Saturday, July 27, 2024

ಬೆಂಗಳೂರಿಗೆ ಇಂದು ಆರೆಂಜ್ ಅಲರ್ಟ್: ಮಳೆ ಬಂದರೂ RCB-CSK ನಾಕೌಟ್ ಪಂದ್ಯಕ್ಕಿಲ್ಲ ತೊಂದರೆ!

Most read

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮೇ 18) ರಾತ್ರಿ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಸೆಣಸಲಿದೆ. ಪ್ಲೇ ಆಫ್ ಹಂತಕ್ಕೆ ಹೋಗುವುದಕ್ಕೆ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದ್ದು, ಇದರ ಫಲಿತಾಂಶವೇ ಎಲ್ಲವನ್ನೂ ನಿರ್ಧರಿಸಲಿದೆ. ಈ ನಡುವೆ ಬೆಂಗಳೂರಲ್ಲಿ ಮೂರು ನಾಲ್ಕು ದಿನಗಳ ಕಾಲ ಭಾರೀ ಮಳೆಯ (Heavy Rain) ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ರಾಜ್ಯ ಹಾವಾಮಾನ ಇಲಾಖೆ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು ಅಭಿಮಾನಿಗಳನ್ನು ಚಿಂತೆಗೆ ಈಡುಮಾಡಿದೆ

ಮೇ 18ರಂದು ಅಂದ್ರೆ ನಾಳೆ ಮಳೆಯಬ್ಬರ ಬೆಂಗಳೂರಲ್ಲಿ ಜೋರಾಗಿ ಇರಲಿದೆಯಂತೆ. ಹೀಗಾದರೆ  ಆರ್‌ಸಿ‌ಬಿ ಪ್ಲೇ ಆಫ್ (RCB Play Off) ಕನಸಿಗೆ ತಣ್ಣೀರು ಎರಚಿದಂತಾಗಲಿದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಸಿ‌ಎಸ್‌ಕೆ ಪ್ಲೇ ಆಫ್ ಗೆ ಏರಲಿದೆ. ಇದು ಆರ್‌ಸಿ‌ಬಿ ಅಭಿಮಾನಿಗಳನ್ನು ಚಿಂತೆಗೆ ಈಡುಮಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯುತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆ ಇರುವುದು ವಿಶೇಷವಾಗಿದ್ದು, ಸದ್ಯ ಬೆಂಗಳೂರು ಹವಾಮಾನದ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಯಲ್ಲಿದೆ. ಈ ವ್ಯವಸ್ಥೆಯನ್ನು ದೇಶದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಮಳೆ ಬಂದು ನಿಂತ ನಂತರ, ಮೈದಾನದಲ್ಲಿ ಎಷ್ಟೇ ಪ್ರಮಾಣದ ನೀರು ಇದ್ದರೂ ಕೇವಲ 15 ನಿಮಿಷಗಳ ಅವಧಿಯಲ್ಲಿ ಸಬ್‌ಏರ್ ವ್ಯವಸ್ಥೆಯು ಮೈದಾನವನ್ನು ಆಟಕ್ಕೆ ಸಿದ್ಧಪಡಿಸುವುದು ವಿಶೇಷ.

ಸಬ್ ಏರ್ ಸಿಸ್ಟಮ್ಸ್ ನಿರ್ಮಿಸಿದ ಉಪ ಮೇಲ್ಮೈ ಗಾಳಿ ಮತ್ತು ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆ ಇದಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದನ್ನು 2017 ರಲ್ಲಿ ಅಳವಡಿಸಲಾಗಿದೆ. ಇದು ಪ್ರತಿ ನಿಮಿಷಕ್ಕೆ 10,000 ಲೀಟರ್ ಪ್ರಮಾಣದಲ್ಲಿ ನೆಲದಿಂದ ನೀರನ್ನು ಸ್ಥಳಾಂತರಿಸಬಲ್ಲದು. ಈ ವ್ಯವಸ್ಥೆ ಅಳವಡಿಸುವುದಕ್ಕೆ 4.25 ಕೋಟಿ ರೂಪಾಯಿ ವ್ಯಯಿಸಿದೆ. ಇದಕ್ಕಾಗಿ 4.5 ಕಿ.ಮೀ. ಪೈಪ್‌ ಬಳಸಲಾಗಿದೆ.

ಮೇ 18 ರಿಂದ 20ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ಕೊಡಲಾಗಿದೆ. ಜೊತೆಗೆ ಮೈಸೂರು, ಮಂಡ್ಯ, ಕೋಲಾರ, ಬೆಂ ಗ್ರಾಮಾಂತರದಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಮಳೆ ತಜ್ಞರು ಹೇಳಿದ್ದಾರೆ.

More articles

Latest article