ಬೆಂಗಳೂರು: ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಚಿತ್ರನಟಿ ರನ್ಯಾ ರಾವ್ ಗೆ ಸಹಕಾರ ನೀಡುತ್ತಿದ್ದ ತರುಣ್ ಕೊಂಡೂರು ರಾಜು ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಸಧ್ಯ ಕೊಂಡೂರು ರಾಜು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕೆಲವು ದಿನಗಳ ಹಿಂದೆ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸಿಸಿಎಚ್ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ. ಆರೋಪಿ ರಾಜುಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಬಾರದು ಎಂದು ಕಂದಾಯ ರೆವಿನ್ಯೂ ನಿರ್ದೇಶನಾಲಯದ (ಡಿಆರ್ಐ) ಪರ ವಕೀಲರು ವಾದ ಮಂಡಿಸಿದ್ದರು.
ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದ ಆರೋಪದಡಿ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರತರಾವ್ ಅವರ ಮಲ ಮಗಳು, ನಟಿ ರನ್ಯಾ ರಾವ್ ಅವರನ್ನು ಡಿಆರ್ಐ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 3 ರಂದು ಬಂಧಿಸಿದ್ದರು. ತರುಣ್ ಅವರನ್ನು ಮಾರ್ಚ್ 9 ರಂದು ಬಂಧಿಸಲಾಗಿತ್ತು. ಚಿನ್ನ ಕಳ್ಳಸಾಗಣೆಯಲ್ಲಿ ರನ್ಯಾ ರಾವ್ ಅವರಿಗೆ ನೆರವು ನೀಡಿದ ಆರೋಪವನ್ನು ತರುಣ್ ಎದುರಿಸುತ್ತಿದ್ದಾರೆ.
ಮತ್ತೊಂದು ಕಡೆ ರನ್ಯಾ ರಾವ್, ಸಾಹಿಲ್ ಜೈನ್ ಹಾಗೂ ತರುಣ್ ಕೊಂಡೂರು ರಾಜು ಅವರ ನ್ಯಾಯಾಂಗ ಬಂಧನ ಅವಧಿಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯ ಏಪ್ರಿಲ್ 21ರ ವರೆಗೆ ವಿಸ್ತರಣೆ ಮಾಡಿದೆ. ಮೂವರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರ್ಥಿಕ ಅಪರಾಧಗಳ ನ್ಯಾಯಾಲಯದ ನ್ಯಾಯಾಧೀಶರು ವಿಡಿಯೊ ಕಾನ್ಫರೆನ್ಸ್ ಮೂಲಕ ಮೂವರ ವಿಚಾರಣೆ ನಡೆಸಿದರು.