ಮಣಿಪುರ ಹೊತ್ತಿ ಉರಿಯುತ್ತಿದೆ. ಹೆಣ್ಣಿನ ಬೆತ್ತಲೆ ಮೆರವಣಿಗೆ ಮುಂದುವರಿದೇ ಇದೆ. ಅಲ್ಲಿ ದ್ರೌಪದಿಯರು ನಿತ್ಯ ವಸ್ತ್ರಾಪಹರಣಗೊಳ್ಳುತ್ತಲೇ ಇದ್ದಾರೆ. ಅವರ ಅಳಲು ಕೇಳುವವರಿಲ್ಲ. ರಾಮ ಬರಿಯ ರಾಮನಲ್ಲ. ಆತ ಸಿಯಾರಾಮ, ಸೀತಾರಾಮ. ಆದರೆ ರಾಮನ ಜತೆಗಿನ ಸೀತೆಗೆ ಈಗ ಹೊಸ ಮಂದಿರದಲ್ಲಿ ಜಾಗವಿಲ್ಲ. ಆಕೆ ನಿಲ್ಲಬೇಕು ಹೊರಗೆ. ಭಕ್ತರು ಸೀತೆಯನ್ನು ಮರೆತೇ ಬಿಟ್ಟಿದ್ದಾರೆ. ಅದು ತ್ರೇತಾ ಯುಗವಿರಲೀ, ದ್ವಾಪರವೇ ಇರಲೀ, ಮಣಿಪುರವೇ ಇರಲೀ, ಅಯೋಧ್ಯೆಯೇ ಇರಲೀ, ಚಿತ್ರಾಂಗದೆಯ ಇರಲೀ, ಸೀತೆಯೇ ಇರಲೀ, ಹೆಣ್ಣಿನ ನೋವಿನ ಕತೆಗೆ ಕಾಲದೇಶಗಳ ಗಡಿಯಿಲ್ಲ. ಈ ಕಾಲಾತೀತ ಕಟುಸತ್ಯವನ್ನು ಶಕ್ತಿಯುತವಾಗಿ ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಕುಮಾರ್ ಎಸ್.
ಅಲ್ಲವೇ ಸೀತಕ್ಕ
ಇದೇನೇ ರಾಮಾಯಣ
ಥೋ, ಬಿಡೆ…
ಅಯೋಧ್ಯೆಗೆ ಇರುವ ಭಾಗ್ಯ ಮಣಿಪುರಕ್ಕಿಲ್ಲವಲ್ಲೆ..!
ನಾನೂ ಧೂಳಿನಲಿ ಹುಟ್ಟಿದವಳು
ನೀನು ಮಣ್ಣಿಂದ ಎದ್ದುಬಂದವಳು
ಇಬ್ಬರಿಗೂ ನೆಲದ ನಂಟು
ಬಿಡಿಸದ ಗಂಟು
ನಿನ್ನದೂ ನನ್ನದೂ ಒಂದೇ ರೀತಿಯ ವನವಾಸ
ನನ್ನವನು ನನ್ನನ್ನು ಬಿಟ್ಟು ಹೋದ
ನಿನ್ನವನು, ನಿನ್ನನ್ನು ಕಾಡಲ್ಲಿ ಬಿಟ್ಟು ಬಂದ
ಎಂತಹ ಕತೆಯೇ ಅಕ್ಕ!..
ಈಗಲೂ ಅದೇ ಕತೆ..
ಅಯೋಧ್ಯೆಯಲ್ಲಿ ರಾಮ ಮೆರೆಯುತ್ತಿದ್ದಾನೆ..
ನೀನೆಲ್ಲೆ ಸುದ್ದಿಯೇ ಇಲ್ಲ!
ನಾನಂತೂ ಬರಿ ಸುದ್ದಿಯಲ್ಲೇ..
ಹೆಣವಾಗಿ, ಗಾಯವಾಗಿ, ಅತ್ಯಾಚಾರಕ್ಕೊಳಗಾಗಿ,
ಸುಟ್ಟು ಕರಕಲಾಗಿ..
ಥೋ ಹೋಗೆ..
ನನ್ನವನಂತು ಐವರಲ್ಲಿ ಒಬ್ಬನು
ನಿನ್ನವನೊ ಪುರುಷರಲ್ಲೇ ಒಬ್ಬನಲ್ಲೆ..
ಆದರೂ ನಮ್ಮ ಕತೆ ಏನು ಹೇಳುವುದೆ ಸೀತಕ್ಕ
ರಾಮ ನಿನ್ನ ಕೈಬಿಟ್ಟಂತೆ..
ಅವನ ಭಕ್ತರು ನಿನ್ನನ್ನು ಮರೆತರಲ್ಲೇ ಅಕ್ಕ!
ನನ್ನದಂತೂ ಕತೆ ಹೇಳುವಂತಿಲ್ಲ
ನನ್ನೂರ ಸೋದರಿಯರ ಕತೆಯೂ ಹೇಳುವಂತಿಲ್ಲ
ಬೆತ್ತಲಾದರು… ಗಂಡಸರ ಸೊಕ್ಕಿನ ತುತ್ತಾದರೂ
ಆಕ್ರೋಶಕ್ಕೆ ಬಲಿಯಾದರೂ, ಏನೇನೊ ಆದರು..
ಆದರೆ ಯಾರಿಗೂ ಕೇಳಿಸಲಿಲ್ಲ ನೋಡೆ..
ಮರ್ಯಾದಾ ಪುರುಷತ್ತೋಮನಂತಹವರು
ಯಾರೂ ಬರಲಿಲ್ಲ, ನಮ್ಮೂರ ಮಾನ ಕಾಯಲಿಲ್ಲ..
ನೋಡು ಸರಯು ನದಿಯ ಪಕ್ಕದಲ್ಲಿ
ನಿನ್ನ ಗಂಡನ ಹುಟ್ಟೂರಂತೆ
ಈಗಲ್ಲಿ ಅವನದ್ದೇ ಜಪ,
ಅಲ್ಲಿ ಅಷ್ಟೇ ಅಲ್ಲ
ನನ್ನ ಮಹಾಭಾರತದಲ್ಲೇ
ಮೊಳಗಿದೆಯಂತೆ ಅವನ ಗುಣಗಾನ
ಮಂದಿರ ಇನ್ನೂ ಕಟ್ಟುತ್ತಿದ್ದಾರೆ..
ಆದರೆ ಶುರುವಾಗಿದೆಯಂತೆ ಆರಾಧನೆ
ಏನು ವೈಭೋಗ, ಏನು ಸಂಭ್ರಮ
ಅದೇ ರಾಜ್ಯದಲ್ಲಿ ಎಷ್ಟು ಹೆಣ್ಣು ಮಕ್ಕಳು ಅತ್ತರು, ಸತ್ತರು ಕೇಳಿದವರಾರೆ ಅಕ್ಕ!
ದೇವಸ್ಥಾನದ ಗಂಧ, ಧೂಪ, ಪ್ರಸಾದಗಳು,
ಗಂಟೆ, ಜಾಗಟೆ, ಘೋಷಣೆಗಳು
ನಮ್ಮನ್ನು ಮರೆಸಿ ಬಿಟ್ಟವಲ್ಲೇ ಅಕ್ಕ
ಏನೇ ಇದು…..!
ನಿನ್ನದು ರಾಮಾಯಣ
ನನ್ನದು ಮಹಾಭಾರತ
ಆದರೆ ಈ ಭಾರತದಲ್ಲಿ
ನಿನ್ನ ರಾಮನಿಗೆ, ಅವನ ಊರಿಗೆ
ಸಿಕ್ಕ ಬೆಲೆ ನನ್ನ ಮಣಿಪುರಕ್ಕೆ ಇಲ್ಲ ನೋಡೆ
ಥೋ, ಏನು ಹೇಳಲೆ… ಹಣೆಬರಹ
ನಾನೊ ಗಂಡಸಿಗೆ ಸೆಡ್ಡು ಹೊಡೆದವಳು
ತೊಟ್ಟು ಬಿಲ್ಲು, ಹಿಡಿದು ಖಡ್ಗ
ಗಂಡು ತೊಳ್ಳೆ ನಡುಗಿಸಿದವಳು
ಆದರೆ ನನ್ನೂರು ಸುಟ್ಟು, ಬೆಂದು ಹೋಗುತ್ತಿದ್ದಾಗ
ಕರುಳು ಸುಟ್ಟು ಹೋಯಿತೆ ಅಕ್ಕ
ಯಾರೂ ನನ್ನೂರಿನ ಕಡೆಗೆ ತಲೆ ಹಾಕಲಿಲ್ಲ
ಕಣ್ಣೀರು ಹಾಕಲಿಲ್ಲ.
ಅಯೋಧ್ಯೆಯಲ್ಲಿ ಏನಿದೆಯೇ…
ಇದ್ದದ್ದನ್ನ ಕೆಡವಿ ಕಟ್ಟಿದ್ದಕ್ಕೆ
ಇಷ್ಟೇಕೆ ಹುಯಿಲೆ.. !
ನೂರಾರು ಬದುಕಿಗಳನ್ನು ಕುಟ್ಟಿ
ಕೆಡವಿದರಲ್ಲೇ ಅಕ್ಕ.. ನನ್ನೂರಿನಲ್ಲಿ
ಅಲ್ಲೂ ಏನನ್ನಾದರೂ ಕಟ್ಟಿ ಸಂಭ್ರಮಿಸಬಹುದಿತ್ತಲ್ಲೆ..
ಇಲ್ವೆ… ಸೀತಕ್ಕ..
ಇಲ್ಲ ಬಿಡು..
ನಾನು ನೀನು ಲೆಕ್ಕಕ್ಕಿಲ್ಲ
ಅದಕ್ಕೆ ನಮಗೆ ಗುಡಿ ಇಲ್ಲ
ಹಾಳಾಗಿ ಹೋಗಲಿ,
ನೆನಪಿಸಿಕೊಳ್ಳುವುದೂ ಇಲ್ಲ.
ಯಾಕೆ ಸೀತಕ್ಕ
ಮಾತಿಲ್ಲ.. ಕತೆಯಿಲ್ಲ..
ಈ ಗದ್ದಲದಲ್ಲಿ ಕೇಳಿಸುತ್ತಿಲ್ಲವೋ ಏನು?
ನಾವು ಸುಮ್ಮನಿದ್ದೂ ಇದ್ದೂ
ಹೀಗಾಗಿದೆ.. ಕಣೆ..
ಸೀತಕ್ಕ.. ಸೀತಕ್ಕ..
ಸೀತೆ ನಕ್ಕಳು…
“ಅಯ್ಯೋ ರಾಮ..”
ಕುಮಾರ್ ಎಸ್