ಐಪಿಎಲ್‌ ಕಾಲ್ತುಳಿತ: ಪೊಲೀಸ್‌ ಆಯುಕ್ತ ಬಿ. ದಯಾನಂದ ಸೇರಿ ಐವರು ಪೊಲೀಸ್ ಅಧಿಕಾರಿಗಳ ಅಮಾನತು ವಾಪಸ್

Most read

ಬೆಂಗಳೂರು: ಐಪಿಎಲ್‌ ನಲ್ಲಿ ಗೆಲುವು ಸಾಧಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ ಸಿ ಬಿ) ಸಂಭರಮಾಚರಣೆಯ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿಯಲ್ಲಿ ನಗರ ಪೊಲೀಸ್‌ ಆಯುಕ್ತ  ಬಿ.ದಯಾನಂದ ಸೇರಿ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದಿದೆ.

ಹೆಚ್ಚುವರಿ ಪೊಲೀಸ್‌ ಕಮಿಷನರ್ ವಿಕಾಸ್‌ ಕುಮಾರ್‌ ವಿಕಾಸ್‌, ಕೇಂದ್ರ ವಿಭಾಗದ ಡಿಸಿಪಿ ಟಿ. ಶೇಖರ್‌, ಕಬ್ಬನ್‌ ಪಾರ್ಕ್‌ ಎಸಿಪಿ ಸಿ. ಬಾಲಕೃಷ್ಣ ಮತ್ತು ಇನ್‌ಸ್ಪೆಕ್ಟರ್ ಎ.ಕೆ. ಗಿರೀಶ್‌ ಅವರ ಅಮಾನತ್ತನ್ನೂ ಹಿಂಪಡೆಯಲಾಗಿದೆ. ಈ ಎಲ್ಲ‌ ಅಧಿಕಾರಿಗಳ ಮೇಲೆ ನಿಯಮಾನುಸಾರ ಶಿಸ್ತುಕ್ರಮ ಬಾಕಿಯಿರಿಸಿ, ತಕ್ಷಣದಿಂದ ಕರ್ತವ್ಯಕ್ಕೆ ಮರಳಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಈ ಅಧಿಕಾರಿಗಳು ತಮ್ಮ ಅಮಾನತು ಹಿಂಪಡೆಯುವಂತೆ ಜುಲೈ 27ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ಈ ಕಾರಣಗಳಿಗೆ ಮರು ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಜೂನ್‌ 4ರಂದು ನಡೆದಿದ್ದ ಕಾಲ್ತುಳಿತ ಘಟನೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯ ಸರ್ಕಾರವು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದ ಮ್ಯಾಜಿಸ್ಟ್ರಿ‌ಯಲ್‌ ತನಿಖಾ ತಂಡ ಜುಲೈ 11ರಂದು ಮತ್ತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ನೇತೃತ್ವದ ಏಕ ಸದಸ್ಯ ಆಯೋಗ ಜುಲೈ 10ರಂದು ತನಿಖಾ ವರದಿ ಸಲ್ಲಿಸಿದೆ.

ತಮ್ಮನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ (ಸಿಎಟಿ) ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ, ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ.

More articles

Latest article