ರಂಜಾನ್ ಗಂಜಿ

ಒಂದು ಕಥೆಯಲ್ಲದ ಕಥೆ

ಒಂದು ದಿನ ಸಂಜೆ ನಮ್ಮ ಮನೆಯ ಓನರ್ ಮಗ ತೋಯಿದ್ ಜೊತೆಯಲ್ಲಿ ವಾಕಿಂಗ್ ಹೊರಟಿದ್ದೆ. ಹೋಗುವ ದಾರಿಯಲ್ಲಿ ಮಸೀದಿಯ ಬಳಿ ಸಾಲುಗಟ್ಟಲೆ ಜನ ನೆರೆದಿದ್ದರು. ಅಲ್ಲಿ ನನಗೆ ಗೊತ್ತಿರುವ ರಾಮಕ್ಕ, ದ್ಯಾಮಕ್ಕ, ಕಿಟ್ಟಪ್ಪ ಮತ್ತು ಕ್ರಿಶ್ಚಿಯನ್ನರ  ಮೇರಿ ಅಜ್ಜಿ  ಕಾಣಿಸಿಕೊಂಡರು. ಮಸೀದಿ ಬಳಿ ಇವರೇನು ಮಾಡುತ್ತಿರುವರು ತೋಯಿದ್ ಎಂದೆ. ಸರ್ “ಅವರೆಲ್ಲರೂ   ಗಂಜಿಗಾಗಿ ನಿಂತಿರುವರು” ಎಂದ. ಗಂಜಿನಾ? ಯಾವ ಗಂಜಿ  ರಾಗಿ ಗಂಜಿನಾ! ಇಲ್ಲಾಂದ್ರೆ ಅಕ್ಕಿ ಗಂಜಿನಾ!. ಇಲ್ಲ ಸರ್ ನಮ್ಮ ರಂಜಾನ್ ತಿಂಗಳಲ್ಲಿ ಕೊಡುವಂತಹ ಗಂಜಿ ಯಾರು ಬೇಕಾದರೂ ಬಂದು ಹಾಕಿಕೊಳ್ಳಬಹುದು. ಎಂದ ತೋಯಿದ್ ಮಾತು ಕೇಳಿ ಇದ್ಯಾಕೋ ಕುತೂಹಲವೆನಿಸಿತು.

“ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಅಂದರೆ ಫೆಬ್ರವರಿಯಲ್ಲಿ  ಆರಂಭವಾಗಿ  ಮಾರ್ಚ್ ತಿಂಗಳವರೆಗೆ ಗರಿಷ್ಠ ಮೂವತ್ತು ದಿನಗಳ ಕಾಲ ನಮ್ಮ ಕೇರಿಯಲ್ಲಿರುವ ಮಸೀದಿಯಲ್ಲಿ ಪ್ರತಿದಿನ ರಂಜಾನ್ ಮುಗಿಯುವವರೆಗೂ ಸಂಜೆ ಐದು ಗಂಟೆಯಿಂದ ಆರು ಗಂಟೆಯ ತನಕ  ಗಂಜಿಯನ್ನು ಯಾರು ಹೋದರು  ಹಾಕುವರು. ಅದು ತುಂಬಾ ಬಿಸಿಬಿಸಿಯಾಗಿ ಹಾಕುವುದರಿಂದ ಸ್ಟೀಲ್ ಬಾಕ್ಸ್ ಇಲ್ಲವೇ ಕ್ಯಾರಿ ಬಾಕ್ಸ್ ಅನ್ನು ತೆಗೆದುಕೊಂಡು ಹೋಗಬೇಕು.” ಸರ್ ಎಂದ.

ವಾಕಿಂಗ್ ಮುಗಿದ ಬಳಿಕ ಮನೆಗೆ ಬಂದ ತೋಯಿದ್  ಕ್ಯಾರಿ ಬಾಕ್ಸ್ ಅನ್ನು ಕೈಯಲ್ಲಿ  ಹಿಡಿದು ಸರ್ “ನಾನು ಗಂಜಿ ತರಕ್ ಹೋಗುತ್ತಿದ್ದೇನೆ ನೀವು ಬರುವಿರಾ?” ಎಂದ. ಆ ಬಂದೆ ಎಂದೆ ನನಗೂ ರಂಜಾನ್ ಗಂಜಿ ರುಚಿ ನೋಡಲು ಆಸೆಯಾಗಿ ಹೊರಟೆ. ಗಂಜಿ ಹಾಕಿಸಿಕೊಳ್ಳುವವರು ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಸಾಲಾಗಿ ನಿಂತಿರುವರು. ನಾನು ಕೂಡ ತೋಯಿದ್ ಜೊತೆಗೆ ಒಂದು ಕ್ಯಾರಿ ಬಾಕ್ಸ್ ಅನ್ನು ತೆಗೆದುಕೊಂಡು ಸಾಲಿನಲ್ಲಿ ನಿಂತುಕೊಂಡು ಗಂಜಿಯನ್ನು ಹಾಕಿಸಿಕೊಂಡೆ. ಇಲ್ಲಿ ಸಾಲಾಗಿ ನಿಂತಿರುವ ವಿಧಾನವನ್ನು “ಗಂಜಿ ಸಾಲು” ಎಂದು ಕೂಡ ಅವರ ಸಂಪ್ರದಾಯದಲ್ಲಿ ಕರೆಯುತ್ತಾರಂತೆ.

ಇಲ್ಲಿ ಕೊಡುವಂತಹ ಗಂಜಿ ಯಾವ ರೀತಿ ಮಾಡಿರುತ್ತಾರೆಂದರೆ:  ಅಕ್ಕಿಯ ನುಚ್ಚು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಪುದಿನ, ಕೊತ್ತಂಬರಿ, ಕೊಬ್ಬರಿ, ಹೆಸರುಬೇಳೆ ಇನ್ನೂ ಹಲವು ಪದಾರ್ಥಗಳನ್ನು ಸೇರಿಸಿ ಗಟ್ಟಿಯಾದಂತಹ ಗಂಜಿಯನ್ನು ಮಾಡಿರುತ್ತಾರೆ. ಹಿಂದೂಗಳಲ್ಲಿ ಪಾಯಸ ಸ್ವರೂಪದಂತಿರುವ ಈ ಗಂಜಿಯು ವಿಶೇಷವಾಗಿ ಅನುಭವಕ್ಕೆ ಸಿಕ್ಕಿತ್ತು. ರಂಜಾನ್ ತಿಂಗಳಿನಲ್ಲಿ ಉಪವಾಸ ಇರುವಂತಹ ಮುಸಲ್ಮಾನರು ಸ್ವೀಕರಿಸುವರು. ಅದರ ಜೊತೆಗೆ ಅವರಲ್ಲದೇ ಯಾರೇ ಗಂಜಿಗಾಗಿ ಕ್ಯಾರಿ ಬಾಕ್ಸ್ ಅನ್ನು ತಂದರೂ ಅವರಿಗೆ ಹಾಕದೆ ಕಳಿಸುವುದಿಲ್ಲ. ಇದೊಂದು ತರ “ಗಂಜಿಧಾಮ” ಎಂದು ಹೆಸರುವಾಸಿಯಾಗಿದೆಂಯೆಂದು ತಿಳಿದುಕೊಂಡೆ.

 ಆ ಗಂಜಿ ರುಚಿಯನ್ನು ಕಂಡ ನನ್ನ ನಾಲಿಗೆಯು, ಪ್ರತಿನಿತ್ಯ ಐದು ಗಂಟೆಗೆ ಡ್ಯೂಟಿ ಮುಗಿಸಿಕೊಂಡು ಮನೆಗೆ ಬಂದು ಬ್ಯಾಗ್ ಇಟ್ಟು ಮೊದಲು ಹೋಗಿ ಗಂಜಿಯನ್ನು ಹಾಕಿಸಿಕೊಂಡು ಬಂದು ನಂತರ ನನ್ನ ಮುಂದಿನ ಕೆಲಸವನ್ನು ನೋಡುವ ಹಾಗೆ ಮಾಡಿತ್ತು. ಈ ಗಂಜಿಗೆ ಹೋಗಿ ಬರುವ ಸಂದರ್ಭದಲ್ಲಿ ನನಗೆ ತುಂಬಾ ಆಪ್ತರಂತೆ ಮಾತನಾಡುತ್ತಿರುವ ಅಬ್ದುಲ್ ಅಣ್ಣ ತುಂಬಾ ಪರಿಚಿತರಾದರು. ನಾನು ಹೋದ ತಕ್ಷಣ ನನಗೆ ಬೇಗನೆ ಗಂಜಿಯನ್ನು ಹಾಕಿಸಿ ಕೊಡುತ್ತಿದ್ದರು.

ಗಂಜಿ- ಸಾಂದರ್ಭಿಕ ಚಿತ್ರ

 ನಾನೊಬ್ಬ ಸರ್ಕಾರಿ ಸಹಾಯಕ ಪ್ರಾಧ್ಯಾಪಕನೆಂದು ಮನೆಯ ಓನರ್ ಫ್ಯಾಮಿಲಿಗೆ ಬಿಟ್ಟರೆ ಕೇರಿಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಏಕೆಂದರೆ 27 ವರ್ಷದ ಹುಡುಗನಾಗಿರುವ ನಾನು ನನ್ನ ಮುಖದ ಮತ್ತು ಗಡ್ಡದ ಸ್ವರೂಪ ಮುಸ್ಲಿಂ ಹುಡುಗರ ತರನೆ ಮತ್ತು ಬಹುತೇಕರು ಮುಸ್ಲಿಂ ಹುಡುಗನೇ ಎಂದು ಭಾವಿಸುತ್ತಿದ್ದರು. ನನ್ನ ವಸ್ತ್ರ ವಿನ್ಯಾಸ  ಸರಳವಾಗಿರುವುದರಿಂದ ಯಾರೋ ಈ ಬೇತಮಂಗಲದಲ್ಲಿ ಸಣ್ಣ ಪುಟ್ಟ ಕೆಲಸಕ್ಕೆ ಬಂದಿರುವರೆಂದು ತಿಳಿದುಕೊಂಡಿದ್ದರು. 

 ನಾನು ಕನ್ನಡ ಸಹಾಯಕ ಪ್ರಾಧ್ಯಾಪಕನಾಗಿ ಆಯ್ಕೆಯಾಗಿ ಸ್ಥಳ ನಿಯುಕ್ತಿಯು 2024ರ ನವಂಬರ್ ತಿಂಗಳಲ್ಲಿ ಬಂಗಾರು ತಿರುಪತಿಗೆ ಆಯ್ತು. ಇದು ಕೋಲಾರ ಜಿಲ್ಲೆಗೆ ಸೇರಿರುವುದರಿಂದ ಇದರ ಹೆಸರು ಬಂಗಾರು ತಿರುಪತಿಕ್ಕಿಂತ ಹೆಚ್ಚಾಗಿ ಗುಟ್ಟಹಳ್ಳಿ ಎಂದು ಕರೆಯುವುದುಂಟು. ನನಗೆ ಕೆಲಸಕ್ಕೆ ಹತ್ತಿರವಾಗುವಂತೆ ಗುಟ್ಟಹಳ್ಳಿಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಬೇತಮಂಗಲದಲ್ಲಿ ಟು ಬಿಎಚ್ಕೆ  ಮನೆಯನ್ನು ಎರಡು ವರ್ಷಕ್ಕೆ ಖರೀದಿಸಿದೆ. ನಾನು ಮನೆ ಮಾಡಿರುವುದು ಮುಸ್ಲಿಂ ಕೇರಿಯಲ್ಲಿ, ಮಸೀದಿ ತುಂಬಾ ಹತ್ತಿರವಾಗಿರುವ ಸ್ಥಳವದು. ಮತ್ತು ನಮ್ಮ ಮನೆಯ ಓನರ್ ಕೂಡ ಮುಸ್ಲಿಮರು.    

ಅಪ್ಪನು ಆಗಾಗ ಊರಿಂದ ಬರುವುದು ಬಿಟ್ಟರೆ ನಾನೊಬ್ಬನೇ ಮನೆಯಲ್ಲಿ ಇರಬೇಕಾಗಿತ್ತು. ಇಡೀ ಮನೆಯನ್ನು ಒಬ್ಬನೇ ಗಂಡು ನಿಭಾಯಿಸುವುದು ಕಷ್ಟವಾಯಿತು. ಅದರ ಮಧ್ಯೆ ಬೆಳಗ್ಗೆ ಐದು ಗಂಟೆಗೆ ಎದ್ದು ಸಣ್ಣ ಪುಟ್ಟ ದೈಹಿಕ ಚಟುವಟಿಕೆಗಳನ್ನು ಮುಗಿಸಿ ಅಡಿಗೆ ಕೋಣೆಗೆ ಬಂದು ಅಡಿಗೆ ಮಾಡಲು ಆರಂಭ ಮಾಡಿದರೆ 8:30ಕ್ಕೆ ಮುಕ್ತಾಯವಾಗುತ್ತಿತ್ತು. ಅಂದರೆ  ಬೆಳಗಿನ ಉಪಹಾರ ಸಿರಿ ಧಾನ್ಯಗಳ ಹಿಟ್ಟಿನಿಂದ ಮಾಡಿರುವ  ಗಂಜಿ ಮಾತ್ರ, ಮಧ್ಯಾಹ್ನಕ್ಕೆ ಮತ್ತು ರಾತ್ರಿಗೆ ಸೇರಿ ಒಮ್ಮೆಗೆ ವಿಥೌಟ್ ಆಯಿಲ್ ಮತ್ತು ವಿಥೌಟ್ ಮಸಾಲೆ ಇಲ್ಲದೆ ತರಕಾರಿ ಅನ್ನವನ್ನು ಮಾಡಿಕೊಳ್ಳುತ್ತಿದ್ದೆ. ಒಮ್ಮೊಮ್ಮೆ ಚಪಾತಿಯನ್ನು ಮಾಡುತ್ತಿದ್ದೆ. ಇದು ನನಗೆ ಪ್ರತಿನಿತ್ಯವು ಕರ್ತವ್ಯದ ಜೊತೆಗಿನ ಕಾಯಕವಾಗಿತ್ತು.

ಅದೇನೋ ಮನೆಯಲ್ಲಿ ಒಬ್ಬೊಬ್ಬರಿಗೆ ಅಡುಗೆ ಮಾಡಿಕೊಳ್ಳಬೇಕೆಂದರೆ ಅದೊಂದು ತರ ದೊಡ್ಡ ಹಿಂಸೆ ಎನ್ನಬಹುದು. ಅದರಲ್ಲಿ ಗಂಡಸರಿಗಾದರೆ ಇನ್ನಷ್ಟು ಹಿಂಸೆ. ಮಾಡಿದ ಅಡಿಗೆಯ ಪಾತ್ರೆಗಳನ್ನು ಸ್ವಚ್ಛ ಮಾಡಬೇಕಲ್ಲ ಅದಕ್ಕೆ ನನಗೂ ಕೂಡ ಇದೇ  ತರ ಅನಿಸುತ್ತಿತ್ತು. ಒಬ್ಬನೇ ತುಂಬಾ ರುಚಿರುಚಿಯಾಗಿ ಮತ್ತು ವಿಧ ವಿಧವಾಗಿ ಅಡಗೆಯನ್ನು ಮಾಡಿಕೊಳ್ಳಬಹುದೆಂದು ಅನಿಸಿದರೂ ಆ ತರ ಮಾಡೋದಕ್ಕೆ ಸ್ವಲ್ಪ ಸೋಂಬೇರಿ ಆಗುತ್ತಿದ್ದೆ. 

ದೇಹಕ್ಕೆ ಶಾಂತವಾಗಿ ಇರುವಂತಹ ಈ ಗಂಜಿಯ ಮಹತ್ವವನ್ನು ಅರಿತ ನಾನು ಪ್ರತಿನಿತ್ಯ ಅದಕ್ಕೆ ದಾಸನಾದೆ ಅಂದರೆ ಒಂದು ಹೊತ್ತಿನ ಊಟ ಮಾಡುವುದು ತಪ್ಪುತ್ತದೆ ಎಂದು.

ಒಂದು ದಿನ ಗಂಜಿಯನ್ನು ಹಾಕಿಸಿಕೊಂಡು ಹೋಗುವಾಗ ಕಿಟ್ಟಪ್ಪನನ್ನು ನೋಡಿ “ ಏನ್ ಕಿಟ್ಟಪ್ಪ ಆರಾಮವಾ ಎಂದು ಕೇಳಿದೆ”

 “ಏನ್ ಆರಾಮೋ ಕಣಪ್ಪಿ” ಎಂದ.

ಯಾಕೆ?  ಕಿಟ್ಟಪ್ಪ ಏನಾಯ್ತು! ಒಳ್ಳೆ ಮನೆ ಇದೆ. ಮಗ ಚೆನ್ನಾಗಿ ಸಂಪಾದನೆ ಮಾಡುತ್ತಾನೆ. ಇನ್ನೇನ್ ನಿನಗೆ ಚಿಂತೆ ಎಂದೆ.

ಅಯ್ಯೋ!  ಏನ್ ಮಕ್ಕಳು ಬಿಡಪ್ಪ.

“ಮಕ್ಕಳು ಬೆಳೆಯೋ ತನಕ ಮಾತ್ರ ಅವರಿಗೆ ತಂದೆ ತಾಯಿ ಬೇಕಾಗ್ತರೆ, ಮುದುಕ್ರಾದ್ಮೇಲೆ ನಮ್ಮಿಂದ ಅವರಿಗೆ ಉಪಯೋಗವಿಲ್ಲವಲ್ಲ” ಎಂದು ನೋವು ಪಟ್ಟ.

ಯಾಕ್ ಕಿಟ್ಟಪ್ಪ? ಹೀಗೆಲ್ಲಾ ಮಾತಾಡ್ತಿದ್ದೀಯಾ ಇವತ್ತು.

ಅಯ್ಯೋ ಒಬ್ಬನೇ ಮಗ ಅಂತ ಮುದ್ದಾಗಿ ಸಾಕಿ ಒಳ್ಳೆ ಮನೆ ಕಟ್ಸಿದೆ. ಈಗ ನಾನು ಭಾರ ಆಗ್ಬಿಟ್ಟಿದೀನಿ.  ಜಮೀನು ವಿಚಾರವಾಗಿ ಮಾತನಾಡುತ್ತಾ ನನ್ನನ್ನೇ  “ಕುರಿ ದೊಡ್ಡಿಯಲ್ಲಿ ಮಲಗು ಅಂತಾನೇ”. ನನಗೇನು ಷರತ್ತು  ಇಲ್ಲವೇ.

“ ಹೇಗೋ ಆ ದೇವರು ಕೈ ಕಾಲು ಗಟ್ಟಿಯಾಗಿ ಇಟ್ಟಿದ್ದಾನೆ. ಈಗ ಮನೆಗೂ ಹೋಗ್ತಿಲ್ಲ ಇರುವ ಕುರಿಗಳನ್ನು ಮೇಯಿಸ್ಕೊಂಡು ಇದೀನಿ”  ಅವನು ಚೆನ್ನಾಗಿರ್ಲಿ ಬಿಡಪ್ಪ ಎಂದ. ಈ ಅಜ್ಜನಲ್ಲಿ ನಮ್ಮ ತಾತನನ್ನು ಕಂಡು “ಬೇಜಾರು ಮಾಡಿಕೊಳ್ಳಬೇಡ ಕಿಟ್ಟಪ್ಪ ಎಲ್ಲಾ ಒಳ್ಳೆಯದಾಗುತ್ತೆ ಧೈರ್ಯವಾಗಿರು” ಎಂದು ಹೇಳಿ ನಾನು ಮನೆ ತಲುಪಿದೆ.

ಇಲ್ಲಿ ನಾನು ಕಂಡಂತಹ ಗಂಜಿಯ ವಿಶೇಷತೆ:  ಮಕ್ಕಳಿದ್ದರೂ ಮನೆಯಿಂದ ಹೊರ ಹಾಕಲ್ಪಟ್ಟ ಅನಾಥ ಮುದುಕ, ಮುದುಕಿಯರ ಪಾಲಿನ ಎರಡು ಹೊತ್ತಿನ ಹೊಟ್ಟೆಗೆ ಉಣ್ಣುವಷ್ಟು ಊಟದಂತೆ. ಎಷ್ಟೋ ಜನ ಮಕ್ಕಳು ದೊಡ್ಡ ಶ್ರೀಮಂತರಾಗಬೇಕೆಂದು ಸಿಟಿ ಸೇರಿ ಹಳ್ಳಿಯಲ್ಲಿ ಅನಾಥರನ್ನಾಗಿಸಿರುವ ಅಮ್ಮ ಅಪ್ಪರಿಗೆ, ಇನ್ನು  ತೀರ ಬಡವರು, ದೀನ ದುರ್ಬಲರಿಗೆ ಕೂಲಿಕಾರರಿಗೆ, ಸಣ್ಣ ವ್ಯಾಪಾರಿಗಳಿಗೆ, ಬೀದಿ ಭಿಕ್ಷುಕರುಗಳ ಪಾಲಿಗಂತೂ ಸಾಕ್ಷಾತ್ ಅಮೃತವೇ ಎಂಬಂತೆ ಸ್ವೀಕರಿಸುವರು.

ಒಂದಿನ ಸಂಜೆ ಗಂಜಿಯನ್ನು ಹಾಕಿಸಿಕೊಳ್ಳಲು ಹೋಗುತ್ತಿರುವಾಗ ಮೇರಿ ಅಜ್ಜಿ ತುಂಬಾ ಆಯಾಸದಿಂದ ಮಸೀದಿಯ ಬಾಗಿಲಲ್ಲಿ ಕುಳಿತಿದ್ದಳು. ನಾನು ಆಕೆಯನ್ನು ಕಂಡು ಮೇರಿ ಅಜ್ಜಿ ನಾನು ನಿಮಗೆ ಗಂಜಿ ಹಾಕಿಸಿಕೊಂಡು ಬರಲೆ ಎಂದೆ. “ಅಷ್ಟು ಮಾಡಿ ಉಪಕಾರ ಕಟ್ಕೊಪ್ಪ” ಎಂದಳು.

ನಾನು ಮೇರಿ ಅಜ್ಜಿಗೂ ಮತ್ತು ನನಗೂ ಸೇರಿ ಗಂಜಿಯನ್ನು ಹಾಕಿಸಿಕೊಂಡು ಬಂದೆ. ಯಾಕೆ ಅಜ್ಜಿ ಇವತ್ತು ತುಂಬಾ ಆಯಾಸದಿಂದಿದ್ದೀರಾ ಎಂದು ಕೇಳಿದೆ. ಏನು ಇಲ್ಲಪ್ಪ ಟ್ಯಾಬ್ಲೆಟ್ ಖಾಲಿಯಾಗಿದ್ದಾವೆ. ತಂದು ಕೊಡುವವರು ಯಾರು ಇಲ್ಲ ನನ್ನ ಮಗ ಬೇರೆ ಚೆನ್ನೈಯಲ್ಲಿದ್ದಾನೆ. ಈ ಹಾಳಾದ ಆಯಾಸ ಜಾಸ್ತಿ ಆಗ್ತಾನೆ ಇದೆ ಎಂದಳು.

 ನಿಮ್ಮ ಮನೆ ಎಲ್ಲಿರೋದು ಮೇರಿ ಅಜ್ಜಿ “ ಸಂತೆ ಗೇಟ್ ಹತ್ರಪ್ಪ” ಎಂದಳು.

ಸರಿ ಬನ್ನಿ ನಾನು ಅದೇ ಕಡೆ ಹೋಗುತ್ತಿದ್ದೇನೆ ಎಂದು ಅವರ ಕೈಯನ್ನು ಹಿಡಿದುಕೊಂಡು ದಾರಿ ಮಧ್ಯದಲ್ಲಿ ಟ್ಯಾಬ್ಲೆಟ್ ಗಳನ್ನು ಕೊಡಿಸಿ ಬಂದು ಮನೆ ತಲುಪಿಸಿದೆ. ಇವತ್ತು ನಿನ್ನಿಂದ  ತುಂಬಾ ಉಪಕಾರ ಆಯ್ತಪ್ಪ. “ಥೇಟ್ ನನ್ನ ಮಗ ಇದ್ದಂಗೆ ಇದಿಯಪ್ಪ”  ಎಂದಳು. ನಾನು ಮುಗುಳು ನಕ್ಕು ಮನೆಗೆ ಹಿಂದಿರುಗಿದೆ.

ಇಲ್ಲಿನ ಗಂಜಿಯ ಸಂಕೇತ “ಸರ್ವ ಜನಾಂಗದ ಶಾಂತಿಯ ತೋಟದಂತೆ”. ಏಕೆಂದರೆ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಕೂಡ ಸ್ವೀಕರಿಸಿ ಸೇವಿಸುವುದರಿಂದ ಈಗಿನ ಜಗತ್ತಿನಲ್ಲಿ ಒಂದು ದೇಶ ಕಂಡರೆ ಮತ್ತೊಂದು ದೇಶ ಕಿಡಿಕಾರುತ್ತಿರುವ, ಸಮಾಜದಲ್ಲಿ ಒಂದು ಧರ್ಮ ಕಂಡರೆ ಇನ್ನೊಂದು ಧರ್ಮಕ್ಕೆ ಸಹಿಸಲಾಗದಿರುವ ಕೋಮು ಸಂಘರ್ಷವಿದ್ದರೂ  ರಂಜಾನ್ ಎನ್ನುವ ಹಬ್ಬದ ಮೂಲಕ ಗಂಜಿ ಎನ್ನುವಂತ ಪ್ರಸಾದದಿಂದ ಹಲವಾರು ಜನರ ಹೊಟ್ಟೆ ತಣಿಸಿ ಮನಸ್ಸು ಗೆದ್ದಿರುವುದೇ  ಒಂದು ರೀತಿಯ ವೈಶಿಷ್ಟ್ಯತೆ ಎನ್ನಬಹುದು.

ಒಂದು ದಿನ ನಾನು ತುಂಬಾ ತಡವಾಗಿ ಗಂಜಿಯನ್ನು ಹಾಕಿಸಿಕೊಳ್ಳಲು ಹೋಗಿದ್ದೆ. ಆದರೆ ಪಾತ್ರೆಯಲ್ಲಿ ಗಂಜಿಯು ಖಾಲಿಯಾಗಿತ್ತು. ಇನ್ನೇನು ಮರಳಿ ಬೇಜಾರಿನಿಂದ ಬರಬೇಕೆಂದು ಬಾಗಿಲು ದಾಟುತ್ತಿದ್ದಂತೆ ಅಬ್ದುಲ್ ಅಣ್ಣ  ಕೂಗಿದ. ಕೂಗು ಕೇಳಿ ಅಣ್ಣ ಅಂದೆ, ಯಾಕೆ ಇವತ್ತು ತುಂಬಾ ತಡವಾಯಿತು ಎಂದರು. ನಾನು ಸ್ವಲ್ಪ ಕೆಲಸವಿತ್ತಣ್ಣೋ ಎಂದು ಹೇಳಿದೆ ಅವರಿಗೆ ತೆಗೆದಿಟ್ಟಿದ್ದ  ಗಂಜಿಯಲ್ಲಿ ನನಗೆ ಸ್ವಲ್ಪ ಹಾಕಿಕೊಟ್ಟರು.

ಏನಣ್ಣ ಇವತ್ತು ಬೇಗ ಗಂಜಿ ಖಾಲಿ ಮಾಡಿ ಮನೆಗೆ ಹೋಗುತ್ತಿದ್ದೀರಾ ಎಂದು ಕೇಳಿದೆ ಇಲ್ಲಪ್ಪ ನನ್ನ ಇಬ್ಬರು ಮಕ್ಕಳು ಶಾಲೆಯನ್ನು ಮುಗಿಸಿಕೊಂಡು ಮನೆಗೆ ಬಂದಿರುತ್ತಾರೆ. ಅವರಿಗೆ ಅಲ್ಲಿ ತಾಯಿ ಇಲ್ಲ. ನಾನು ಗಂಜಿ ತರುತ್ತೇನೆ ಎಂದು ಕಾಯುತ್ತಿರುತ್ತಾರೆ. ಅದಕ್ಕೆ ಬೇಗ ಹೋಗಬೇಕು ಎಂದರು.

“ಯಾಕಣ್ಣ!  ಅವರ ತಾಯಿ? ಎಂದೆ.

“ ಇಲ್ಲಪ್ಪ”.

“ಅವಳು ಎರಡು ವರ್ಷದ ಹಿಂದೆ ನನ್ನನ್ನು ಮತ್ತು ನನ್ನ ಮಕ್ಕಳನ್ನು ಬಿಟ್ಟು ಹೋದಳು”.

“ಅಂದ್ರೆ ಅಣ್ಣ”?

“ಸತ್ತೋದ್ಲಪ್ಪ ಎಂದರು. ಹೋ…

 ಮಕ್ಕಳು ಏನು ಓದುತ್ತಿರುವರು ಅಣ್ಣೋ,  ಗಂಡು ಹುಡುಗ ಈಗ ಒಂಬತ್ತನೇ ಮತ್ತು  ಮಗಳು ಏಳನೇ ತರಗತಿಯಲ್ಲಿ ಓದುತ್ತಿರುವರು ಎಂದರು.

 “ನೀವು ಏನು? ಕೆಲಸ ಮಾಡುತ್ತೀರಿ ಅಣ್ಣ”.

“ಸಂಜೆ ಹೊತ್ತು ಗಂಜಿ ಮಾಡಿ ಬರುವವರಿಗೆಲ್ಲ ಹಾಕುವೆ. ಬೆಳಗ್ಗಿಂದ ನಾಲ್ಕು ಗಂಟೆಯವರೆಗೆ ಬೇರೆ ಯಾವುದಾದರೂ ಕೆಲಸ ಸಿಕ್ಕಿದರೆ ಮಾಡುವುದು ಇಲ್ಲವೇ ಮನೆಯಲ್ಲಿಯೇ ಇರುವುದೆಂದು ಹೇಳಿದ ಅಬ್ದುಲ್ ಅಣ್ಣನವರ ಕಥೆ ಕೇಳಿ ಮನಸ್ಸಿಗೆ ಏನೋ ಒಂಥರಾ ನೋವಾಗಿ “ನಾನು ಕೂಡ ತಾಯಿ ಇಲ್ಲದ ತಬ್ಬಲಿಯಲ್ಲವೇ” ಎಂದು ನನ್ನ ಮನದಲ್ಲಿ ತಾಯಿ ನೆನಪುಗಳು ಮರಕಳಿಸಿದವು. ಮಕ್ಕಳನ್ನು ಚೆನ್ನಾಗಿ ಓದಿಸಣ್ಣ ಎಂದು ಹೇಳಿದೆ. ಎಲ್ಲಾ ಈ “ಅಲ್ಲಾ”  ದಯದಿಂದ ಮಕ್ಕಳನ್ನು ಓದಿಸುತ್ತಿರುವೆ. ಎಂದು ಮಸೀದಿಗೆ ಕೈಮುಗಿದರು.

ನಾಳಿಗೆ ಈ ರಂಜಾನ್ ಗಂಜಿ ಕಾಯಕ ಮುಗಿಯುತ್ತೆ ಎನ್ನುವ ಅವರ ಮಾತಲ್ಲಿ ಬೇಜಾರು ಮತ್ತು ಮನದಲ್ಲಿ ನೋವು ಕಾಣಿಸಿಕೊಂಡಂತೆ,

ಪಕ್ಕದ ಕೇರಿಯಿಂದ ಪ್ರವೇಶಿಸಿದ ಆಟೋದಿಂದ ಹಾರಿ ಬಂತು ಮೈಕ್ ಸೌಂಡ್  “ಕರಗದ ಪ್ರಯುಕ್ತ ನಾಳೆಯಿಂದ ಐದು ದಿನಗಳ ಕಾಲ ದ್ರೌಪದಿಯಮ್ಮನ ಗುಡಿಯ ಬಳಿ ಮೂರೊತ್ತು  ಊಟವಿರುತ್ತದೆ”.

“ಹೇ ಅಲ್ಲಾ” ನಮ್ಮ ಬಡವರ ನೋವು ನಿನಗೆ ಗೊತ್ತಿದೆ ಯಾವುದೋ ಒಂದು ರೂಪದಲ್ಲಿ ನಮ್ಮನ್ನು  ಕಾಯುವೆ.” ಎನ್ನುವಷ್ಟರಲ್ಲಿ ನನ್ನ ಫೋನ್ ಗೆ ಕರೆ ಬಂತು “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ, ಮತದಲ್ಲಿ ಮೇಲ್ಯಾವುದೋ?”.

ಶ್ರೀನಿವಾಸ. ಎಸ್

ಕನ್ನಡ ಸಹಾಯಕ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಂಗಾರು ತಿರುಪತಿ,

ಕೋಲಾರ -563116.

ಮೊಬೈಲ್ : 9964740656

ಇದನ್ನೂ ಓದಿ- http://ಧರ್ಮಗಳ ಪರಿಧಿಯಾಚೆ ರಂಜಾನ್…ಕುರಾನ್ https://kannadaplanet.com/ramadan-beyond-religions-quran/

More articles

Latest article

Most read