ ಆದರೂ ಬಹಳ ಸ್ಪೂರ್ತಿ ನೀಡುವ ಸಿನಿಮಾ 12th ಫೇಲ್ ಎಂಬುದರಲ್ಲಿ ಅನುಮಾನವೇ ಇಲ್ಲ.

More articles

Latest article