ಬೆಂಗಳೂರು: ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡಿಕೊಂಡು ಬಂದಿದ್ದ ರನ್ಯಾ ರಾವ್ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಪಾತ್ರ ಬಗ್ಗೆ ತನಿಖೆ ನಡೆಸಿ ರಾಜ್ಯ ಸರ್ಕಾರವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ನೇತೃತ್ವದಲ್ಲಿ ವಿಚಾರಣಾ ತಂಡ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 230 ಪುಟಗಳ ವರದಿಯನ್ನು ಸಲ್ಲಿಸಿದೆ. ತಮ್ಮ ಮಲ ಮಗಳು, ಚಿತ್ರನಟಿ ರನ್ಯಾ ರಾವ್ ಶಿಷ್ಟಾಚಾರ ನಿಯಮಗಳ ಅಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡಿರುವುದು, ಡಿಜಿಪಿ ರಾಮಚಂದ್ರ ರಾವ್ ಅವರ ಗಮನಕ್ಕೆ ಬಂದಿತ್ತು. ಆದರೆ, ರನ್ಯಾ ಅವರಿಗೆ ಶಿಷ್ಟಾಚಾರ ಸೌಲಭ್ಯ ಕಲ್ಪಿಸುವಂತೆ ರಾಮಚಂದ್ರ ರಾವ್ ಅವರೇ ಸೂಚಿಸಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ ಎಂಬ ಅಂಶ ವರದಿಯಲ್ಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಒಂದು ವಾರದೊಳಗಾಗಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ನೇತೃತ್ವದಲ್ಲಿ ವಿಚಾರಣಾ ತಂಡ ರಚಿಸಿತ್ತು. ತನಿಖೆಗಾಗಿ ಈ ತಂಡ ಮೂರು ವಾರ ತೆಗೆದುಕೊಂಡಿದೆ.
ವರದಿ ಸ್ವೀಕರಿಸಿರುವ ಮುಖ್ಯ ಕಾರ್ಯದರ್ಶಿಗಳು ವರದಿಯ ಸಲ್ಲಿಕೆಯಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಗಮನಕ್ಕೆ ತಂದಿದ್ದಾರೆ. ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ಸಿಎಂ ಮತ್ತು ಗೃಹ ಸಚಿವರೇ ತೆಗೆದುಕೊಳ್ಳಬೇಕಾಗಿದೆ.
ರನ್ಯಾ ರಾವ್ ಅವರು ಶಿಷ್ಟಾಚಾರ ಸೌಲಭ್ಯವನ್ನು ಬಳಸಿಕೊಳ್ಲೂತ್ತಿದ್ದರೂ ಅವರನ್ನು ತಪಾಸಣೆ ಮಾಡಲು ಕಸ್ಟಮ್ಸ್ ಅಧಿಕಾರಿಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ಶಿಷ್ಟಾಚಾರ ಸೌಲಭ್ಯ ಪಡೆದಿದ್ದರೂ ವಿಮಾನ ನಿಲ್ದಾಣಗಳಲ್ಲಿ ಯಾವುದೇ ಅಧಿಕಾರಿ ಅಥವಾ ಅವರ ಕುಟುಂಬದವರಿಗೆ ಕಸ್ಟಮ್ಸ್ ವಿನಾಯಿತಿ ಇರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರು ಚಿನ್ನ ಕಳ್ಳ ಸಾಗಣೆ ಮಾಡಲು ಹಲವಾರು ಬಾರಿ ಶಿಷ್ಟಾಚಾರ ಸೌಲಭ್ಯಗಳನ್ನು ಪಡೆದಿದ್ದಾರೆ. ತಮ್ಮ ಪ್ರಬಾವವನ್ನು ಬಳಸಿ ಪೊಲೀಸ್ ವಾಹನವನ್ನೂ ಬಳಕೆ ಮಾಡಿಕೊಂಡಿದ್ದಾರೆ. ಇದೆಲ್ಲವೂ ಅಧಿಕಾರಿ ರಾಮಚಂದ್ರ ರಾವ್ ಅವರ ಅರಿವಿಗೆ ಬಂದಿತ್ತು. ಸರ್ಕಾರಿ ವಾಹನ ಬಳಸದಂತೆ ತಮ್ಮ ಮಗಳಿಗೆ ನಿರ್ಬಂಧ ಹೇರಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ರನ್ಯಾ ರಾವ್ ಅವರು ಸರ್ಕಾರಿ ಕಾರು ಬಳಸಿರುವುದು ಸಾಬೀತಾಗಿದೆ. ಅವರು ಸರ್ಕಾರಿ ವಾಹನ ಬಳಸಿರುವುದು ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.