ಮೈಸೂರು: ಬಿಜೆಪಿ ನಡೆಸುತ್ತಿರುವ ಯಾತ್ರೆಗಳಿಂದ ಪಕ್ಷಕ್ಕೆ ಯಾವುದೇ ರಾಜಕೀಯ ಲಾಭ ದೊರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು.
ಬಿಜೆಪಿ ಮುಖಂಡರು ಧರ್ಮಸ್ಥಳ ಯಾತ್ರೆ ಮತ್ತು ಮೈಸೂರು ಚಲೋ ಯಾತ್ರೆ ನಡೆಸಿದ್ದಾರೆ. ಇಂತಹ ಯಾತ್ರೆಗಳಿಂದ ರಾಜಕೀಯ ಲಾಭ ಸಿಗುತ್ತದೆ ಎಂದು ಆ ಪಕ್ಷದ ಮುಖಂಡರು ಭಾವಿಸಿದ್ದಾರೆ. ಧರ್ಮಸ್ಥಳ ಪ್ರಕರಣ ಕುರಿತು ತನಿಖೆಗಾಗಿ ಎಸ್ ಐ ಟಿ ರಚಿಸಿದಾಗ ವಿರೋಧಿಸಲಿಲ್ಲ. ನಂತರದ ಬೆಳವಣಿಗೆಯಲ್ಲಿ ಯಾವುದೇ ಕುರುಹು ಸಿಗುವುದಿಲ್ಲ ಎಂದು ತಿಳಿದು ಈಗ ವಿರೋಧಿಸುತ್ತಿದ್ದಾರೆ. ಇದು ಬಿಜೆಪಿ ಮುಖಂಡರ ಡೋಂಗಿತನವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ನಾನೂ ಕೂಡ ಹಿಂದೂ. ನಮ್ಮೂರಿನಲ್ಲಿ ರಾಮಮಂದಿರ ಕಟ್ಟಿಸಿದ್ದೇವೆ. ಹಿಂದು ಎಂದರೆ ರಾಜಕೀಯ, ಅಪಪ್ರಚಾರ ಮಾಡುವುದಲ್ಲ, ಸುಳ್ಳು ಹೇಳುವುದಲ್ಲ. ನಿಜವಾದ ಹಿಂದೂ ಆದವನಿಗೆ ಮನಷ್ಯತ್ವವಿರಬೇಕು ಎಂದು ತಿರುಗೇಟು ನೀಡಿದರು.
ಯಾತ್ರೆ ಮಾಡುವುದರಿಂದ ಹಿಂದೂಗಳೆಲ್ಲ ಒಟ್ಟಾಗಿ ನಮಗೆ ಮತ ಹಾಕುತ್ತಾರೆ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಆದರೆ ಜನರಿಗೆ ಇವರ ಡೋಂಗಿತನ ಅರ್ಥವಾಗಿದೆ. ಬಿಜೆಪಿ ದಸರಾ ಹಬ್ಬದಲ್ಲೂ ರಾಜಕಾರಣ ಮಾಡುತ್ತಿದೆ. ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ದೊರಕಿ ಗೌರವ ತಂದುಕೊಟ್ಟಿದ್ದಾರೆ. ಬಿಜೆಪಿಯ ರಾಜಕಾರಣ ದಸರಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿರಬಹುದು. ಆದರೆ ದಸರಾ ಹಬ್ಬ ನಾಡ ಹಬ್ಬ ಎನ್ನುವುದನ್ನು ಮರೆಯಬಾರದು. ಎಲ್ಲರೂ ಸೇರಿ ಮಾಡುವುದೇ ನಾಡ ಹಬ್ಬ. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು ಸೇರಿ ಆಚರಿಸುವ ಹಬ್ಬ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.