ಶಿವಮೊಗ್ಗ: ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಎಸ್.ರವಿಕುಮಾರ್ ತಿಳಿಸಿದ್ದಾರೆ. ನಿಗಮದಲ್ಲಿ ಹಣಕಾಸಿನ ಶಿಸ್ತು ಹಾಗೂ ಪಾರದರ್ಶಕತೆ ರೂಪಿಸಿದ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದೂ ಆರೋಪಿಸಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನನ್ನ ವಿರುದ್ಧಪಿತೂರಿ ನಡೆಸಲಾಗಿದೆ. ಆದರೂ ಪಕ್ಷಕ್ಕೆ ಮುಜುಗರ ಉಂಟಾಗುವುದನ್ನು ತಡೆಯಲು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೂಡಲು ನಿರ್ಧರಿಸಿದ್ದೇನೆ ಎಂದು ಬೆಂಗಳೂರಿಗೆ ಹೊರಡುವುದಕ್ಕೂ ಮುನ್ನ ಅವರು ತಿಳಿಸಿದರು.
ನಿಗಮದ ಅಧ್ಯಕ್ಷನಾದ ನಂತರ ನಾನು ಯಾರ ಬಳಿಯೂ ಕಮೀಷನ್ ಪಡೆದಿಲ್ಲ. ಯಾರಿಗೂ ಕೊಟ್ಟಿಲ್ಲ. ಎಐ ತಂತ್ರಜ್ಞಾನ ಬಳಸಿಕೊಂಡು ನನ್ನ ಮಾತುಗಳನ್ನು ತಿರುಚಲಾಗಿದೆ. ಎಂದರು. ನಿಗಮದ ಕಚೇರಿಯಲ್ಲಿಯೇ ವಿಡಿಯೊ ಚಿತ್ರೀಕರಿಸಿರುವುದು ಅಚ್ಚರಿ ಮೂಡಿಸಿದೆ. ಈ ಪಿತೂರಿಯಲ್ಲಿ ನಿಗಮದ ಅಧಿಕಾರಿಗಳ ಪಾತ್ರವನ್ನು ಅಲ್ಲಗಳೆಯಲಾಗದು. ಮುಖ್ಯಮಂತ್ರಿ ಮತ್ತು ಡಿಸಿಎಂ ಅವರನ್ನು ಭೇಟಿಯಾಗಿ ವಾಸ್ತವ ಏನೆಂಬುದನ್ನು ಮನವರಿಕೆ ಮಾಡಿಕೊಟ್ಟು ತನಿಖೆ ನಡೆಸುವಂತೆ ಮನವಿ ಮಾಡಲಿದ್ದೇನೆ ಎಂದು ತಿಳಿಸಿದರು.
ಈ ಹಿಂದೆ ಭೋವಿ ಅಭಿವೃದ್ಧಿ ನಿಗಮದಲ್ಲಿ ಬಹು ದೊಡ್ಡ ಹಗರಣವೇ ನಡೆದಿತ್ತು. ಅಧ್ಯಕ್ಷ ಸ್ಥಾನ ಮುಳ್ಳಿನ ಕುರ್ಚಿ ಎಂಬ ಅರಿವು ನನಗಿತ್ತು. ಭ್ರಷ್ಟಾಚಾರ ತಡೆಯಲು ಬಿಗಿ ಕ್ರಮಗಳನ್ನು ಅನುಸರಸಿದ್ದೆ.ಈ ಬೆಳವಣಿಗೆಗಳನ್ನು ಸಹಿಸಿಕೊಳ್ಳಲಾಗದ ಕೆಲವರು ಸಂಚು ರೂಪಿಸಿದ್ದಾರೆ ಎಂದು ತಿಳಿಸಿದರು.