ಸರಕಾರಿ ಅಕಾಡೆಮಿಗಳ ಕೆಲಸ ಅಕಾಡೆಮಿಕ್ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದೇ ಹೊರತು ಜಾತ್ರೆ ಉತ್ಸವಗಳನ್ನು ಮಾಡುವುದಲ್ಲ. ಮೊದಲೇ ನಾಟಕ ಅಕಾಡೆಮಿಗೆ ಸರಕಾರ ಕಡಿಮೆ ಅನುದಾನ ನೀಡುತ್ತಿದೆ. ಅದರಲ್ಲಿಯೇ ಇಪ್ಪತ್ತು ಲಕ್ಷದಷ್ಟು ಹಣವನ್ನು ಒಂದು ರಂಗಪರಿಷೆಗೆ ಖರ್ಚು ಮಾಡುವುದಾದರೆ ಅಗತ್ಯವಾದ ಅಕಾಡೆಮಿಕ್ ಕೆಲಸಗಳನ್ನು ಮಾಡುವುದು ಹೇಗೆ? ಬೆಂಗಳೂರನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ರಂಗಭೂಮಿ ಬೆಳವಣಿಗೆಗೆ ಪೂರಕವಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವುದು ಹೇಗೆ? ಕೇಳಬೇಕಾದ ಪ್ರಶ್ನೆಗಳು ಬೇಕಾದಷ್ಟಿವೆ. ಆದರೆ ನಾಟಕ ಅಕಾಡೆಮಿಯ ಅಧ್ಯಕ್ಷರ ಕಿವಿಗಳೇ ಮಂದವಾಗಿವೆ – ಶಶಿಕಾಂತ ಯಡಹಳ್ಳಿ, ರಂಗ ಕರ್ಮಿ.
ರಂಗಪರಿಷೆ ಹೆಸರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ನಾಟಕೋತ್ಸವ ಸಫಲವಾಗಿದೆ. ಫೆಬ್ರವರಿ 1 ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಈ ರಂಗಪರಿಷೆಯು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ “ಭಾರತ ರಂಗ ಮಹೋತ್ಸವ”ದ ಪರಿಕಲ್ಪನೆಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದು ಬೆಂಗಳೂರಿನ ರಂಗಾಸಕ್ತರ ಕಣ್ಮನಗಳಿಗೆ ರಸದೌತಣವನ್ನು ಉಣಬಡಿಸಿದೆ.
ಇಲ್ಲಿ ನಾಟಕೋತ್ಸವದ ನೆಪದಲ್ಲಿ ಸಾಂಸ್ಕೃತಿಕ ಜಾತ್ರೆಯನ್ನೇ ಹಮ್ಮಿಕೊಂಡಿದ್ದು ವಿಶೇಷ. ಕೇವಲ ಎರಡೂವರೆ ಲಕ್ಷ ಹಣವನ್ನು ಇಟ್ಟುಕೊಂಡು ಸಣ್ಣದಾಗಿ ಆರಂಭಗೊಂಡ ಈ ರಂಗಪರಿಷೆಯ ಪರಿಕಲ್ಪನೆ ಕೊಟ್ಯಾಂತರ ರೂಪಾಯಿಗಳ ದೊಡ್ಡ ಯೋಜನೆಯಾಗಿ ರೂಪಗೊಂಡಿದ್ದೇ ವಿಸ್ಮಯ. ಈ ಸಾಂಸ್ಕೃತಿಕ ಸಾಧನೆಯ ರೂಪರೇಷೆಗಳ ಹಿಂದಿದ್ದವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರುವ ನಾಗರಾಜಮೂರ್ತಿ, ರಂಗಭೂಮಿಯ ಆಪದ್ಬಾಂಧವ ಬಿ.ಸುರೇಶ್ ಹಾಗೂ ಅನೇಕ ವಿಸ್ಮಯಗಳ ಸೃಷ್ಟಿಕರ್ತರಾದ ಶಶಿಧರ್ ಅಡಪ. ಮುಖ್ಯವಾಗಿ ಈ ಮೂವರ ಪರಿಶ್ರಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ರಂಗಪರಿಷೆಯ ಪರಿಕಲ್ಪನೆ ಗಮನಾರ್ಹವಾಗಿ ಯಶಸ್ವಿಯಾಗಿದೆ. ಬಿ.ಸುರೇಶರವರು ಈ ರಂಗ ಮಹೋತ್ಸವದ ನಿರ್ದೇಶಕರಾಗಿ ತಮ್ಮ ತನು ಮನ ಧನಗಳ ಮೂಲಕ ನಾಟಕೋತ್ಸವದ ಯಶಸ್ಸಿಗೆ ಶ್ರಮಿಸಿದ್ದಾರೆ. ಕಲಾಗ್ರಾಮದ ಆವರಣದಲ್ಲಿ ಸಾಂಸ್ಕೃತಿಕ ಲೋಕವನ್ನೇ ಕಲಾನಿರ್ದೇಶಕರಾದ ಶಶಿಧರ್ ಅಡಪರವರು ಸೃಷ್ಟಿಸಿ ರಂಗಪರಿಷೆಯ ಸಫಲತೆಗೆ ಕಾರಣೀಕರ್ತರಾಗಿದ್ದಾರೆ. ಅಗತ್ಯ ಇರಲಿ ಬಿಡಲಿ ಎಲ್ಲಾ ಕಾರ್ಯಭಾರಗಳನ್ನು ತಮ್ಮ ಹೆಗಲಿಗೇರಿಸಿಗೊಂಡ ನಾಗರಾಜಮೂರ್ತಿಯವರು ತಮ್ಮ ಏಕವ್ಯಕ್ತಿ ಪ್ರದರ್ಶನದ ಸರ್ವಾಧಿಕಾರಿ ಗುಣವಿಶೇಷದಿಂದಾಗಿ ತಾವೂ ಮೆರೆದು ರಂಗಪರಿಷೆಯನ್ನು ಮೆರೆಸಿದ್ದಾರೆ.
ಹಾಗಂತ ಈ ರಂಗಪರಿಷೆಯ ಹೆಸರು ಹೊಸದಾಗಿರಬಹುದು, ಆದರೆ ಈ ಪರಿಕಲ್ಪನೆ ಹೊಸದೇನಲ್ಲ. ಈಗಾಗಲೇ ಶಶಿಧರ್ ಅಡಪರವರ ನೇತೃತ್ವದಲ್ಲಿ ಪ್ರತಿ ವರ್ಷ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಳ್ಳುತ್ತಾ ಬಂದಿರುವ ಸಿಜಿಕೆ ನೆನಪಿನ ‘ರಂಗನಿರಂತರ’ ರಾಷ್ಟ್ರೀಯ ನಾಟಕೋತ್ಸವದ ಮಾದರಿಯನ್ನೇ ಈ ರಂಗಪರಿಷೆಯಲ್ಲಿ ಮರುರೂಪಿಸಲಾಗಿದೆ. ವ್ಯತ್ಯಾಸ ಇಷ್ಟೇ ಈ ಸರಕಾರಿ ಸಂಸ್ಥೆಗಳ ಪ್ರಾಯೋಜಕತ್ವದ ರಂಗಮಹೋತ್ಸವಕ್ಕಾದ ಖರ್ಚು ಅಂದಾಜು ಮೂರು ಕೋಟಿ. ‘ರಂಗನಿರಂತರ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಮಾಡಲಾಗುವ ಖರ್ಚು ಸರಿಸುಮಾರು 18 ಲಕ್ಷ ರೂಪಾಯಿಗಳು. ಕಡಿಮೆ ಹಣದಲ್ಲಿ ಹೆಚ್ಚಿನದನ್ನು ‘ರಂಗನಿರಂತರ’ ಸಾಧ್ಯಮಾಡಿ ತೋರಿಸಿದ್ದರೆ, ಕೋಟ್ಯಾಂತರ ರೂಪಾಯಿಗಳಷ್ಟು ಜನರ ತೆರಿಗೆ ಹಣವನ್ನು ಬಳಸಿ ಎಲ್ಲಮ್ಮನ ಜಾತ್ರೆ ಮಾಡಲಾಗಿದೆ. ಸರಕಾರಿ ಸಂಸ್ಥೆಗಳು ಮಾಡುವ ಕಾರ್ಯಕ್ರಮಗಳು ಯಾವಾಗಲೂ ಹೀಗೆಯಾ?
ದೆಹಲಿಯ ಎನ್ ಎಸ್ ಡಿಯು ಭಾರತ ರಂಗ ಮಹೋತ್ಸವದಲ್ಲಿ ಪ್ರದರ್ಶನಗೊಂಡ ಎಂಟೂ ನಾಟಕಗಳನ್ನು ಪ್ರಾಯೋಜನೆ ಮಾಡಿದೆ. ಕರ್ನಾಟಕ ನಾಟಕ ಅಕಾಡೆಮಿಯು ಕಲಾಗ್ರಾಮದ ರಂಗಮಂದಿರದ ಲೈಟ್ ಆಂಡ್ ಸೌಂಡ್ ವೆಚ್ಚ ಹಾಗೂ ಕಲಾವಿದರಿಗೆ ಆತಿಥ್ಯದ ವ್ಯವಸ್ಥೆಯ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ರಂಗಪರಿಷೆಯ ಎಲ್ಲಾ ಖರ್ಚು ವೆಚ್ಚಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದಾಗಿತ್ತು. ಕರ್ನಾಟಕ ನಾಟಕ ಅಕಾಡೆಮಿಯು ಮೂರು ವರ್ಷಗಳ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಒಟ್ಟಿಗೆ ಮಾಡಿದ್ದರಿಂದ ಇಪ್ಪತ್ತು ಲಕ್ಷ ಹಣ ಉಳಿತಾಯವಾಗಿತ್ತು. ಆ ಹಣವನ್ನು ಈ ರಂಗಮಹೋತ್ಸವಕ್ಕೆ ಬಳಸಲಾಗಿದೆಯಂತೆ. ಒಟ್ಟಾರೆಯಾಗಿ ಕೇಂದ್ರ ಹಾಗೂ ರಾಜ್ಯದ ಸಂಸ್ಕೃತಿ ಇಲಾಖೆಗಳು ಸೇರಿ ಈ ಸಾಂಸ್ಕೃತಿಕ ಜಾತ್ರೆಗೆ ಮೂರು ಕೋಟಿಯಷ್ಟು ಖರ್ಚು ಮಾಡಿವೆ.
ಅಷ್ಟೊಂದು ಹಣ ಖರ್ಚು ಮಾಡಿ ರಂಗಜಾತ್ರೆಯನ್ನು ಹಮ್ಮಿಕೊಂಡಿದ್ದಕ್ಕೆ ಯಾವುದೇ ತಕರಾರಿಲ್ಲ. ಪ್ರಶ್ನೆ ಇರುವುದು ಎಷ್ಟು ಜನ ರಂಗಾಸಕ್ತರಿಗೆ ಪ್ರದರ್ಶನಗೊಂಡ ನಾಟಕಗಳನ್ನು ತೋರಿಸಲಾಯ್ತು ಎನ್ನುವುದಾಗಿದೆ. ಕಲಾಗ್ರಾಮ ಸಮುಚ್ಚಯದಲ್ಲಿರುವ ರಂಗಮಂದಿರದ ಆಸನಗಳ ಸಾಮರ್ಥ್ಯ ಕೇವಲ 250. ಸೀಟುಗಳ ನಡುವೆ ನೆಲದಲ್ಲಿ ಕೂತು ನಾಟಕ ನೋಡುವವರನ್ನೂ ಸೇರಿಸಿದರೆ ಮುನ್ನೂರು ಪ್ರೇಕ್ಷಕರು ಒಂದು ನಾಟಕ ನೋಡಲು ಸಾಧ್ಯ. ಎಲ್ಲಾ ಎಂಟೂ ನಾಟಕಗಳನ್ನು ನೋಡಿದ ಪ್ರೇಕ್ಷಕರ ಸಂಖ್ಯೆ ಎರಡೂವರೆ ಸಾವಿರದಷ್ಟು. ಇಷ್ಟು ಕಡಿಮೆ ಜನರಿಗೆ ನಾಟಕ ತೋರಿಸಲು ಕೋಟ್ಯಾಂತರ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಬೇಕಿತ್ತಾ? ಹೊರಗೆ ಎಲ್ ಇ ಡಿ ಪರದೆ ಹಾಕಿಸಲಾಗಿತ್ತು ಎನ್ನುವ ಸಬೂಬು ಹೇಳಲಾಗುತ್ತಿದೆ. ನಾಟಕವನ್ನು ಲೈವ್ ಆಗಿಯೇ ನೋಡಿ ಆನಂದಿಸಬೇಕೆ ಹೊರತು ಪರದೆಯ ಮೇಲೆ ಅಲ್ಲ. ಯಾಕೆಂದರೆ ನಾಟಕ ಜೀವಂತ ಕಲೆ.
ಯಾಕೆ ಹೀಗೆ?
ಯಾಕೆಂದರೆ ರವೀಂದ್ರ ಕಲಾಕ್ಷೇತ್ರ ಎಂಟು ದಿನಗಳ ಕಾಲ ದೊರಕಲಿಲ್ಲ. ನಡುವೆ ಸರಕಾರಿ ಜಯಂತಿಗಳಿಗೆ ಮೀಸಲಿರಿಸಲಾಗಿತ್ತು. ಆದ್ದರಿಂದ ಕಲಾಗ್ರಾಮವನ್ನು ಆಯ್ಕೆ ಮಾಡಲಾಯ್ತು ಎನ್ನುವುದು ಆಯೋಜಕರ ಸಮರ್ಥನೆ. ಹೇಗೂ ಕಲಾಗ್ರಾಮದ ರಂಗಮಂದಿರದಲ್ಲಿ ಸೌಂಡ್ ಹಾಗೂ ಲೈಟ್ಸ್ ವ್ಯವಸ್ಥೆ ಸರಿಯಾಗಿಲ್ಲ. ಎಲ್ಲವನ್ನೂ ಹೊರಗಿನಿಂದ ಬಾಡಿಗೆಗೆ ತರಿಸಲಾಗಿದೆ. ಹೀಗಿರುವಾಗ ಒಂದು ಸಾವಿರ ಪ್ರೇಕ್ಷಕರು ಕೂತು ನಾಟಕ ನೋಡುವ ಬಯಲು ರಂಗಮಂದಿರವನ್ನೇ ಕಲಾಗ್ರಾಮದಲ್ಲಿ ನಿರ್ಮಿಸಬಹುದಾಗಿತ್ತು. ಈಗಾಗಲೇ ಇಂತಹುದೊಂದು ಮಾದರಿಯನ್ನು ಸಿ.ಬಸವಲಿಂಗಯ್ಯನವರು ‘ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಹಾಕಿಕೊಟ್ಟಿದ್ದರು. ಹೇಗೂ ಕತ್ತಲಾದ ಮೇಲೆ ನಾಟಕ ನಡೆಯುವುದರಿಂದ ಮತ್ತು ಚಳಿಯೂ ಕಡಿಮೆಯಾಗಿದ್ದರಿಂದ ಹೊರಗೆ ಬಯಲಿನಲ್ಲಿ ವೇದಿಕೆ ನಿರ್ಮಿಸಿ ನಾಟಕ ಪ್ರದರ್ಶಿಸಿದ್ದರೆ ಇನ್ನೂ ಹೆಚ್ಚು ಪ್ರೇಕ್ಷಕರು ನಾಟಕಗಳನ್ನು ನೋಡಬಹುದಾಗಿತ್ತು. ಕೋಟ್ಯಾಂತರ ರೂಪಾಯಿಗಳನ್ನು ವ್ಯಯಸಿದ್ದಕ್ಕೂ ಒಂದಿಷ್ಟು ಸದ್ಗತಿ ಸಿಗಬಹುದಾಗಿತ್ತು. ಅದೆಷ್ಟೋ ರಂಗಾಸಕ್ತರು ನಾಟಕ ನೋಡಲಾಗದೆ ನಿರಾಸೆಯಿಂದ ವಾಪಸ್ ಹೋಗುವುದು ತಪ್ಪುತ್ತಿತ್ತು. ಪಾಸ್ ಹಾಗೂ ಪ್ರವೇಶಕ್ಕಾಗಿ ಪ್ರತಿದಿನ ನಡೆಯುವ ಹರಸಾಹಸವನ್ನು ತಡೆಯಬಹುದಾಗಿತ್ತು.
ಯಾರು ಏನೇ ಹೇಳಲಿ ಎಲ್ಲರ ಗಮನಕ್ಕೆ ಬರುವಂತೆ ಹಾಗೂ ಬರದಂತೆ ನಡೆಯುತ್ತಿದ್ದ ಏಕವ್ಯಕ್ತಿ ಪ್ರದರ್ಶನವಂತೂ ತುಂಬಾ ಕುತೂಹಲಕಾರಿಯಾಗಿತ್ತು. ಅದು ಕರ್ನಾಟಕ ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರಾಡುತ್ತಿದ್ದ ನಾಟಕವಲ್ಲದ ನಾಟಕದ ಅಘೋಷಿತ ಹೆಸರು ‘ಎಲ್ಲೆಲ್ಲೂ ನಾನೆ’. ಅಕಾಡೆಮಿಯ ಅಧ್ಯಕ್ಷತೆಗೂ ಒಂದು ಘನತೆ ಗೌರವ ಇರುತ್ತದೆ ಹಾಗೂ ಇರಬೇಕು. ಆದರೆ ನಾಗರಾಜಮೂರ್ತಿಯವರು ಅಕಾಡೆಮಿಯ ಅಧ್ಯಕ್ಷತೆಯ ಸ್ಥಾನಮಾನದ ಘನತೆಯನ್ನು ಈ ಮಟ್ಟಕ್ಕೆ ಇಳಿಸಬಾರದಿತ್ತು. ತಮ್ಮನ್ನು ತಾವು ಮೆರೆಸಿಕೊಳ್ಳಲು ನಾಟಕೋತ್ಸವವನ್ನು ಹೀಗೆ ವ್ಯಾಪಕವಾಗಿ ಬಳಸಿಕೊಳ್ಳಬಾರದಿತ್ತು. ಮೈಕ್ ಸಿಕ್ಕಾಗಲೆಲ್ಲಾ ತಮ್ಮ ವಾಚಾಳಿತನದ ಪ್ರದರ್ಶನ ಮಾಡಬಾರದಿತ್ತು. ವೇದಿಕೆಯ ಮೇಲೂ ನಾನೆ, ಭಾಷಣವೂ ನಂದೆ, ಅತಿಥಿಗಳ ಪರಿಚಯ ಮಾಡಲೂ ನಾನೇ ಎಂದು ಮೆರೆದ ನಾಗರಾಜಮೂರ್ತಿಗಳು ಪ್ರತಿದಿನ ವೇದಿಕೆಯ ಮೇಲೆ ನೋಡುಗರಿಗೆ ರೇಜಿಗೆಯಾಗುವಂತೆ ತಮ್ಮನ್ನು ತಾವು ಮೆರೆಸಿಕೊಂಡರು.
ಏಳು ಗಂಟೆಗೆ ಶುರುವಾಗುವ ನಾಟಕಕ್ಕೆ ಸಂಜೆ ಐದುಗಂಟೆಗೆ ಪಾಸ್ ವಿತರಿಸುವ ಹಕ್ಕುಗಳನ್ನು ಅಕಾಡೆಮಿಯ ಅಧ್ಯಕ್ಷರೇ ಕಾಯ್ದಿರಿಸಿಕೊಂಡಿದ್ದರು. ಅಕಾಡೆಮಿಯ ಸದಸ್ಯರುಗಳಿಗೂ ಪಾಸ್ ಕೊಡದೆ ಎಲ್ಲವನ್ನೂ ತಮ್ಮ ಜೇಬಲ್ಲೇ ಇಟ್ಟುಕೊಂಡು ಪಾಸ್ ಮೇಲೆ ತಮ್ಮ ಸಾರ್ವಭೌಮತ್ವವನ್ನು ಕೊನೆಯವರೆಗೂ ಬಿಟ್ಟುಕೊಡದೇ ಪಟ್ಟು ಹಿಡಿದು ಬಿಗಿ ಸಾಧಿಸಿದ ಅಪಕೀರ್ತಿಗೆ ಅಧ್ಯಕ್ಷರು ಭಾಜನರಾದರು. ಇನ್ನೇನು ಹೊರಗೆ ವೇದಿಕೆಯ ಕಾರ್ಯಕ್ರಮ ಮುಗಿಯುವುದನ್ನೇ ಕಾಯುತ್ತಿದ್ದ ಅಧ್ಯಕ್ಷರು ಕ್ಷಣಮಾತ್ರದಲ್ಲಿ ಓಡಿ ಹೋಗಿ ಅಕ್ರಮ ಮಾರ್ಗದಲ್ಲಿ ರಂಗಮಂದಿರ ಪ್ರವೇಶಿಸಿದವರನ್ನು ಮೊದಲು ಬೈದು ಹೊರಗೆ ಹಾಕಿದ ನಂತರವೇ ಪ್ರವೇಶದ್ವಾರಕ್ಕೆ ಬಂದು ತಾವೇ ಖುದ್ದಾಗಿ ಸರದಿ ಸಾಲು ಸರಿಪಡಿಸಿ, ಎಲ್ಲರ ಪಾಸ್ ಪರಿಶೀಲಿಸಿ ಒಳಗೆ ಬಿಡುತ್ತಿದ್ದುದು ಅಧ್ಯಕ್ಷರೊಬ್ಬರ ಅತಿರೇಕದ ವರ್ತನೆ ಎನ್ನಿಸುವಂತಿತ್ತು. ಅಧ್ಯಕ್ಷರ ಹುದ್ದೆಯನ್ನು ದ್ವಾರಪಾಲಕನ ಲೆವಲ್ಲಿಗೆ ಇಳಿಸಿದ ಅಪಕೀರ್ತೀಗೂ ಭಾಜನರಾದರು. ಯಾರೋ ಒಬ್ಬ ಕಾರ್ಯಕರ್ತ ಇಲ್ಲವೇ ಅಕಾಡೆಮಿಯ ಸದಸ್ಯ ಮಾಡಬಹುದಾದ ಈ ಪಾಸ್ ವಿತರಣೆ ಹಾಗೂ ಪ್ರವೇಶಾತಿ ಕೆಲಸದ ಜವಾಬ್ದಾರಿಯನ್ನು ಅಕಾಡೆಮಿಯ ಅಧ್ಯಕ್ಷರೇ ವಹಿಸಿಕೊಂಡಿದ್ದು ಅನಗತ್ಯ ಅನಪೇಕ್ಷಿತ ಅನನುಕರಣೀಯ ಅತಿರೇಕವಾಗಿತ್ತು.
ಈ ಪ್ರಕ್ರಿಯೆಯಲ್ಲಿ ಅಕಾಡೆಮಿಯ ಸದಸ್ಯರನ್ನು ದೂರ ಇಡಲಾಗಿತ್ತು. ಹಲವಾರು ಸದಸ್ಯರುಗಳು ಅಸಮಾಧಾನದಿಂದ ಹತಾಶರಾದರು. ತಮಗೆ ಬೇಕಾದವರಿಗೆ ಒಂದು ಪಾಸ್ ಕೊಡಿಸುವ ಯೋಗ್ಯತೆಯೂ ತಮಗಿಲ್ಲವಲ್ಲಾ ಎಂದು ಕೊರಗಿದರು. ನಾಟಕೋತ್ಸವದ ನಡುವೆಯೇ ನಡೆದ ನಾಟಕ ಅಕಾಡೆಮಿಯ ಸಮಿತಿಯ ಸಭೆಯಲ್ಲಿ ಸದಸ್ಯರ ಅಸಮಾಧಾನ ಸ್ಪೋಟಗೊಂಡಿತು. ಆಕ್ರೋಶಕ್ಕೆ ಮಣಿದ ಅಧ್ಯಕ್ಷರು ಪ್ರತಿಯೊಬ್ಬ ಸದಸ್ಯರಿಗೆ ಎರಡು ಪಾಸ್ ಕೊಡುತ್ತೇನೆ ಎಂದು ಹೇಳಿ ಸಿಟ್ಟು ಶಮನ ಮಾಡಲು ಪ್ರಯತ್ನಿಸಿದರಾದರೂ ಕೆಲವು ಸದಸ್ಯರು ಅದನ್ನೂ ನಿರಾಕರಿಸಿದರು. ಸಭೆಯಲ್ಲಿ ಎದ್ದು ನಿಂತು ಪ್ರಶ್ನಿಸಿದ ಮಹಿಳಾ ಸದಸ್ಯರಿಗೆ ಈ ಸರ್ವಾಧಿಕಾರಿ ಅಧ್ಯಕ್ಷ ಗೆಟೌಟ್ ಎಂದು ಗದರಿಸಿದ್ದು ಗದ್ದಲಕ್ಕೆ ಕಾರಣವಾಯ್ತು. ಮೊದಲಿನಿಂದಲೂ ಅಕಾಡೆಮಿಯಲ್ಲಿ ಇದೇ ರೀತಿ ನಡೆಯುತ್ತಾ ಬಂದಿದೆ. ಹಾಲಿ ಅಕಾಡೆಮಿಯ ಮೊದಲ ಸಭೆಯಲ್ಲಿ ಸದಸ್ಯರ ಜೊತೆ ಅಧ್ಯಕ್ಷರಾದವರು ಕೈಕೈ ಮಿಗಿಲಾಯಿಸುವ ಹಂತಕ್ಕೆ ಜಗಳ ಅತಿರೇಕಕ್ಕೆ ಹೋಗಿತ್ತು. ಪ್ರಶಸ್ತಿ ಆಯ್ಕೆ ಸಮಯದಲ್ಲೂ ಅಸಮಾಧಾನ ಭುಗಿಲೆದ್ದಿತ್ತು. ಒಂದಿಬ್ಬರು ಸದಸ್ಯರು ರಾಜೀನಾಮೆ ಕೊಟ್ಟು ಹೊರನಡೆದರು. ಕೆಲವು ರೆಬೆಲ್ ಸದಸ್ಯರು ಸಂಘರ್ಷಕ್ಕೂ ತಯಾರಾದರು. ಅಧ್ಯಕ್ಷರ ವಿರುದ್ಧ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರಂತೆ. ಆದರೆ ನಾಗರಾಜಮೂರ್ತಿ ಇದ್ಯಾವುದಕ್ಕೂ ಡೋಂಟ್ ಕೇರ್ ಎಂದರು. ಅವರ ಸ್ವಭಾವವೇ ಹಾಗೆ. ಸರ್ವಾಧಿಕಾರಿ ಮನೋಭಾವನೆ ಅವರ ನಡೆ ನುಡಿಯ ಭಾಗವಾಗಿದೆ. ಹೀಗಿರುವಾಗ ಅಕಾಡೆಮಿಯ ಸದಸ್ಯರೆಲ್ಲಾ ಡಮ್ಮಿ ಆದಂತಿದ್ದು ಅಸಹಾಯಕರಾಗಿದ್ದಾರೆ. ಅರ್ಧಕ್ಕಿಂತ ಹೆಚ್ಚು ಸದಸ್ಯರು ರಂಗಪರಿಷೆಯತ್ತ ತಲೆ ಕೂಡಾ ಹಾಕಲಿಲ್ಲ. ಸರ್ವಾಧಿಕಾರ ಅಂದ್ರೆ ಸುಮ್ಮನೇನಾ?
ಈ ನಾಟಕೋತ್ಸವದಾದ್ಯಂತ ತಮ್ಮ ಸರ್ವಾಧಿಕಾರಿ ನಡೆ ನುಡಿಯಿಂದ ಗಮನ ಸೆಳೆದ ನಾಗರಾಜಮೂರ್ತಿಗಳು ತಾವೊಬ್ಬರೇ ನಿಂತಲ್ಲಿ ನಿಲ್ಲದೇ, ಕುಂತಲ್ಲಿ ಕೂಡದೇ ಓಡಾಡಿ ಕೂಗಾಡಿ ನಾಟಕೋತ್ಸವವನ್ನು ಸಫಲಗೊಳಿಸಿದ್ದು ಅಚ್ಚರಿಯ ಸಂಗತಿ.
ದೆಹಲಿಯ ಎನ್ ಎಸ್ ಡಿ ಹಮ್ಮಿಕೊಂಡ ಭಾರತ ರಂಗ ಮಹೋತ್ಸವವೇ ಪ್ರಮುಖವಾಗಿದ್ದು ಅದಕ್ಕೆ ಪೂರಕವಾಗಿ ರಂಗಪರಿಷೆ ಹಮ್ಮಿಕೊಳ್ಳಲಾಗಿದೆ. ಕಲಾಗ್ರಾಮದಲ್ಲಿ ಸಾಂಸ್ಕೃತಿಕ ವಾತಾವರಣವನ್ನೇ ಸೃಷ್ಟಿಸಲಾಗಿದೆ. ಅನೇಕ ಅಕಾಡೆಮಿ, ಪ್ರಾಧಿಕಾರಗಳು ಪುಸ್ತಕ ಮಳಿಗೆಯನ್ನು ತೆರೆದಿವೆ. ಪರಿಷೆಯಲ್ಲಿ ಕವಿಗೋಷ್ಠಿ, ರಂಗಗೀತೆ, ಶ್ರೀಕೃಷ್ಣ ಪಾರಿಜಾತ, ನಾಟಕ ವಾಚನ, ವಚನ ಗಾಯನ, ತತ್ವಪದ ಹಾಡು, ನೃತ್ಯ, ಕಂಸಾಳೆ, ಕೋಲಾಟ, ಪುಲಿಯಾಟಂ, ವೀರಗಾಸೆ, ಪೂಜಾಕುಣಿತ, ಯಕ್ಷಗಾನ ಪ್ರಸಂಗ, ಜಾನಪದ ನೃತ್ಯ, ರಂಗದೃಶ್ಯಾವಳಿ, ವಿಚಾರ ಗೋಷ್ಠಿ, ಚಿತ್ರಕಲಾಕೃತಿಗಳ ಪ್ರದರ್ಶನ, ಹಿರಿಯ ರಂಗತಂಡಗಳಿಗೆ ಸನ್ಮಾನ, ರಂಗಸಾಧಕರಿಗೆ ಗೌರವ… ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಹಲವಾರು ಅಕಾಡೆಮಿಗಳು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗವನ್ನು ಪಡೆಯಲಾಗಿತ್ತು. ಒಟ್ಟಾರೆಯಾಗಿ ಕಲಾಗ್ರಾಮದಲ್ಲಿ ಎಂಟು ದಿನಗಳ ಕಾಲ ಸಾಂಸ್ಕೃತಿಕ ಪರಿಸರವನ್ನು ಸೃಷ್ಟಿಸಿ ನಿಜವಾದ ಅರ್ಥದಲ್ಲಿ ರಂಗಪರಿಷೆಯನ್ನು ನಡೆಸಲಾಯ್ತು.
ಹೋಗಲಿ “ಭಾರತ ರಂಗ ಮಹೋತ್ಸವ” ಎಂದರೆ ಅದ್ಭುತ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎಂಬ ಭ್ರಮೆಯನ್ನು ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ನಾಟಕಗಳು ಸುಳ್ಳು ಮಾಡಿದವು. ಅದ್ಯಾರು ಈ ನಾಟಕಗಳನ್ನು ಆಯ್ಕೆ ಮಾಡಿದರೋ ಏನೋ ಬಹುತೇಕ ನಾಟಕಗಳು ನೋಡುಗರನ್ನು ನಿರಾಸೆಗೊಳಿಸಿದವು. ಇದ್ದುದರಲ್ಲಿ ತನ್ನ ವಿಭಿನ್ನ ಪ್ರಯೋಗಶೀಲತೆ ಹಾಗೂ ವಿಕ್ಷಿಪ್ತ ಫ್ಯಾಸಿಸ್ಟ್ ಕ್ರೌರ್ಯವನ್ನು ತೋರುವ “ಎ ಫ್ರೆಂಡ್ಸ್ ಬಿಯಾಂಡ್ ದಿ ಫೆನ್ಸ್” ನಾಟಕವೇ ಇಡೀ ನಾಟಕೋತ್ಸವದಲ್ಲಿ ಅತ್ಯುತ್ತಮ ಎನ್ನಿಸುವಂತಿದ್ದು, ಇದು ಮಂಗಳೂರಿನ ಕಲಾಭಿ ಥಿಯೇಟರ್ ತಂಡವು ಶ್ರವಣ್ ಹೆಗ್ಗೋಡು ನಿರ್ದೇಶನದಲ್ಲಿ ಪ್ರದರ್ಶಿಸಿದ ಕನ್ನಡದ ನಾಟಕ ಎನ್ನುವುದೊಂದು ಹೆಮ್ಮೆ ಇದೆ. ಸುಮಾರು 50 ಲಕ್ಷ ಖರ್ಚು ಮಾಡಿ ರಷ್ಯಾದಿಂದ ಆಹ್ವಾನಿಸಿದ್ದ “ದಿ ಮ್ಯಾರೇಜ್ ಆಫ್ ಬಲ್ಜಿಮ್ನೋವ್” ನಾಟಕ ನೋಡುಗರನ್ನು ನಿರಾಸೆಗೊಳಿಸಿತು. ವರ್ಣರಂಜಿತವಾಗಿ ಪ್ರಸ್ತುತಗೊಂಡ ದೆಹಲಿ ಎನ್ ಎಸ್ ಡಿ ರೆಪರ್ಟರಿಯ “ಮಾಯ್ ರಿ ಮೇ ಕಾ ಸೆ ಕಹೂ” ನಾಟಕವು ಕೊನೆಗೆ ‘ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ತನ್ನ ಸ್ವಾತಂತ್ರ್ಯ ಸ್ವಾಭಿಮಾನವನ್ನು ಮರೆತು ಸಮಾಜದ ಕಟ್ಟಪ್ಪಣೆ ಪಾಲಿಸಲು ಸಿದ್ಧವಾಗಬೇಕು” ಎನ್ನುವ ಮಹಿಳಾ ವಿರೋಧಿ ಧೋರಣೆಯನ್ನೇ ತೋರುವ ಮೂಲಕ ಲಿಂಗಸಮಾನತೆ ಬಯಸುವವರಲ್ಲಿ ನಿರಾಸೆ ಮೂಡಿಸಿತು.
ಎನ್ ಎಸ್ ಡಿ ರೆಪರ್ಟರಿಯ ಮತ್ತೊಂದು ನಾಟಕ “ತಾಜ್ ಮಹಲ್ ಕಾ ಟೆಂಡರ್” ಅಂತೂ ಹಾಸ್ಯದ ಹೆಸರಲ್ಲಿ ಅನ್ಯ ಸಮುದಾಯದ ದೊರೆಯನ್ನು ಅಪಮಾನಿಸುವಂತೆ ಮೂಡಿ ಬಂದಿದೆ. ಅಧಿಕಾರಿಶಾಹಿಗಳ ಭ್ರಷ್ಟಾಚಾರ ಬಯಲು ಮಾಡುವ ನೆಪದಲ್ಲಿ ಜಗತ್ತೇ ಬೆರಗಾಗುವಂತೆ ಕಟ್ಟಲ್ಪಟ್ಟ ಪ್ರೇಮಸೌಧವನ್ನು, ಅದರ ನಿರ್ಮಾತೃ ಶಹಜಹಾನ್ ನನ್ನು ಹಾಗೂ ಮಮ್ತಾಜ್ ಳನ್ನು ಅತ್ಯಂತ ಕೆಟ್ಟದಾಗಿ ಲೇವಡಿ ಮಾಡುತ್ತಾ ಮತಾಂಧತೆಯನ್ನು ಮೆರೆದಿರುವುದು ಅಕ್ಷಮ್ಯ. ‘ರೋಮಿಯೋ ಜೂಲಿಯಟ್’ ಎನ್ನುವ ಶ್ರೀಲಂಕಾದ ನಾಟಕವಂತೂ ಆ ದೇಶ ಇನ್ನೂ ರಂಗ್ರಪ್ರಯೋಗ ಸಾಧ್ಯತೆಗಳ ಬಳಕೆಯಲ್ಲಿ ಎಷ್ಟೊಂದು ಹಿಂದೆ ಇದೆ ಎಂಬುದನ್ನು ಸಾಬೀತು ಪಡಿಸಿತು. ತೆಲುಗು ಭಾಷೆಯ “ಪಾಕುಡಾರಾಲು” ನಾಟಕವು ಮಹತ್ವಾಂಕಾಕ್ಷಿ ನಟಿಯೊಬ್ಬಳ ಸಾಧನೆ ಹಾಗೂ ದುರಂತ ಬದುಕನ್ನು ಅನಾವರಣಗೊಳಿಸಿತು. ಈ ನಾಟಕದ ಪ್ರದರ್ಶನದಾದ್ಯಂತ ರಂಗಶಿಸ್ತು ಇಲ್ಲವಾಗಿ, ವೃತ್ತಿಪರತೆಯ ಕೊರತೆಯಿಂದ ಇಡೀ ಪ್ರಯೋಗ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಯ್ತು.
ಇದನ್ನೂ ಓದಿ- http://ಕಣ್ಮನ ಸೆಳೆದ ಎನ್ ಎಸ್ ಡಿ ನಾಟಕ “ಮಾಯ್ ರಿ ಮೇ ಕಾ ಸೇ ಕಹೂ” https://kannadaplanet.com/eye-catching-nsd-drama/
ಮಹಾರಾಷ್ಟ್ರದ ಹಿಂದಿ ಭಾಷೆಯ “ಯಯಾತಿ” ನಾಟಕದ ಮೇಲೆ ಇರಿಸಿದ್ದ ಭರವಸೆಯೂ ಹುಸಿಯಾಯ್ತು. ಎರಡೂ ಮುಕ್ಕಾಲು ಗಂಟೆಯ ಈ ನಾಟಕವು ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸಿತು. ತನ್ನ ಆಕರ್ಷಣೀಯ ಸೆಟ್ ಪರಿಕರ ಹಾಗೂ ಬೆಳಕಿನ ವಿನ್ಯಾಸದಿಂದ ಗಮನ ಸೆಳೆದ ಈ ನಾಟಕವು ಪಾತ್ರಧಾರಿಗಳ ಆಯ್ಕೆ, ಪಾತ್ರಪೋಷಣೆ ಹಾಗೂ ಅಭಿನಯದಲ್ಲಿ ವಿಫಲವಾಯ್ತು. ನಾಟಕೋತ್ಸವದ ಕೊನೆಯ ನಾಟಕ ಬಿ.ಜಯಶ್ರೀಯವರ ನಿರ್ದೇಶನದ ” ಜಸ್ಮಾ ಒಡನ್” ಮೇಲೆ ಇರಿಸಿದ್ದ ನಿರೀಕ್ಷೆ ಹುಸಿಯಾಗಲಿಲ್ಲ. ಜಾನಪದ ಕಥೆಯಾಧರಿಸಿದ ಈ ಫ್ಯಾಂಟಸಿ ನಾಟಕವು ಮನರಂಜನಾತ್ಮಕ ದೃಷ್ಟಿಕೋನದಲ್ಲಿ ಯಶಸ್ವಿ ರಂಗಪ್ರಯೋಗವೆನ್ನಿಸಿತು. ಆದರೆ ತಾರ್ಕಿಕ ಹಾಗೂ ತಾತ್ವಿಕ ದೃಷ್ಟಿಕೋನದಲ್ಲಿ ನಿರಾಸೆಯನ್ನುಂಟು ಮಾಡಿತು. ಈ ನಾಟಕದಲ್ಲಿ ಅಳವಡಿಸಲಾದ ಕೆಳ ವರ್ಗದ ಸಮುದಾಯದ ಮೇಲೆ ವೈದಿಕಶಾಹಿ ಸಂಸ್ಕೃತಿಯ ಹೇರಿಕೆ, ಜಾತಿ ನಿಂದನೆ ಹಾಗೂ ಜೈ ಶ್ರೀರಾಂ ಘೋಷಣೆಗಳು ನಿರ್ದೇಶಕಿಯ ಬಲಪಂಥೀಯ ಸಂಘಿ ಧೋರಣೆಗೆ ಸಾಕ್ಷಿಯಾಗಿದ್ದವು.
ಅಂತಾರಾಷ್ಟ್ರೀಯ ನಾಟಕೋತ್ಸವ ಎಂದರೆ ಅತ್ಯಂತ ವಿಶಿಷ್ಟವಾದ, ಪ್ರಯೋಗಶೀಲತೆ ಇರುವ, ಅದ್ಭುತ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎಂದು ನಿರೀಕ್ಷಿಸಲಾಗುತ್ತದೆ. ಅದರಲ್ಲೂ ಎನ್ ಎಸ್ ಡಿ ನಾಟಕಗಳು ಅಂದರೆ ಅದೇನೋ ಕುತೂಹಲ ಇದ್ದೇ ಇರುತ್ತದೆ. ಆದರೆ ಈ ‘ಭಾರತ ರಂಗ ಮಹೋತ್ಸವದ’ಲ್ಲಿ ನಿರೀಕ್ಷೆಗಳೆಲ್ಲಾ ನಿರಾಸೆಯಾಗಿ ಬದಲಾಗಿದ್ದು ವಿಸ್ಮಯ. ಇದ್ದುದರಲ್ಲಿ ಎರಡೂ ಕನ್ನಡದ ನಾಟಕಗಳೇ ಉತ್ತಮವಾಗಿದ್ದು ಬೇರೆ ಭಾಷೆಯ ನಾಟಕಗಳು ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವಂತಹ ಅದ್ಭುತ ನಾಟಕಗಳೇನಾಗಿರಲಿಲ್ಲ. ಬೇರೆ ದೇಶದ ಎರಡೂ ನಾಟಕಗಳಂತೂ ಪ್ರೇಕ್ಷಕರ ಗಮನ ಸೆಳೆಯಲೇ ಇಲ್ಲ. ಹೀಗಾಗಿ ಜನರ ತೆರಿಗೆಯ ಹಣದಲ್ಲಿ ಆಯೋಜನೆಗೊಂಡ ಈ ಸರಕಾರಿ ಇಲಾಖೆ ಸಂಸ್ಥೆಗಳ ಪ್ರಾಯೋಜಕತ್ವದ ಅಂತಾರಾಷ್ಟ್ರೀಯ ನಾಟಕೋತ್ಸವದ ಬಹುತೇಕ ನಾಟಕಗಳು ನಿರಾಸೆಯನ್ನುಂಟು ಮಾಡಿದವು. ಬಹುಷಃ ರಂಗಾಸಕ್ತ ಪ್ರೇಕ್ಷಕರು ಅಂತಾರಾಷ್ಟ್ರೀಯ ನಾಟಕೋತ್ಸವವೆಂದು ಇಟ್ಟಿದ್ದ ನಿರೀಕ್ಷೆ ಹೆಚ್ಚಾಗಿರುವುದೂ ಈ ನಿರಾಸೆಗೆ ಕಾರಣವೂ ಇದ್ದಿರಬಹುದು.
ರಂಗಮಹೋತ್ಸವದ ನಾಟಕ ನೋಡಲಾಗದೇ ಪಾಸ್ ವಂಚಿತ ಪ್ರೇಕ್ಷಕರಿಗಾಗಿ “ಪರಸಂಗದ ಗೆಂಡೇ ತಿಮ್ಮ, ಬಂಕಾಪುರ…, ಜುಗಾರಿ ಕ್ರಾಸ್” ಎನ್ನುವ ಕನ್ನಡದ ಮೂರು ನಾಟಕಗಳನ್ನು ರಂಗಪರಿಷೆಯಲ್ಲಿ ದಿಢೀರ್ ಎಂದು ಪ್ರದರ್ಶಿಸಲಾಯ್ತು. ಕಲಾಗ್ರಾಮದ ಬಯಲು ವೇದಿಕೆಯಲ್ಲಿ ಆಯೋಜಿಸಿದ್ದ ಈ ಮೂರೂ ಲೋಕಲ್ ನಾಟಕಗಳೇ ಪ್ರೇಕ್ಷಕರ ಗಮನ ಸೆಳೆದವು.
ಇದನ್ನೂ ಓದಿ- ಅತಿರೇಕದ ಅಪಹಾಸ್ಯದಲಿ ಅಗೋಚರವಾದ ʼತಾಜಮಹಲ್ ಟೆಂಡರ್ʼ ನಾಟಕದಾಶಯ
ಭಾರತ ರಂಗ ಮಹೋತ್ಸವ ಎಂಬುದು ಮಹೋನ್ನತ ಯೋಜನೆ, ರಂಗಪರಿಷೆ ಎನ್ನುವುದೂ ಸಹ ಗಮನಾರ್ಹ ಸಾಂಸ್ಕೃತಿಕ ಜಾತ್ರೆ. ಇದಕ್ಕೆಲ್ಲಾ ಬಳಕೆಯಾಗಿದ್ದು ಸಾರ್ವಜನಿಕರ ತೆರಿಗೆ ಹಣ. ಹೀಗಾಗಿ ಮುಂದಿನ ವರ್ಷ ಮತ್ತೆ ಈ ಯೋಜನೆಯನ್ನು ಸರಕಾರಿ ಸಂಸ್ಥೆಗಳು ಆಯೋಜಿಸಿದಾಗ ಇನ್ನೂ ಎಚ್ಚರ ವಹಿಸಬೇಕಿದೆ. ನಾಟಕಗಳ ಆಯ್ಕೆಯಲ್ಲಿ ಕಟ್ಟೆಚ್ಚರ ಇರಬೇಕಾಗಿದೆ. ಕೋಟಿಗಳ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದರಿಂದ ಹೆಚ್ಚು ಜನರು ಕೂತು ನೋಡಬಹುದಾದ ರಂಗ ಮಂದಿರ ಇಲ್ಲವೇ ಬಯಲು ರಂಗಮಂದಿರವನ್ನು ನಾಟಕೋತ್ಸವಕ್ಕೆ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ರಂಗ ಜಾತ್ರೆಯನ್ನು ಸಂಘಟಿಸುವಲ್ಲಿ ಪರಿಶ್ರಮ ಪಟ್ಟ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಮೂರ್ತಿಗಳು ತಮ್ಮ ಸರ್ವಾಧಿಕಾರಿ ಧೋರಣೆ ಬದಿಗಿಟ್ಟು ಅಕಾಡೆಮಿಯ ಸದಸ್ಯರನ್ನು ಗೌರವದಿಂದ ನಡೆಸಿಕೊಂಡು ಒಟ್ಟಿಗೆ ಜೊತೆ ಸೇರಿಸಿಕೊಂಡು ಮುನ್ನಡೆಯಬೇಕಿದೆ.
ಇಷ್ಟಕ್ಕೂ ಸರಕಾರಿ ಅಕಾಡೆಮಿಗಳ ಕೆಲಸ ಅಕಾಡೆಮಿಕ್ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದೇ ಹೊರತು ಜಾತ್ರೆ ಉತ್ಸವಗಳನ್ನು ಮಾಡುವುದಲ್ಲ. ಇಂತಹ ಉತ್ಸವಗಳ ಉಸ್ತುವಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಘಟಿಸಲಿ. ಅದಕ್ಕೆ ಬೇಕಾದ ಸಲಹೆಯನ್ನು ಮಾತ್ರ ಅಕಾಡೆಮಿಗಳು ಕೊಡಲಿ. ಆದರೇನು ಮಾಡುವುದು ಅಕಾಡೆಮಿಕ್ ಕೆಲಸಗಳನ್ನು ಬದಿಗಿಟ್ಟು ಉತ್ಸವಗಳನ್ನು ಆಯೋಜಿಸುವುದರಲ್ಲಿ ನಾಟಕ ಅಕಾಡೆಮಿ ಬಹಳ ಉತ್ಸುಕವಾಗಿದೆ. ಮೊದಲೇ ನಾಟಕ ಅಕಾಡೆಮಿಗೆ ಸರಕಾರ ಕಡಿಮೆ ಅನುದಾನ ನೀಡುತ್ತಿದೆ. ಅದರಲ್ಲಿಯೇ ಇಪ್ಪತ್ತು ಲಕ್ಷದಷ್ಟು ಹಣವನ್ನು ಒಂದು ರಂಗಪರಿಷೆಗೆ ಖರ್ಚು ಮಾಡುವುದಾದರೆ ಅಗತ್ಯವಾದ ಅಕಾಡೆಮಿಕ್ ಕೆಲಸಗಳನ್ನು ಮಾಡುವುದು ಹೇಗೆ? ಬೆಂಗಳೂರನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ರಂಗಭೂಮಿ ಬೆಳವಣಿಗೆಗೆ ಪೂರಕವಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವುದು ಹೇಗೆ? ಕೇಳಬೇಕಾದ ಪ್ರಶ್ನೆಗಳು ಬೇಕಾದಷ್ಟಿವೆ ಆದರೆ ನಾಟಕ ಅಕಾಡೆಮಿಯ ಅಧ್ಯಕ್ಷರ ಕಿವಿಗಳೇ ಮಂದವಾಗಿವೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ವರ್ಣರಂಜಿತ ಜಾನಪದ ಫ್ಯಾಂಟಸಿ ನಾಟಕ ಜಸ್ಮಾ ಒಡನ್