ಬೆಂಗಳೂರು: ಬಸ್ ಪ್ರಯಾಣ ದರ ಶೇ.15 ರಷ್ಟು ಏರಿಕೆಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ.ವಾಗಿದ್ದು, ನಮ್ಮ ಸರ್ಕಾರದ ಮೇಲೆ ರೂ. 5,900 ಕೋಟಿ ಸಾಲವನ್ನು ಬಿಟ್ಟು ಹೋಗಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬಸ್ ಪ್ರಯಾಣ ದರ ಏರಿಕೆ ಕುರಿತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದೈನಂದಿನ ನಿರ್ವಹಣಾ ವೆಚ್ಚ ಮತ್ತು ನೌಕರರ ವೇತನ ಹೆಚ್ಚಳ ಮಾಡಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಪ್ರತಿದಿನದ ಡೀಸೆಲ್ ವೆಚ್ಚ ರೂ. 9 ಕೋಟಿಯಿಂದ ರೂ. 13 ಕೋಟಿ ತಗುಲುತ್ತದೆ. ಅದೇ ರೀತಿ ವೇತನ ರೂ. 12 ಕೋಟಿಯಿಂದ 18 ಕೋಟಿಯಾಗುತ್ತದೆ. ಪ್ರತಿದಿನ ಸಾರಿಗೆ ನಿಗಮಗಳಿಗೆ ರೂ. 10 ಕೋಟಿಗೂ ಹೆಚ್ಚು ಹೊರೆಯಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ 2020ರಲ್ಲಿ ರೂ. 60 ಇದ್ದ ಡೀಸೆಲ್ ದರವನ್ನು ಈಗ ರೂ. 90 ಕ್ಕೆ ಹೆಚ್ಚಿಸಿದೆ. ಡೀಸೆಲ್ ದರವನ್ನು ಕಡಿಮೆ ಮಾಡಿ ನಂತರ ಬಿಜೆಪಿಯವರು ಟಿಕೆಟ್ ದರ ಏರಿಕೆ ಕುರಿತು ಮಾತನಾಡಲು ಅವಕಾಶ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಬಿಜೆಪಿ ಸರ್ಕಾರ ಬೃಹತ್ ಪ್ರಮಾಣದ ಸಾಲ ಮಾಡದಿದ್ದರೆ ನಮ್ಮ ಸರ್ಕಾರ ದರ ಏರಿಕೆ ಮಾಡುತ್ತಿರಲಿಲ್ಲ. 2020 ಜನವರಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶೇ. 12 ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ದರ ಏರಿಕೆ ಕುರಿತು ಪ್ರಶ್ನಿಸುವ ನೈತಿಕತೆ ಅವರಿಗೆ ಇಲ್ಲ ಎಂದರು.
ದೈನಂದಿನ ಬಸ್‌ಗಳ ನಿರ್ವಹಣೆ ಮತ್ತು ಸಂಬಳದ ವೆಚ್ಚಕ್ಕೆ ಹೋಲಿಸಿದರೆ ಟಿಕೆಟ್ ಗಳಿಂದ ಬರುವ ಆದಾಯ ಕಡಿಮೆಯಾಗಿದೆ. ಹೀಗಾಗಿ ದರ ಹೆಚ್ಚಳ ಅಗತ್ಯವಾಗಿದೆ. ಶಕ್ತಿ ಯೋಜನೆಗೆ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಹಣ ನೀಡುತ್ತಿದ್ದು, ಅದಕ್ಕೂ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ದರ ಪರಿಷ್ಕರಿಸುವಂತೆ ಸಾರಿಗೆ ನಿಗಮಗಳ ನೌಕರರೂ ಬೇಡಿಕೆ ಮುಂದಿಟ್ಟಿದ್ದರು ಎಂದರು.
ಮಹಿಳೆಯರಿಗೆ ಒದಗಿಸುವ ಯೋಜನೆಗಳಿಗೆ ಬಿಜೆಪಿ ಸದಾ ವಿರುದ್ಧವಾಗಿದೆ. ಅವರು ಸರ್ಕಾರದ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಪ್ರಯಾಣ ದರ ಹೆಚ್ಚಳ ಮಾಡಬೇಕೆಂದು ರಾಜ್ಯದ ನಾಲ್ಕು ನಿಗಮಗಳ ಆರು ತಿಂಗಳ ಹಿಂದೆಯೇ ಬೇಡಿಕೆ ಸಲ್ಲಿಸಿದ್ದವು, ಅದನ್ನು ಈಗ ಪರಿಗಣಿಸಲಾಗಿದೆ ಎಂದು ಸಚಿವರು ತಿಳಿಸಿದರು.
2014ರಲ್ಲಿ ನಾನು ಸಚಿವನಾಗಿದ್ದಾಗ ಬಿಎಂಟಿಸಿ ಪ್ರಯಾಣ ದರ ಹೆಚ್ಚಿಸಲಾಗಿತ್ತು. ಡೀಸೆಲ್ ದರ ಇಳಿಕೆಯಾದಾಗ ಪ್ರಯಾಣ ದರವನ್ನೂ ಇಳಿಸಲಾಗಿತ್ತು. ಕಳೆದ 10 ವರ್ಷಗಳಿಂದ ದರ ಪರಿಷ್ಕರಣೆ ಮಾಡಿರಲಿಲ್ಲ. 2020ರಲ್ಲಿ ಶೇ.12ರಷ್ಟು ಏರಿಕೆ ಮಾಡಲಾಗಿತ್ತು. ಆಗ ಯಡಿಯೂರಪ್ಪ ಸಿಎಂ ಆಗಿದ್ದರು. ಇವತ್ತು ಪ್ರತಿಭಟನೆ ಮಾಡಿದ ಅಶೋಕ್ ಸಾರಿಗೆ ಸಚಿವರಾಗಿದ್ದರು ಎಂದು ನೆನಪಿಸಿದರು. ಬಿಜೆಪಿಯವರು ಮಹಿಳಾ ವಿರೋಧಿಗಳು, ಮನುವಾದಿಗಳು. ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆ ಒಪ್ಪಲ್ಲ. ಬಿಜೆಪಿಯವರ 5900 ಕೋಟಿ ಸಾಲ ಇಲ್ಲದೇ ಹೋಗಿದ್ರೆ. ನಮ್ಮ ಸರ್ಕಾರ ಬಸ್ ದರ ಹೆಚ್ಚಳ ಮಾಡ್ತಿರಲಿಲ್ಲ. ಬಿಜೆಪಿಯವರು ಸಾಲ ಮಾಡಿದ್ರಿಂದ ದರ ಏರಿಸಿದ್ದೇವೆ. ಬೆಂಗಳೂರಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ.