ಬೆಂಗಳೂರು: ಮಾರ್ಚ್ 3, ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಕಾಂಗ್ರೆಸ್ ಗೆ ಬಹುಮತ ಇದೆ. ಸಭಾಪತಿ ಸ್ಥಾನ ಕುರಿತು ಕಾಂಗ್ರೆಸ್ ಸದಸ್ಯರು ನೋಟೀಸ್ ಕೊಟ್ಟರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಅವರಿಗೆ ಸ್ವಾತಂತ್ರ್ಯವಿದೆ. ಅವರಿಗೆ ಅಧಿಕಾರ ಇದೆ. ನಾನು ಸಾಮಾನ್ಯ ಶಿಕ್ಷಕನಾಗಿ ಈ ಹುದ್ದೆಗೆ ಬಂದವನು ಎಂದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ನಲ್ಲಿ ಹಲವು ಸಮಸ್ಯೆಗಳನ್ನು ಕುರಿತು ಚರ್ಚೆ ನಡೆಸುತ್ತೇವೆ. ರಾಜ್ಯದಲ್ಲಿ ಮಾದಕವಸ್ತುಗಳಿಗೆ ಮಕ್ಕಳು ಬಲಿಯಾಗುತ್ತಿರುವ ಬಗ್ಗೆ ಮತ್ತು ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ವಿಧಾನಮಂಡಲ ಜಂಟಿ ಸಲಹಾ ಸಮಿತಿ ಸಭೆ ಕರೆಯಲು ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಮಿತಿಯ ಸಭೆ ನಡೆಯಲಿದೆ. ಬೆಂಗಳೂರು ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಸ್ತಾವ ಕೊಟ್ಟಿದ್ದಾರೆ. ಆ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸುವ ಬಗ್ಗೆ ಯೋಚನೆ ಬಂದಿದೆ. ಚರ್ಚೆಗಳು ಉತ್ತಮ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬ ಬೇಸರವೂ ಇದೆ. ಕಲಾಪವನ್ನು ಸುಸೂತ್ರವಾಗಿ ನಡೆಸುವ ಬಗ್ಗೆ ವಿಪಕ್ಷದವರ ಜೊತೆಗೂ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು
ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬಿಜೆಪಿಯ ಸಿ.ಟಿ. ರವಿ ನಡುವೆ ನಡೆದ ಘಟನೆ ಈಗಾಗಲೇ ಅಂತ್ಯಗೊಂಡಿದೆ. ಡಿಸೆಂಬರ್ 19 ರಂದೇ ಅದನ್ನು ನಾನು ಅಂತ್ಯಗೊಳಿಸಿದ್ದೇನೆ. ಅದು ಈಗ ಪರಿಷತ್ ನ ಎಥಿಕ್ಸ್ ಸಮಿತಿ ಮುಂದೆ ಇದೆ. ಎಥಿಕ್ಸ್ ಸಮಿತಿ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕರಿಗೆ ವಿಶ್ರಾಂತಿಗೆ ಆರಾಮ ಕುರ್ಚಿ ವ್ಯವಸ್ಥೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಪರಿಷತ್ನಲ್ಲಿ ಆಸಕ್ತಿಯಿಂದ ಸದಸ್ಯರು ಕೂರುತ್ತಾರೆ. ಮಧ್ಯಾಹ್ನ ಊಟವಾದ ಮೇಲೂ ಸದಸ್ಯರು ಇರುತ್ತಾರೆ. ನಮ್ಮಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ. ಇನ್ನೊಂದು ಸದನದ ಬಗ್ಗೆ ನಾನು ಮಾತಾಡುವುದು ಸೂಕ್ತ ಅಲ್ಲ ಎಂದರು.
ಉಪಸಭಾಪತಿ ಎಂಕೆ ಪ್ರಾಣೇಶ್ ಆಯ್ಕೆ ಕುರಿತು ಮರು ಮತ ಎಣಿಕೆ ನಡೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಮತ ಎಣಿಕೆ ನಡೆದಿದೆ. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಸಭಾಧ್ಯಕ್ಷರು, ಸಭಾಪತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೇ ಎಲ್ಲವೂ ಗೊತ್ತಿದೆ, ನನ್ನ ಬಾಯಲ್ಲಿ ಯಾಕೆ ಹೇಳಿಸುತ್ತೀರಿ? ಇನ್ನೊಬ್ಬರ ಬಗ್ಗೆ ನಾನು ಮಾತಾಡುವುದು ಸರಿಯಲ್ಲ ಎಂದರು.