ಹಿಂದೂಗಳೆಲ್ಲಾ ಒಂದು ಎನ್ನುವ ಉನ್ಮಾದ ಹುಟ್ಟಿಸಿ ವೈದಿಕಶಾಹಿ ನೇತೃತ್ವದ ಹಿಂದುತ್ವವನ್ನು ಸ್ಥಾಪಿಸುವುದೇ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಉದ್ದೇಶ. ಸಂಘದ ಅಂತಿಮ ಗುರಿ ತಲುಪಲು ರಾಮಮಂದಿರ ಎನ್ನುವುದು ಕೇವಲ ಒಂದು ಮೆಟ್ಟಿಲು ಮಾತ್ರ. ಈ ಮೆಟ್ಟಲಿಗೆ ಇಟ್ಟಿಗೆಯಂತೆ ಮೋದಿಯಂತವರೂ ಬಳಕೆಯಾಗುತ್ತಿದ್ದಾರೆ ಎಂಬುದು ಮೋದಿಭಕ್ತರಿಗೆ ಅಪಥ್ಯವಾದರೂ ಅದೇ ಸತ್ಯ. – ಶಶಿಕಾಂತ ಯಡಹಳ್ಳಿ
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಮೂರ್ತಿ ಪ್ರತಿಷ್ಠಾಪನೆಗೆ ಬಿಜೆಪಿ ಅತ್ಯಂತ ಉತ್ಸುಕವಾಗಿದೆ. ಇನ್ನೂ ಪೂರ್ತಿಯಾಗದೇ ಇರುವ ಅಪೂರ್ಣ ಮಂದಿರದಲ್ಲಿ ಇಷ್ಟೊಂದು ತರಾತುರಿಯಲ್ಲಿ ಯಾಕೆ ಈ ಪ್ರತಿಷ್ಠಾಪನೆ ಎಂದು ಯಾರಾದರೂ ಕೇಳಿದರೆ ಧರ್ಮದ್ರೋಹಿಗಳಾಗುತ್ತಾರೆ. ಇದೆಲ್ಲಾ ಲೋಕಸಭಾ ಚುನಾವಣೆಯ ಪೂರ್ವಯೋಜಿತ ಪೂರ್ವಭಾವಿ ತಯಾರಿ ಎಂಬುದು ಎಲ್ಲರಿಗೂ ಗೊತ್ತಿರುವಂತಹುದೆ. 2019 ರಲ್ಲಿ ಪುಲ್ವಾಮಾ, 2023ರಲ್ಲಿ ಶ್ರೀರಾಮ ಎನ್ನುವ ಮಾತು ಸತ್ಯವಾದುದಾಗಿದೆ. ಶ್ರೀರಾಮನ ಹೆಸರಲ್ಲಿ ಹಿಂದೂ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನದ ಭಾಗವಾಗಿಯೇ ಈ ಅಕಾಲಿಕ ಪ್ರತಿಷ್ಠಾಪನೆ ಎಂಬುದು ಬಿಜೆಪಿಯ ಚುನಾವಣಾ ಕಾರ್ಯತಂತ್ರವಾಗಿದೆ.
ರಾಮ ಮಂದಿರ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳಾದರೂ ಬೇಕಿದೆಯಂತೆ. ಪೂರ್ಣಗೊಂಡ ನಂತರವೇ ಶಾಸ್ತ್ರೋಕ್ತವಾಗಿ ಗರ್ಭಗುಡಿಯಲ್ಲಿ ದೇವರ ಮೂರ್ತಿ ಸ್ಥಾಪಿಸುವುದು ವೈದಿಕ ಧರ್ಮ ಸಂಪ್ರದಾಯ. ಈ ಸತ್ ಸಂಪ್ರದಾಯವನ್ನು ಮುರಿದು ಅವಧಿಗೆ ಮುಂಚೆಯೇ ಮೂರ್ತಿ ಪ್ರತಿಷ್ಠಾಪನೆ ಮಾಡಿ ತದನಂತರ ಮಂದಿರ ನಿರ್ಮಾಣ ಪೂರ್ಣಗೊಳಿಸುವುದನ್ನು ಯಾವ ಶಾಸ್ತ್ರ ಸಂಪ್ರದಾಯಗಳೂ ಒಪ್ಪುವುದಿಲ್ಲ. ಆದರೆ ಶ್ರೀರಾಮಚಂದ್ರನನ್ನು ಗುತ್ತಿಗೆ ಪಡೆದಂತೆ ಆಡುತ್ತಿರುವ ಬಿಜೆಪಿ ಪಕ್ಷ ಹಾಗೂ ಅದರ ಮಾತೃ ಸಂಘ ಆರೆಸ್ಸೆಸ್ಸ್ ಗಳಿಗೆ ಮತ್ತೆ ಹೇಗಾದರೂ ಮಾಡಿ ದೇಶದ ಅಧಿಕಾರ ಹಿಡಿಯಲೇಬೇಕೆಂಬ ತವಕ. ಈ ದೇಶದ ಜನರನ್ನು ಭಾವನಾತ್ಮಕ ಪ್ರಚೋದನೆಯ ಮೂಲಕವೇ ಸಮ್ಮೋಹಿತಗೊಳಿಸಲು ಸಾಧ್ಯವೆಂಬ ಸತ್ಯ ಈ ಸಂಘ ಪರಿವಾರದ ಪ್ರಮುಖ ಅಂಗಗಳಿಗೆ ಗೊತ್ತಿದೆ. ಹೀಗಾಗಿಯೇ ಈ ಅವಧಿಪೂರ್ವ ಮೂರ್ತಿ ಪ್ರತಿಷ್ಠಾಪನಾ ಕಣ್ಕಟ್ಟಿನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಜನವರಿ 22 ರಂದು ಅಯೋಧ್ಯೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಎಂಬುದು ನೆಪ ಮಾತ್ರ. ಮೋದಿ, ಶಾ ರವರ ಕೈಯಲ್ಲಿದೆ ಎಲ್ಲದರ ಸೂತ್ರ. ಅವರಿಬ್ಬರ ಸೂತ್ರ ಸರಸಂಘದವರ ಕೈಬೆರಳಲ್ಲಿದೆ ಎಂಬುದು ಅಸ್ಪಷ್ಟ ಚಿತ್ರ.
ಹತ್ತು ಸಾವಿರ ಜನರನ್ನು ಅಧಿಕೃತವಾಗಿ ಕುಂಭಾಭಿಷೇಕ ಸಮಾರಂಭಕ್ಕೆ ಅಯೋಧ್ಯೆಗೆ ಆಹ್ವಾನಿಸಲಾಗುತ್ತಿದೆಯಂತೆ. ಪ್ರಧಾನಿ ಮೋದಿಯವರು ಶ್ರೀರಾಮ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಇದಕ್ಕೆ ಸನಾತನವಾದಿ ವೈದಿಕರು ಅಸಹನೆ ಹೊಂದಿದ್ದಾರೆ. ಬೇರೆ ಬೇರೆ ಕಾರಣಗಳನ್ನು ಮುಂದಿಟ್ಟು ಈ ವರೆಗೆ ನಾಲ್ಕು ಮಂದಿ ಸ್ವಾಮೀಜಿಗಳು ತಮ್ಮ ವಿರೋಧವನ್ನು ದಾಖಲಿಸಿದ್ದಾರೆ.
ವರ್ಣಾಶ್ರಮ ಧರ್ಮದ ಪ್ರಕಾರ ಈ ಪೂಜೆ ಪುನಸ್ಕಾರ ಕುಂಭಾಭಿಷೇಕ ಮೂರ್ತಿ ಪ್ರತಿಷ್ಠಾಪನೆಗಳೆಲ್ಲಾ ಬ್ರಾಹ್ಮಣ ಕುಲಸಂಜಾತರ ಕಾಯಕ. ಆದರೆ ಮೋದಿಯಂತಹ ಅಬ್ರಾಹ್ಮಣ ಶ್ರೀರಾಮನ ಪವಿತ್ರ ಮೂರ್ತಿಯನ್ನು ಮುಟ್ಟಿ ಅಪವಿತ್ರಗೊಳಿಸುವುದಕ್ಕೆ ಸನಾತನಿಗಳ ಸಮ್ಮತಿ ಇಲ್ಲ. ಇದನ್ನು ವೈದಿಕ ಮತದ ಧಾರ್ಮಿಕ ಪೀಠದವರು ಬಹಿರಂಗವಾಗಿ ವಿರೋಧಿಸದೇ ಇದ್ದರೂ ಓಡಿಶಾದ ಪುರಿ ಮಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಬಹಿರಂಗವಾಗಿಯೇ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ವೈದಿಕರಲ್ಲದ ಮೋದಿಯವರು ಮುಟ್ಟಿದ ಮೂರ್ತಿಯನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನವನ್ನು ತಿರಸ್ಕರಿಸಿದ್ದಾರಂತೆ. “ನಾನು ಅಲ್ಲಿ ಹೋಗಿ ಏನು ಮಾಡಬೇಕು? ಪ್ರಧಾನಿ ಮೋದಿ ಮೂರ್ತಿಯನ್ನು ಮುಟ್ಟಿ ಸ್ಥಾಪಿಸುವಾಗ ನಾನು ಅವರನ್ನು ಶ್ಲಾಘಿಸಬೇಕೆ? ಶಾಸ್ತ್ರಗಳಲ್ಲಿ ಹೇಳಿರುವ ನಿಯಮಗಳಂತೆ ಮೂಲ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಲ್ಲವೇ? ಎಂದು ಪುರಿ ಮಠದ ಸ್ವಾಮಿಗಳು ತಮ್ಮ ನಿರಾಕರಣೆಗೆ ಸಮರ್ಥನೆಗಳನ್ನು ಕೊಟ್ಟಿದ್ದಾರೆ. ಇದೇ ವೈದಿಕಶಾಹಿ ಧರ್ಮ ಸಂಹಿತೆ. ವರ್ಣಾಶ್ರಮ ಧರ್ಮ ಸೂಕ್ಷ್ಮ.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯನ್ನು ಇದೀಗ ದೇಶದ ನಾಲ್ಕು ಶಂಕರಾಚಾರ್ಯರು ಬಹಿಷ್ಕರಿಸಿದ್ದಾರೆ. ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜರು ಹೀಗೆ ಹೇಳಿದ್ದಾರೆ, “ನಾವು ನಾಲ್ಕು ಶಂಕರಾಚಾರ್ಯರೂ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ. ಅದಕ್ಕೆ ಕಾರಣಗಳು ಅನೇಕ. ಮೊದಲನೆಯದಾಗಿ, ಮಂದಿರ ನಿರ್ಮಾಣ ಅಪೂರ್ಣವಾಗಿದೆ. ಅಪೂರ್ಣ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಶಾಸ್ತ್ರಕ್ಕೆ ವಿರುದ್ಧವಾದುದು. ಅಲ್ಲದೆ, ಕೆಲಸ ಪೂರ್ತಿಯಾಗದೆ ಅದನ್ನು ಉದ್ಘಾಟಿಸುವ ತುರ್ತು ಏನೂ ಇರುವುದಿಲ್ಲ. ಎರಡನೆಯದಾಗಿ, ಅದನ್ನು ಸಾಧು ಸಂತರು ಉದ್ಘಾಟಿಸಬೇಕೇ ಹೊರತು ಯಾರು ಯಾರೋ ಅಲ್ಲ. ನಾವು ಧರ್ಮ ಶಾಸ್ತ್ರದಲ್ಲಿ ನಂಬಿಕೆ ಇರುವವರು. ನಮಗೆ ಅದೇ ಶ್ರೇಷ್ಠ. ಅದಕ್ಕೆ ವಿರುದ್ಧವಾಗಿ ಹೋಗುವಂತಿಲ್ಲ. ನಾವು ರಾಮ ವಿರೋಧಿಯೂ ಅಲ್ಲ, ಮೋದಿ ವಿರೋಧಿಯೂ ಅಲ್ಲ, ಧರ್ಮಶಾಸ್ತ್ರಕ್ಕೆ ಅನುಗುಣವಾಗಿ ನಡೆಯದಿರುವುದರ ವಿರೋಧಿ. ಮೂರನೆಯದಾಗಿ, ಈ ಕಾರ್ಯಕ್ರಮಕ್ಕೆ ಶಂಕರಾಚಾರ್ಯರ ಅಗತ್ಯವಿಲ್ಲ, ಅದು ರಾಮಾನಂದ ಪಂಥದವರದ್ದು ಎಂದು ಟ್ರಸ್ಟ್ ಮುಖ್ಯಸ್ಥ ಚಂಪತ್ ರಾಯ್ ಹೇಳಿದ್ದಾರೆ. ಇದು ಕೇವಲ ರಾಮಾನಂದ ಪಂಥದವರದ್ದಾದರೆ ಆ ಪಂಥದವರಲ್ಲವಾದ ಚಂಪತ್ ರಾಯ್ ಮತ್ತು ಅವರ ಸಂಗಾತಿಗಳು ಅಲ್ಲಿ ಏಕೆ ಇದ್ದಾರೆ? ಅವರು ತಕ್ಷಣ ರಾಜಿನಾಮೆ ಕೊಟ್ಟು ಅದನ್ನು ಆ ಪಂಥದವರಿಗೆ ಒಪ್ಪಿಸಲಿ. ಇದು ಕೇವಲ ಆ ಪಂಥದವರಿಗೆ ಸೇರಿದ್ದಾದರೆ ನಮ್ಮಿಂದ ಚಂದಾ ಸಂಗ್ರಹಿಸಿದ್ದು ಏಕೆ? ನಿಜವಾಗಿ ಅದರ ಉಸ್ತವಾರಿ ನೋಡಿಕೊಳ್ಳಬೇಕಾದುದು ನಿರ್ಮೋಹಿ ಅಖಾರಾದವರು. ಅವರಿಗೆ ಒಪ್ಪಿಸಲಿ. ಕನಿಷ್ಠ ನೈತಿಕತೆಯಾದರೂ ಇದ್ದರೆ ಚಂಪತ್ ರಾಯ್ ಮತ್ತು ಅವರ ಸಂಗಾತಿಗಳು ತಕ್ಷಣ ರಾಜಿನಾಮೆ ನೀಡಬೇಕು”.
ಆದಿವಾಸಿ ವಿಧವಾ ಮಹಿಳೆ ಎನ್ನುವ ಕಾರಣಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮುರವರನ್ನು ಹೊಸ ಸಂಸತ್ ಭವನದ ಉದ್ಘಾಟನಾ ವಿಧಿವಿಧಾನಗಳಿಂದ ದೂರವಿಟ್ಟಿದ್ದೂ ಸಹ ಇದೇ ವೈದಿಕಶಾಹಿ ಪುರೋಹಿತರು. ಈಗ ಹಿಂದುಳಿದ ವರ್ಗದವನೆಂಬ ಕಾರಣಕ್ಕೆ ಪ್ರಧಾನಿ ಮೋದಿಯವರಿಂದಾಗುವ ಮೂರ್ತಿ ಪ್ರತಿಷ್ಠಾಪನೆಯನ್ನೂ ವಿರೋಧಿಸುತ್ತಿರುವುದೂ ಬ್ರಾಹ್ಮಣ್ಯ ಧರ್ಮ ಕಾರಣಕ್ಕೆ.
ಶಿವಾಜಿಯಂತಹ ಶಿವಾಜಿ ರಾಜರ ಪಟ್ಟಾಭಿಷೇಕಕ್ಕೇ ಒಬ್ಬನೇ ಒಬ್ಬ ಪುರೋಹಿತ ಬರದೇ ಬಹಿಷ್ಕರಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಪ್ರಮುಖ ಮಂದಿರಗಳಿಗೆ ಅಬ್ರಾಹ್ಮಣ ಪ್ರಧಾನಿಗಳು ಭೇಟಿಕೊಟ್ಟ ನಂತರ ದೇವಸ್ಥಾನವನ್ನೇ ಶುದ್ಧೀಕರಿಸಿದ ಘಟನೆಗಳಿಗೆ ಚರಿತ್ರೆ ಸಾಕ್ಷಿಯಾಗಿದೆ. ರಾಮಮಂದಿರಕ್ಕಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಹೋರಾಡಿದವರ, ಪ್ರಾಣತೆತ್ತವರ ಕುಟುಂಬಗಳು ರಾಮದೇವರ ಮಂದಿರದ ಹೊರಗೇ ಇರಬೇಕು ಹಾಗೂ ವೈದಿಕ ಪುರೋಹಿತರು ಮಾತ್ರ ಗರ್ಭಗುಡಿಯಲ್ಲಿ ಮೂರ್ತಿ ಪೂಜೆಗೆ ಮೀಸಲಾಗಿರಬೇಕು ಎನ್ನುವುದೇ ವರ್ಣಾಶ್ರಮ ಧರ್ಮದ ಮೂಲ ಮಂತ್ರವಾಗಿದೆ. ಪ್ರಧಾನಿಯಾದರೇನು ರಾಷ್ಟ್ರಪತಿಯಾದರೇನು ಎಲ್ಲರ ಸ್ಥಾನ ಮಂದಿರದ ಹೊರಗೆ.
ರಾಮಜನ್ಮಭೂಮಿ ಹೋರಾಟಕ್ಕೆ ಅಸಂಖ್ಯಾತ ಕರಸೇವಕರು ಬೇಕು, ಮಂದಿರ ನಿರ್ಮಿಸಲು ಅಗಣಿತ ಹಿಂದೂಗಳ ಪರಿಶ್ರಮದ ಫಲಬೇಕು. ಕೇಂದ್ರ ಸರಕಾರದ ಕೃಪಾಕಟಾಕ್ಷ ಇರಲೇಬೇಕು. ಆದರೆ ದೇವರ ಮೂರ್ತಿ ಮುಟ್ಟಲು ಪುರೋಹಿತರೇ ಆಗಬೇಕು. ಪ್ರತಿಷ್ಠಾಪನೆಗೆ ವೈದಿಕರೇ ಇರಬೇಕು. ಇಂತಹ ವೈದಿಕಶಾಹಿ ಹುನ್ನಾರಗಳಿಗೆ ಹಿಂದೂ ಧರ್ಮೀಯರು ಎನ್ನುವವರು ಜೈ ಎನ್ನಬೇಕು.
ಹಿಂದುತ್ವವಾದ ಎಂದರೆ ಇದೆ. ಹಿಂದೂಗಳೆಲ್ಲಾ ಒಂದು ಎನ್ನುವ ಉನ್ಮಾದ ಹುಟ್ಟಿಸಿ ವೈದಿಕಶಾಹಿ ನೇತೃತ್ವದ ಹಿಂದುತ್ವವನ್ನು ಸ್ಥಾಪಿಸುವುದೇ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಉದ್ದೇಶ. ಆ ಉದ್ದೇಶದ ಈಡೇರಿಕೆಗೆ ಮೋದಿಯಂತಹ ಜನಪ್ರಿಯ ನಾಯಕರೂ ಬಳಸಲ್ಪಡುತ್ತಾರೆ ಎಂಬುದು ಮೋದಿಭಕ್ತರಿಗೆ ಅಪಥ್ಯವಾದರೂ ಅದೇ ಸತ್ಯ. ಅಸಂಖ್ಯಾತ ಹಿಂದೂಗಳ ಭಾವಪ್ರಚೋದನೆ ಮಾಡುವ ಮೂಲಕ ದೇವರು ಧರ್ಮದ ಹೆಸರಲ್ಲಿ ಮನುಧರ್ಮವನ್ನು ಮತ್ತೆ ಜಾರಿಗೆ ತಂದು ವರ್ಣಾಶ್ರಮ ಪದ್ಧತಿಯನ್ನು ಸಂವಿಧಾನವನ್ನಾಗಿ ಘೋಷಿಸುವುದೇ ಸಂಘದ ಅಂತಿಮ ಆಶಯವಾಗಿದೆ. ಈ ಉದ್ದೇಶದ ಈಡೇರಿಕೆಗಾಗಿಯೇ ಮತಾಂಧತೆ, ಮತಬೇಧ, ಅನ್ಯಧರ್ಮ ದ್ವೇಷವನ್ನು ವ್ಯಾಪಕವಾಗಿ ಸೃಷ್ಟಿ ಮಾಡಲಾಗುತ್ತಿದೆ. ಅದರ ಅನುಷ್ಠಾನಕ್ಕೆ ಅಬ್ರಾಹ್ಮಣರನ್ನೇ ಪರಿಕರವಾಗಿ ಬಳಸಲಾಗುತ್ತಿದೆ. ಸಂಘದ ಅಂತಿಮ ಗುರಿ ತಲುಪಲು ರಾಮಮಂದಿರ ಎನ್ನುವುದು ಕೇವಲ ಒಂದು ಮೆಟ್ಟಿಲು ಮಾತ್ರ. ಈ ಮೆಟ್ಟಲಿಗೆ ಇಟ್ಟಿಗೆಯಂತೆ ಮೋದಿಯಂತವರೂ ಬಳಕೆಯಾಗುತ್ತಿದ್ದಾರೆ. ಹಿಂದುತ್ವವಾದಿಗಳ ಹಿಂದೂರಾಷ್ಟ್ರದ ಹುನ್ನಾರಕ್ಕೆ ಅಸಂಖ್ಯಾತ ಹಿಂದೂಗಳು ಕಾಲಾಳುಗಳಾಗುತ್ತಿದ್ದಾರೆ. ಈ ಸತ್ಯ ಭಾವಪ್ರಚೋದನೆಗೊಳಗಾದ ಸಮೂಹ ಸನ್ನಿಪೀಡಿತರಿಗೆ ಗೊತ್ತಾಗುವಷ್ಟರಲ್ಲಿ ಈ ದೇಶದಲ್ಲಿ ಪ್ರಜಾಪ್ರಭುತ್ವ ಅಳಿದು ಫ್ಯಾಸಿಸ್ಟ್ ಪ್ರಭುತ್ವ ಆಡಳಿತಕ್ಕೆ ಬಂದಿರುತ್ತದೆ. ಸಂವಿಧಾನದ ಬದಲು ಮನುಸ್ಮೃತಿ ಜಾರಿಯಾಗಿರುತ್ತದೆ. ಮತ್ತೆ ವರ್ಣಾಶ್ರಮ ಆಧಾರಿತ ಅಸಮಾನ ವ್ಯವಸ್ಥೆ ಹೇರಲ್ಪಡುತ್ತದೆ. ವೈದಿಕಶಾಹಿಯ ಹಿಂದುತ್ವದ ಹೋಮಕ್ಕೆ ಹಿಂದೂಗಳು ಹವಿಸ್ಸಾಗುತ್ತಾರೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ ಮತ್ತು ಪತ್ರಕರ್ತರು